
ಶಿವಮೊಗ್ಗ: ನಗರದ ಕನ್ಸರ್ವೆನ್ಸಿ, ಪಾರ್ಕ್‌ಗಳಲ್ಲಿ ಹಳೆಯ ಪಳೆಯುಳಿಕೆಗಳ ರೀತಿ, ಖಾಲಿ ಡಬ್ಬಗಳ ಮಾದರಿಗಳು ಹಾಳು ಬಿದ್ದಿರುವುದು ಕಾಣ ಸಿಗುತ್ತಿದೆ. ಕುತೂಹಲ ತಾಳದೇ ಹತ್ತಿರ ಹೋದರೆ ದುರ್ನಾತದ ಸ್ವಾಗತ. ವಿವರ ಕೆದಕಿದರೆ ಅವು ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯಡಿ ಕೆಲವೇ ವರ್ಷಗಳ ಹಿಂದೆ ತಂದು ಅಳವಡಿಸಿದ್ದ ಇ–ಟಾಯ್ಲೆಟ್!
ಆದರೆ, ಈ ಆಕರ್ಷಕ ನಿರ್ಮಾಣಗಳು ಇಂದು ‘ಸ್ಮಾರ್ಟ್ ಸಿಟಿ’ಯ ಹೆಸರಲ್ಲಿ ಶಿವಮೊಗ್ಗದ ಜನರಿಗೆ ಮಾಡಿರುವ ಮಹಾನ್ ವಂಚನೆಯ ಕುರುಹಾಗಿ ಕಾಣ ಸಿಗುತ್ತಿವೆ. ಭ್ರಷ್ಟಾಚಾರದ ಪೆಡಂಭೂತಕ್ಕೆ ಕೇಂದ್ರ ಸರ್ಕಾರದ ಸುಂದರ ಯೋಜನೆಯ ₹1,000 ಕೋಟಿಗೂ ಹೆಚ್ಚು ಹಣ ತುಂಗಾರ್ಪಣವಾದ ಕಥನದ ಭಾಗವಾಗಿ ಗೋಚರವಾಗುತ್ತಿವೆ.
ಏನು ಇವು ಇ–ಟಾಯ್ಲೆಟ್: ಪರಿಸರ ಸ್ನೇಹಿ, ನೀರಿನ ಮಿತ ಬಳಕೆ ಹಾಗೂ ಸ್ವಚ್ಛತೆಗೆ ಪೂರಕವಾಗಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ರೂಪುಗೊಂಡ ಇ–ಟಾಯ್ಲೆಟ್‌ಗಳು ಸಂಪೂರ್ಣ ಸೆನ್ಸಾರ್ ಆಧಾರಿತವಾಗಿ ಕಾರ್ಯನಿರ್ವಹಿಸುತ್ತವೆ. ಅವುಗಳ ಬಳಕೆಯ ಬಗ್ಗೆ ಅಗತ್ಯ ಮಾಹಿತಿ ಹಾಗೂ ತಿಳಿವಳಿಕೆಯೂ ಶೌಚಾಲಯಗಳನ್ನು ಬಳಕೆ ಮಾಡುವವರಿಗೂ ಬೇಕಾಗಿದೆ.
ಶಿವಮೊಗ್ಗದಲ್ಲಿ ಇ–ಟಾಯ್ಲೆಟ್: ಸ್ಮಾರ್ಟ್‌ಸಿಟಿ ಯೋಜನೆಯಡಿ ಶಿವಮೊಗ್ಗದ ವಿವಿಧೆಡೆ 24 ಇ–ಟಾಯ್ಲೆಟ್‌ಗಳ ಅಳವಡಿಸಲಾಗಿದೆ. ಪ್ರತೀ ಟಾಯ್ಲೆಟ್‌ಗೆ ₹4.5 ಲಕ್ಷದಂತೆ ಬರೋಬ್ಬರಿ ₹1 ಕೋಟಿ ಖರ್ಚು ಮಾಡಲಾಗಿದೆ.
ವಿಶೇಷವೆಂದರೆ ಬಹಳಷ್ಟು ಕಡೆ ಇ–ಟಾಯ್ಲೆಟ್‌ಗಳನ್ನು ವಸ್ತುಪ್ರದರ್ಶನದಲ್ಲಿ ಇಡುವ ಮಾದರಿಯಂತೆ ಇಟ್ಟು ಹೋಗಿದ್ದಾರೆ. ಆ ಶೌಚಾಲಯಗಳಿಗೆ ನೀರು, ವಿದ್ಯುತ್ ಹಾಗೂ ಒಳಚರಂಡಿ ಸಂಪರ್ಕವನ್ನೇ ಕಲ್ಪಿಸಿಲ್ಲ. ಹೀಗಾಗಿ ಹೆಚ್ಚಿನವು ಹಾಳು ಬಿದ್ದಿವೆ. ಚೆನ್ನಾಗಿರುವ ಒಂದೆರಡು ಬಳಕೆ ಆಗುತ್ತಿಲ್ಲ.
ಹೆಚ್ಚಿನ ಶೌಚಾಲಯಗಳಲ್ಲಿನ ಸೆನ್ಸಾರ್ ಆಧಾರಿತ ಉಪಕರಣಗಳ ಕಳವು ಮಾಡಲಾಗಿದೆ. ಬಹಳಷ್ಟು ಕನ್ಸರ್ವೆನ್ಸಿಗಳಲ್ಲಿ ನೀರಿನ ಸಂಪರ್ಕ ಇಲ್ಲದ ಶೌಚಾಲಯಗಳನ್ನೇ ಬಹಿರ್ದೆಸೆಗೆ ಬಳಸಿದ್ದಾರೆ. ಹೀಗಾಗಿ ಅವುಗಳು ಒಳಗೆ ಕಾಲಿಡದ ಸ್ಥಿತಿಯಲ್ಲಿವೆ. ಅವುಗಳ ಒಳಗೆ ಹೋಗಲು ಆಗದೇ ಸುತ್ತಲೂ ಬಹಿರ್ದೆಸೆ, ಮೂತ್ರ ವಿಸರ್ಜನೆ ಮಾಡಲಾಗುತ್ತಿದೆ. ಇದರಿಂದ ಕನ್ಸರ್ವೆನ್ಸಿಗಳಲ್ಲಿ ಓಡಾಟವೂ ಸಾಧ್ಯವಿಲ್ಲವಾಗಿದೆ.
ಇ–ಶೌಚಾಲಯಗಳ ಸುತ್ತಲೂ ಬಯಲು ಶೌಚಾಲಯ ಅಭಿವೃದ್ಧಿ ಆಗಿದೆ. ಅಲ್ಲೆಲ್ಲ ಹಂದಿ, ನಾಯಿಗಳು ಬೀಡು ಬಿಡುತ್ತಿವೆ. ಹೀಗಾಗಿ ಕನ್ಸರ್ವೆನ್ಸಿಯ ಅಕ್ಕಪಕ್ಕದವರು ಸ್ಮಾರ್ಟ್ ಸಿಟಿ ಸಂಸ್ಥೆಗೆ ಹಿಡಿಶಾಪ ಹಾಕುತ್ತಲೇ ದಿನ ದೂಡುತ್ತಿದ್ದಾರೆ.
ಬೆಂಗಳೂರಿನ ಸಂಸ್ಥೆಯೊಂದು ಈ ಟಾಯ್ಲೆಟ್‌ಗಳ ರೂಪಿಸಿ ಪೂರೈಸಿದ್ದು, ಅವುಗಳ ನಿರ್ವಹಣೆ ಹೊಣೆಯೂ 2016–17ರಲ್ಲಿಯೇ ಮುಕ್ತಾಯಗೊಂಡಿದೆ ಎಂದು ತಿಳಿದುಬಂದಿದೆ. ಅದಕ್ಕೆ ಉತ್ತರದಾಯಿತ್ವ ಆಗಬೇಕಿದ್ದ ಸ್ಮಾರ್ಟ್ ಸಿಟಿ ಸಂಸ್ಥೆಯು ನವೆಂಬರ್ ಅಂತ್ಯದಿಂದ ಶಾಶ್ವತವಾಗಿ ಮುಚ್ಚಿದೆ. ಅದು ಅನುಷ್ಠಾನಗೊಳಿಸಿದ್ದ ಯೋಜನೆಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಿ ಕೈ ತೊಳೆದುಕೊಳ್ಳಲಾಗಿದೆ. ಹೀಗಾಗಿ ಪಾಪದ ಹೊರೆ ಈಗ ಪಾಲಿಕೆಯ ಬೆನ್ನಿಗೇರಿದೆ.
‘ಇ–ಟಾಯ್ಲೆಟ್‌ಗಳು ಸ್ವಚ್ಛತೆಯ ರಾಯಭಾರಿಗಳಾಗಿ ಶಿವಮೊಗ್ಗ ನಗರವನ್ನು ಇನ್ನಷ್ಟು ಸ್ಮಾರ್ಟ್ ಮಾಡಬೇಕಿತ್ತು. ಖಾಲಿ ಡಬ್ಬಾ, ಹಳೇ ಶೆಡ್‌ನ ರೀತಿ ಈಗ ಹಾಳು ಬಿದ್ದಿವೆ. ದೂಳು, ಗಾಳಿ, ಮಳೆ, ಬಿಸಿಲಿಗೆ ಸಿಲುಕಿ ತುಕ್ಕು ಹಿಡಿಯುತ್ತಿವೆ. ಸ್ಮಾರ್ಟ್ ಸಿಟಿ ಸಂಸ್ಥೆಯ ಹೊಣೆಗೇಡಿತನ, ಅಲ್ಲಿನ ಕಮಿಷನ್ ದಂಧೆಯ ಕರಾಳತೆಯನ್ನು ಬಿಚ್ಚಿಡುತ್ತಿವೆ. ಬಹುಶಃ ನಗರದ ಯಾರೊಬ್ಬರೂ ಸ್ಮಾರ್ಟ್ ಸಿಟಿಯ ಈ ಟಾಯ್ಲೆಟ್‌ಗಳಲ್ಲಿ ಈಗ ಬಹಿರ್ದೆಸೆಗೆ ಅಲ್ಲ. ಅದರ ಚಂದ ನೋಡಲು ಹತ್ತಿರ ಹೋಗಲು ಸಾಧ್ಯವಿಲ್ಲ’ ಎಂದು ಪರಿಸರ ಹೋರಾಟಗಾರ, ವಿನೋಬನಗರದ ಚಿದಾನಂದಯ್ಯ ಮಠದ ಬೇಸರ ವ್ಯಕ್ತಪಡಿಸುತ್ತಾರೆ.
‘ಸೈಕಲ್, ಸೈಕಲ್ ಪಾತ್, ಮನೆ ಮನೆಗೆ ಸ್ಟಿಕ್ಕರ್ ಅಳವಡಿಕೆ ಯೋಜನೆಯ ವೈಫಲ್ಯ, ಪಾರ್ಕ್‌ಗಳ ನಿರ್ವಹಣೆಯೂ ಹಾಳು ಬಿದ್ದಿವೆ. ಅಲ್ಲಿನ ಆಟಿಕೆ, ಜಿಮ್ ಸಾಮಗ್ರಿಯೂ ಕಳಪೆ. ಸ್ಮಾರ್ಟ್ ಸಿಟಿ ಯೋಜನೆ ಯಾವ ವಿಚಾರದಲ್ಲಿ ಜನರ ಪ್ರೀತಿ ಗಳಿಸಿದೆ’ ಎಂದು ಅವರು ಪ್ರಶ್ನಿಸುತ್ತಾರೆ.
ಇ–ಟಾಯ್ಲೆಟ್‌ಗಳನ್ನು ಸರಿಪಡಿಸುವಂತೆ ಈಚೆಗೆ ಶಿವಮೊಗ್ಗ ಮಹಾನಗರ ಪಾಲಿಕೆಗೆ ಎಚ್ಚರಿಕೆ ಕೊಟ್ಟಿದ್ದೇವೆ. ಟಾಯ್ಲೆಟ್‌ಗಳನ್ನು ಸರಿಪಡಿಸುವಂತೆ ಒತ್ತಾಯವೇ ನಮ್ಮ ಮುಂದಿನ ಹೋರಾಟದ ಗುರಿ.ಕೆ.ವಿ.ವಸಂತಕುಮಾರ್ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ ಸಂಚಾಲಕ
ಸ್ಮಾರ್ಟ್ ಸಿಟಿ ಯೋಜನೆಗಳ ನಿರ್ವಹಣೆ ಹೊಣೆ ನವೆಂಬರ್ 30ರಿಂದ ಪಾಲಿಕೆಗೆ ವಹಿಸಲಾಗಿದೆ. ಇ–ಟಾಯ್ಲೆಟ್‌ಗಳನ್ನು ಮುಂದಿನ 2.5 ತಿಂಗಳಲ್ಲಿ ಮಾಮೂಲಿ ಶೌಚಾಲಯಗಳಂತೆ ಪರಿವರ್ತಿಸಿ ಕೇವಲ ಮಹಿಳೆಯರ ಬಳಕೆಗೆ ಮೀಸಲಿಡಲು ಉದ್ದೇಶಿಸಿದ್ದೇವೆ.ಮಾಯಣ್ಣಗೌಡ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ
‘ಶೇ 99 ಇ–ಟಾಯ್ಲೆಟ್ ಮಾದರಿಯೇ ಸರಿ ಇಲ್ಲ’
‘ಶಿವಮೊಗ್ಗದಂತಹ ನಗರದಲ್ಲಿ ಇ–ಟಾಯ್ಲೆಟ್ ಯೋಜನೆ ಯಶಸ್ವಿಯಾಗಬೇಕಿತ್ತು. ಸರಿಯಾಗಿ ಮಾಡಿದ್ದರೆ ಶಿವಮೊಗ್ಗದ ಜನರಿಗೆ ಬಹಳ ಅಗತ್ಯ ಯೋಜನೆ ಅದು. ಆದರೆ ಶೇ 99ರಷ್ಟು ಭಾಗ ಆ ಟಾಯ್ಲೆಟ್‌ಗಳ ಮಾದರಿಯೇ ಸರಿ ಇಲ್ಲ. ಹೀಗಾಗಿ ವಿಫಲವಾಗಿದೆ’ ಎಂದು ಇಲ್ಲಿನ ನಾಗರಿಕ ಹಿತರಕ್ಷಣಾ ವೇದಿಕೆಯ ಸಂಚಾಲಕ ಕೆ.ವಿ.ವಸಂತಕುಮಾರ್ ಹೇಳುತ್ತಾರೆ. ‘ಕೆಲವು ಕಡೆ ಇ–ಟಾಯ್ಲೆಟ್‌ಗಳನ್ನು ಸುಮ್ಮನೆ ಎಸೆದು ಹೋಗಿದ್ದಾರೆ. ಅದರಿಂದ ಶೇ 1ರಷ್ಟು ಕೂಡ ಫಲಿತಾಂಶ ಇಲ್ಲ. ಏನೋ ಒಂದು ಮಾಡಿ ಹಾಕಿ ಹೋಗಬೇಕು. ಮುಗಿಸಬೇಕು. ಅದು ಯಾಕೆ ಮಾಡಬೇಕು. ಏನು ಮಾಡಬೇಕು. ಎಲ್ಲಿ ಮಾಡಬೇಕು. ಯಾವ ರೀತಿ ಮಾಡಬೇಕು. ಹೇಗೆ ಮುಗಿಸಬೇಕು ಎಂಬುದೆಲ್ಲ ಲೆಕ್ಕಕ್ಕೇ ಇಲ್ಲ. ಕೇಂದ್ರ ಸರ್ಕಾರದಿಂದ ಹಣ ಬಂದಿದೆ. ಅದನ್ನು ಖರ್ಚು ಮಾಡಬೇಕು. ಪರ್ಸೆಂಟೇಜ್ ತೆಗೆದುಕೊಂಡು ಹೋಗಬೇಕು ಎಂಬುದಷ್ಟೇ ಯೋಚನೆಯಾಗಿತ್ತು. ಇದೆಲ್ಲ ಅಧಿಕಾರಿಗಳ ಬೇಜವಾಬ್ದಾರಿತನದ ಪರಮಾವಧಿ. ವೈಫಲ್ಯಕ್ಕೆ ಅವರೇ ನೇರ ಹೊಣೆಗಾರರು’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.
‘ರಿಪೇರಿ ಸಾಧ್ಯವಾಗದಷ್ಟು ಸ್ಕ್ಯಾಪ್ ಆಗಿವೆ’
ಆರು ವರ್ಷಗಳ ಹಿಂದೆ ಇ–ಟಾಯ್ಲೆಟ್‌ಗಳ ಅಳವಡಿಸಿದ್ದು ಅವು ಒಂದು ವರ್ಷವೂ ನಿರ್ವಹಣೆ ಆಗಿಲ್ಲ. ಆರಂಭದಲ್ಲಿ ₹5 ಕಾಯಿನ್ ಹಾಕಿ ಬಳಕೆ ಮಾಡಬೇಕಿತ್ತು. ಬಳಕೆದಾರರು ಬಾರದೇ ಅದನ್ನು ನಿಲ್ಲಿಸಲಾಯಿತು. ಪ್ರಾಯೋಗಿಕವಾಗಿ ಒಂದು ವರ್ಷ ಉಚಿತವಾಗಿ ಕೊಟ್ಟರೂ ಯಾರೂ ಬರಲಿಲ್ಲ. ಗುತ್ತಿಗೆದಾರರ ನಿರ್ವಹಣೆ ಅವಧಿಯೂ ಆಗ ಮುಕ್ತಾಯವಾಯಿತು. ನಂತರ ಅವು ಹಾಳುಬಿದ್ದವು. ಕಳ್ಳತನ ಶುರುವಾಯಿತು. ಒಂದೊಂದೇ ಸಮಸ್ಯೆ ಆರಂಭವಾದವು ಎಂದು ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿಯೊಬ್ಬರು ಹೇಳುತ್ತಾರೆ. ‘ಇ–ಟಾಯ್ಲೆಟ್‌ಗಳನ್ನು ಪಾರ್ಕ್ ಒಳಗೆ ಹಾಕಬೇಕಿತ್ತು. ಕನ್ಸರ್‌ವೆನ್ಸಿಗಳಲ್ಲಿ ಇಟ್ಟಿದ್ದೇ ತಪ್ಪಾಯಿತು. ಅವು ಈಗ ರಿಪೇರಿ ಮಾಡಲು ಆಗದೇ ಸ್ಕ್ರ್ಯಾಪ್ ಆಗಿವೆ. ಈಗ ಅವುಗಳ ಎಲೆಕ್ಟ್ರಾನಿಕ್ ಸೆನ್ಸಾರ್‌ಗಳ ಚಿಪ್ ಸಿಗುವುದಿಲ್ಲ. ಹೀಗಾಗಿ ಮಾಮೂಲಿ ಶೌಚಾಲಯದ ರೀತಿ ಬಳಕೆ ಮಾಡುವಂತೆ ಮಾತ್ರ ಪರಿವರ್ತಿಸಬಹುದಾಗಿದೆ’ ಎನ್ನುತ್ತಾರೆ.
ಎಲ್ಲೆಲ್ಲಿ ಇ–ಟಾಯ್ಲೆಟ್..
ಶಿವಮೊಗ್ಗದ ದೊಡ್ಡಪೇಟೆಯಲ್ಲಿ ಎರಡು ಕಡೆ ಮೆಗ್ಗಾನ್ ಆಸ್ಪತ್ರೆ ಬಳಿ ಎರಡು ಮಲ್ಲೇಶ್ವರ ನಗರ ಪಾರ್ಕ್‌ನಲ್ಲಿ ಎರಡು ಜಯನಗರ ಕ್ಯಾಂಟೀನ್ ಬಳಿ ಎರಡು ಗಾರ್ಡನ್ ಏರಿಯಾದ ಕನ್ಸರ್ವೆನ್ಸಿಗಳಲ್ಲಿ ಎಂಟು ಅ.ನ.ಕೃಷ್ಣರಾಯ ರಸ್ತೆಯ ಇಡ್ಲಿಹೌಸ್‌ನ ಹಿಂಭಾಗದ ಕನ್ಸರ್ವೆನ್ಸಿಯಲ್ಲಿ ಎರಡು ಜೈಲ್ ರಸ್ತೆಯ ಸುಬ್ಬಯ್ಯ ಆಸ್ಪತ್ರೆ ಹಿಂಭಾಗದ ಕನ್ಸರ್ವೆನ್ಸಿಯಲ್ಲಿ ಎರಡು ಶರಾವತಿ ನಗರದಲ್ಲಿ ಎರಡು ರವೀಂದ್ರ ನಗರದಲ್ಲಿ ಎರಡು ಇ–ಟಾಯ್ಲೆಟ್‌ಗಳ ಇಡಲಾಗಿದೆ.
ಅಂಕಿ–ಅಂಶ 24 ಸ್ಮಾರ್ಟ್ ಸಿಟಿ ಅಡಿ ಶಿವಮೊಗ್ಗದಲ್ಲಿ ನಿರ್ಮಿಸಲಾದ ಇ–ಟಾಯ್ಲೆಟ್ ₹4.50 ಲಕ್ಷ ಪ್ರತಿ ಇ–ಟಾಯ್ಲೆಟ್‌ಗೆ ವೆಚ್ಚ 0 ಬಳಕೆ ಆಗುತ್ತಿರುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.