
ಶಿವಮೊಗ್ಗ: ಕ್ರಿಕೆಟ್ ಆಟದ ವಿಚಾರಕ್ಕೆ ಸಂಬಂಧಿಸಿದಂತೆ ಸಹಪಾಠಿ ಜೊತೆ ಗುಂಪೊಂದು ಜಗಳಕ್ಕೆ ಬಂದಾಗ ಬಿಡಿಸಲು ಹೋದ ಸಂಕೇತ್ (15) ಎಂಬ ಹತ್ತನೇ ತರಗತಿ ವಿದ್ಯಾರ್ಥಿ ಹಲ್ಲೆಗೊಳಗಾಗಿ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಊರಗಡೂರಿನಲ್ಲಿ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೆ ಒಳಗಾದ ಏಳು ಮಂದಿ ಬಾಲಕರನ್ನು ಇಲ್ಲಿನ ತುಂಗಾ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಎಸ್ಪಿ ಬಿ.ನಿಖಿಲ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಊರಗಡೂರು ಪಕ್ಕದ ಸೂಳೆಬೈಲಿನ ದುರ್ಗಮ್ಮನ ಬೀದಿ ನಿವಾಸಿ ಸಂಕೇತ್, ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಶಾಲೆಯಲ್ಲಿ ವಿಶೇಷ ತರಗತಿ ಮುಗಿಸಿ ಸ್ನೇಹಿತನ ಜೊತೆ ಮರಳುತ್ತಿದ್ದಾಗ ಘಟನೆ ನಡೆದಿದೆ.
ಎರಡು ದಿನದ ಹಿಂದೆ ಕ್ರಿಕೆಟ್ ಟೂರ್ನಿ ವೇಳೆ ನಡೆದಿದ್ದ ಜಗಳ ಪ್ರಸ್ತಾಪಿಸಿದ್ದ ಗುಂಪು ಸ್ನೇಹಿತನ ಮೇಲೆ ಹಲ್ಲೆಗೆ ಮುಂದಾಗಿದ್ದು, ಜಗಳ ಬಿಡಿಸಲು ಹೋದ ಸಂಕೇತ್ ಮೇಲೂ ಹಲ್ಲೆ ನಡೆಸಿತ್ತು. ಎದೆಯ ಬಳಿ ಬಿದ್ದ ಪೆಟ್ಟಿನಿಂದ ಆತ ಕುಸಿದುಬಿದ್ದಿದ್ದ. ಪಾಲಕರು ಬಂದು ಆಸ್ಪತ್ರೆಗೆ ಕರೆದೊಯ್ಯುವಾಗ ಸಾವಿಗೀಡಾಗಿದ್ದಾನೆ.
ಹಲ್ಲೆಯಿಂದ ಸಂಕೇತ್‌ನ ಸ್ನೇಹಿತನೂ ಗಾಯಗೊಂಡಿದ್ದಾನೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಸಂಕೇತ್‌ನ ಶವ ಪರೀಕ್ಷೆ ನಡೆಸಿ ಮಂಗಳವಾರ ಮೆರವಣಿಗೆಯಲ್ಲಿ ಊರಿಗೆ ಶವ ಕೊಂಡೊಯ್ಯಲಾಯಿತು. ಈ ವೇಳೆ ಬಿಗುವಿನ ಸ್ಥಿತಿ ಇತ್ತು.
‘ಕ್ರಿಕೆಟ್ ಆಟ ಕುರಿತ ವೈಮನಸ್ಯ ಹಲ್ಲೆಗೆ ಕಾರಣ. ವಶಕ್ಕೆ ಪಡೆದಿರುವ ಬಾಲಕರು ಸಂಕೇತ್ ಓದುತ್ತಿದ್ದ ಶಾಲೆಯ ಹಳೆಯ ವಿದ್ಯಾರ್ಥಿಗಳು. ಎಲ್ಲ ಶಾಲೆ ಬಿಟ್ಟಿದ್ದಾರೆ’ ಎಂದು ಎಸ್‌ಪಿ ಹೇಳಿದರು.
‘ಗಲಾಟೆ ನಡೆದಿದ್ದ ಸಂದರ್ಭದಲ್ಲಿ ಕೆಲ ಬಾಲಕರು ಗಾಂಜಾ ಸೇವಿಸಿರುವ ಶಂಕೆ ಇದೆ. ಅವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದೂ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.