ADVERTISEMENT

ಶಿವಮೊಗ್ಗ: ಈಜುಕೊಳ ಅವ್ಯವಸ್ಥೆ ಸರಿಪಡಿಸಲು ಪೋಷಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 5:40 IST
Last Updated 6 ಫೆಬ್ರುವರಿ 2026, 5:40 IST
ಶಿವಮೊಗ್ಗದಲ್ಲಿ ಈಜುಕೊಳ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಈಜು ತರಬೇತಿ ಪಡೆಯುತ್ತಿರುವ ಮಕ್ಕಳ ಪೋಷಕರು ಶಾಸಕರಿಗೆ ಮನವಿ ಸಲ್ಲಿಸಿದರು
ಶಿವಮೊಗ್ಗದಲ್ಲಿ ಈಜುಕೊಳ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಈಜು ತರಬೇತಿ ಪಡೆಯುತ್ತಿರುವ ಮಕ್ಕಳ ಪೋಷಕರು ಶಾಸಕರಿಗೆ ಮನವಿ ಸಲ್ಲಿಸಿದರು   

ಶಿವಮೊಗ್ಗ: ನಗರದ ಗೋಪಾಳದಲ್ಲಿರುವ ಸ್ಫೋರ್ಟ್ಸ್ ಕಾಂಪ್ಲೆಕ್ಸ್‌ನ ಈಜುಕೊಳ ಸರಿಯಾದ ನಿರ್ವಹಣೆ ಇಲ್ಲದೆ ಅವ್ಯವಸ್ಥೆ ಉಂಟಾಗಿದ್ದು, ಅದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಈಜು ತರಬೇತಿ ಪಡೆಯುತ್ತಿರುವ ಮಕ್ಕಳ ಪೋಷಕರು ಶಾಸಕರಿಗೆ ಮನವಿ ಸಲ್ಲಿಸಿದರು.

‘ಅಂದಾಜು 25 ದಿನಗಳಿಂದ ಈಜುಕೊಳದಲ್ಲಿ ಯಾವುದೇ ರೀತಿಯ ನಿರ್ವಹಣೆ ನಡೆಯದೆ ಸೊರಗುತ್ತಿದೆ. ಆಡಳಿತಾತ್ಮಕ ನಿರ್ಲಕ್ಷ್ಯವೇ ಈ ಅವ್ಯವಸ್ಥೆಗೆ ಪ್ರಮುಖ ಕಾರಣ. ಇಲ್ಲಿ ಕೋಚ್, ಲೈಫ್‌ಗಾರ್ಡ್‌ಗಳ ಕೊರತೆ ಇದೆ’ ಎಂದು ಮಲೆನಾಡು ಸ್ವಿಮ್ಮಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ವಿಜಯ್‌ಕುಮಾರ್ ಆರೋಪಿಸಿದರು.

‘ಈ ಈಜುಕೊಳದಲ್ಲಿ 7– 8 ವರ್ಷಗಳಿಂದ ತರಬೇತಿ ಪಡೆದ ಹಲವಾರು ಮಕ್ಕಳು ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳು ಹಾಗೂ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದರು. ಆದರೆ ಪ್ರಸ್ತುತ ಕೋಚ್‌ಗಳ ನೇಮಕವಾಗದೆ ಇರುವ ಕಾರಣ ಮಕ್ಕಳು ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ’ ಎಂದು ದೂರಿದರು.

ADVERTISEMENT

‘ಈಜುಕೊಳದ ಏಜೆನ್ಸಿ ಪಡೆದ ಸುರೇಶ್ ಬಾಳೆಗುಂಡಿ ಅವರ ಗಮನಕ್ಕೂ ಈ ಸಮಸ್ಯೆಯನ್ನು ತರಲಾಗಿದೆ. ಆದರೆ, ಇದುವರೆಗೂ ಕೋಚ್‌ಗಳ ನೇಮಕ ಸಾಧ್ಯವಾಗಿಲ್ಲ. ಇದರಿಂದ ಮಕ್ಕಳು ಸಮಸ್ಯೆ ಎದುರಿಸುವಂತಾಗಿದೆ’ ಎಂದು ತಿಳಿಸಿದರು.

‘ವಾರದಿಂದ ಈಜುಕೊಳದ ನೀರಿನ ಗುಣಮಟ್ಟ ಹದಗೆಟ್ಟಿದ್ದು, ನಿರ್ವಹಣೆಯ ಕೊರತೆಯಿಂದ ಈಜುಕೊಳಕ್ಕೆ ಬಾಗಿಲು ಹಾಕುವ ಪರಿಸ್ಥಿತಿ ಎದುರಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸನತ್‌ಕುಮಾರ್, ವಿಜಯ್‌ಕುಮಾರ್, ಜಯಲಕ್ಷ್ಮಿ, ರೇಖಾ, ಲತಾ, ರೇಷ್ಮಾ, ವಾಣಿ, ಪೂಜಾ, ಪ್ರಿಯಾ, ಸಂತೋಷ್, ಸತ್ಯನಾರಾಯಣ ಗೌಡ, ಮಂಜುನಾಥ್, ದೀಪಶ್ರೀ, ಭಾಗ್ಯಲಕ್ಷ್ಮಿ, ದೀಪಕ್‌ಕುಮಾರ್, ರಾಘವೇಂದ್ರ ಕೆ. ಶ್ರುತಿ ಉಪಸ್ಥಿತರಿದ್ದರು. 

ಈಜುಕೊಳದಲ್ಲಿ ಸಂಗಮೇಶ್ ಅವರು ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಮಕ್ಕಳು ಉತ್ತಮ ತರಬೇತಿ ಪಡೆದು ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಹೆಸರು ಮಾಡಿದ್ದರು. ಆದರೆ ವೈಯಕ್ತಿಕ ಕಾರಣದಿಂದ ಅವರನ್ನು ಕೈಬಿಟ್ಟ ಬಳಿಕ 25 ದಿನಗಳಿಂದ ಇಲ್ಲಿಯವರೆಗೆ ಹೊಸ ಕೋಚ್ ನೇಮಕವಾಗದೆ ಇರುವುದರಿಂದ ಮಕ್ಕಳಿಗೆ ತೀವ್ರ ಅನ್ಯಾಯವಾಗುತ್ತಿದೆ
: ವಿಜಯ್‌ಕುಮಾರ್, ಕಾರ್ಯದರ್ಶಿ, ಮಲೆನಾಡು ಸ್ವಿಮ್ಮಿಂಗ್ ಅಸೋಸಿಯೇಷನ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.