ADVERTISEMENT

ಶಿವಮೊಗ್ಗ: ಮರಣದಂಡನೆಗೆ ಒಳಗಾದ ಶಿಕ್ಷಕಿ ಲಕ್ಷ್ಮಿ ರಂಗಚಟುವಟಿಕೆಗಳಲ್ಲಿ ಸಕ್ರಿಯ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 4:27 IST
Last Updated 24 ಆಗಸ್ಟ್ 2025, 4:27 IST
   

ಶಿವಮೊಗ್ಗ: ಪತಿ, ಶಿಕ್ಷಕ ಇಮ್ತಿಯಾಜ್ ಅಹಮದ್ ಕೊಲೆ ಪ್ರಕರಣದಲ್ಲಿ ಶನಿವಾರ ಭದ್ರಾವತಿಯ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಮರಣ ದಂಡನೆ ಶಿಕ್ಷೆಗೆ ಒಳಗಾಗಿರುವ ಶಿಕ್ಷಕಿ ಎಸ್. ಲಕ್ಷ್ಮಿ ಜಿಲ್ಲೆಯಲ್ಲಿ ರಂಗ ಹಾಗೂ ಸಾಂಸ್ಕೃತಿಕ ಚಟುವಟಿಗಳಲ್ಲಿ ಸಕ್ರಿಯರಾಗಿದ್ದರು.

ಭರತನಾಟ್ಯ, ಕೂಚಿಪುಡಿ ನೃತ್ಯ ಕಲಾವಿದೆಯೂ ಆಗಿದ್ದ ಲಕ್ಷ್ಮಿ 2024ರಲ್ಲಿ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಿಂದ ಸೌಥ್ ಏಷ್ಯನ್ ವುಮೆನ್ ಅಚೀವರ್ಸ್ ಅವಾರ್ಡ್ ನ ಅಂತಿಮ ಸುತ್ತಿಗೆ ಪ್ರವೇಶಿಸಿದ್ದರು. ರಾಜ್ಯಮಟ್ಟದ ನೃತ್ಯ ಸ್ಪರ್ಧೆಗಳಲ್ಲೂ ಬಹುಮಾನ ಪಡೆದಿದ್ದರು.

ಹವ್ಯಾಸಿ ರಂಗ ಕಲಾವಿದೆ ಆಗಿ ಶಿವಮೊಗ್ಗದ ಬೇರೆ ಬೇರೆ ಕಲಾ ತಂಡಗಳ ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು. ಪ್ರಸಾದನ ಕಲಾವಿದೆಯಾಗಿಯೂ ಕೆಲಸ ಮಾಡಿದ್ದರು.

ADVERTISEMENT

ಚಿಮ್ಮವುಗೆ, ಕೆಳದಿ ಚೆನ್ನಮ್ಮ, ಮಾತೆ ಮಂಡೋದರಿ, ಉಡುತಡಿ ನಾಟಕಗಳಲ್ಲಿ ಗಮನಾರ್ಯ ಪಾತ್ರಗಳಲ್ಲಿ ನಟಿಸಿದ್ದ ಲಕ್ಷ್ಮಿ, ಈಚೆಗೆ ಶಿವಮೊಗ್ಗದಲ್ಲಿ ಮೃಚ್ಛಕಟಿಕಂ ನಾಟಕದಲ್ಲಿ ವಸಂತ ಸೇನೆ ಪಾತ್ರದಲ್ಲಿ ಅಭಿನಯಿಸಿದ್ದರು.

ಮೂಲತಃ ಭದ್ರಾವತಿಯ ಜನ್ನಾಪುರದ ನಿವಾಸಿ ಆದ ಲಕ್ಷ್ಮಿ 2011ರಲ್ಲಿ ಕಲಬುರ್ಗಿಯಲ್ಲಿ ಸರ್ಕಾರಿ ಶಾಲೆ ಶಿಕ್ಷಕಿಯಾಗಿ ನೇಮಕಗೊಂಡಿದ್ದರು. ಅಲ್ಲಿಯೇ ಶಿಕ್ಷಕ ಆಗಿದ್ದ ಇಮ್ತಿಯಾಜ್ ಅಹಮದ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ನಂತರ ದಂಪತಿ ವಾಪಸ್ ಭದ್ರಾವತಿ ತಾಲ್ಲೂಕಿಗೆ ವರ್ಗಾವಣೆ ಪಡೆದಿದ್ದರು. ದಂಪತಿಗೆ ಪುತ್ರ ಇದ್ದಾನೆ. ಇಮ್ತಿಯಾಜ್ ಶಿವಮೊಗ್ಗ ಜಿಲ್ಲೆಯ ಆನವಟ್ಟಿ ಮೂಲದವರು.

ಜನ್ನಾಪುರದಲ್ಲಿ ವಾಸವಿದ್ದ ಲಕ್ಷ್ಮಿಗೆ ಬಾಲ್ಯದ ಸ್ನೇಹಿತ, ವೃತ್ತಿಯಲ್ಲಿ ಚಾಲಕನಾಗಿದ್ದ ಕೃಷ್ಣಮೂರ್ತಿ ಜೊತೆ ಆತ್ಮೀಯತೆ ಬೆಳೆದಿತ್ತು. ಅದಕ್ಕೆ ಆಕ್ಷೇಪಿಸಿದ್ದ ಪತಿ ಇಮ್ತಿಯಾಜ್ ಅವರನ್ನು ಲಕ್ಷ್ಮಿ, ಕೃಷ್ಣಮೂರ್ತಿ ಹಾಗೂ ಆತನ ಸ್ನೇಹಿತ ಶಿವರಾಜ ಸೇರಿ 2016ರ ಜುಲೈ 7ರಂದು ಕೊಲೆ ಮಾಡಿ ದೇಹವನ್ನು ಭದ್ರಾ ನದಿಗೆ ಎಸೆದಿದ್ದರು. ಇಮ್ತಿಯಾಜ್ ಸಹೋದರ ಎಜಾಜ್ ಅಹಮದ್ ದಾಖಲಿಸಿದ್ದ ದೂರು ಆಧರಿಸಿ ತನಿಖೆ ನಡೆಸಿದ್ದ ಭದ್ರಾವತಿಯ ನ್ಯೂ ಟೌನ್ ಪೊಲೀಸರು ಲಕ್ಷ್ಮಿ, ಕೃಷ್ಣಮೂರ್ತಿ ಹಾಗೂ ಶಿವರಾಜ ಅವರನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಅರೋಪ ಪಟ್ಟಿ ನಲ್ಲಿಸಿದ್ದರು.

ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಲಕ್ಷ್ಮಿ , ಸರ್ಕಾರಿ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. 2025ರ ಫೆಬ್ರವರಿಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ನಡೆಸಿದ ಬಿ.ಇಡಿ ಪರೀಕ್ಷೆಯಲ್ಲಿ ಮೂರನೇ ರ್‍ಯಾಂಕ್‌ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.