ಸುಕುಮಾರ್ ಎಂ
ಸಿಗಂದೂರು (ತುಮರಿ): ಶರಾವತಿ ಹಿನ್ನೀರಿನ ತಟದಲ್ಲಿರುವ ಪ್ರಮುಖ ಧಾರ್ಮಿಕ ಕೇಂದ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಇದೀಗ ‘ಪ್ರವಾಸಿ ತಾಣ’ ಮಾನ್ಯತೆಯ ಮುದ್ರೆ ಬಿದ್ದಿದೆ.
ರಾಜ್ಯ ಸರ್ಕಾರವು 2024–29ನೇ ಪ್ರವಾಸೋದ್ಯಮ ನೀತಿ ಅಡಿಯಲ್ಲಿ ಜಿಲ್ಲಾವಾರು ಪ್ರವಾಸಿ ತಾಣಗಳಿಗೆ ಅನುಮೋದನೆ ನೀಡಿದ್ದು, ಇದರಲ್ಲಿ ಶ್ರೀಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನ ಸೇರಿ ಸಾಗರ ತಾಲ್ಲೂಕಿನ ಒಟ್ಟು 15 ಸ್ಥಳಗಳನ್ನು ಸೇರ್ಪಡೆ ಮಾಡಲಾಗಿದೆ. ಇದರೊಂದಿಗೆ ತಾಲ್ಲೂಕಿನಲ್ಲಿ ಪ್ರವಾಸಿ ತಾಣಗಳ ಸಂಖ್ಯೆ ಹೆಚ್ಚಾದಂತಾಗಿದೆ.
ಈಗ ಸೇರ್ಪಡೆಯಾಗಿರುವ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ದೇವಾಲಯಗಳ ಸಂಖ್ಯೆಯೇ ಹೆಚ್ಚಾಗಿರುವುದು ವಿಶೇಷ. ಸಮೀಪದ ಕೋಗಾರು ಭೀಮೇಶ್ವರ ದೇವಸ್ಥಾನವು ಇದರ ಸಾಲಿನಲ್ಲಿ ಸೇರ್ಪಡೆಯಾಗಿದ್ದು, ಶರಾವತಿ ಹಿನ್ನೀರಿನ ವಿಶಿಷ್ಟವಾದ ಸ್ಥಳಗಳತ್ತ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಯತ್ನ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ 20 ವರ್ಷಗಳಲ್ಲಿ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ದೇವಸ್ಥಾನಗಳ ಸಾಲಿನಲ್ಲಿ ಸಿಗಂದೂರು ಚೌಡೇಶ್ವರಿ ದೇವಸ್ಥಾನ ಅಗ್ರಸ್ಥಾನ ಪಡೆದಿದೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸಿದಾಗಿನಿಂದ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ದೇವಸ್ಥಾನವು ಅದರದ್ದೇ ಆದ ವಿಶಿಷ್ಟ ಧಾರ್ಮಿಕ ನಂಬಿಕೆಗಳು, ಐತಿಹಾಸಿಕ ಮಹತ್ವ ಮತ್ತು ಭಾವೈಕ್ಯಕ್ಕೆ ಹೆಸರುವಾಸಿಯಾಗಿದೆ. ಈ ಕಾರಣದಿಂದಲೇ ರಾಜ್ಯದ ಅನೇಕ ಭಾಗಗಳ ಭಕ್ತರು ಇಲ್ಲಿಗೆ ಭೇಟಿ ನೀಡುವ ಮೂಲಕ ಆಧ್ಯಾತ್ಮಿಕ ಪ್ರವಾಸವನ್ನು ಆನಂದಿಸುತ್ತಾರೆ.
ಸೇತುವೆಯಿಂದ ಭಕ್ತರ ಭೇಟಿ ಹೆಚ್ಚಳ:
ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸಿಗಂದೂರು ಚೌಡೇಶ್ವರಿ ಸೇತುವೆ ಲೋಕಾರ್ಪಣೆಯ ನಂತರ ಸಿಗಂದೂರು ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ದೇವಸ್ಥಾನ ಆಡಳಿತ ಮಂಡಳಿಯು ಭಕ್ತರಿಗೆ ಮೂಲ ಸೌಕರ್ಯ ಸೇರಿ ಯಾವುದೇ ಕೊರತೆ ಇಲ್ಲದಂತೆ ವ್ಯವಸ್ಥೆ ಕಲ್ಪಿಸಿದೆ. ಸಿಗಂದೂರು ಚೌಡೇಶ್ವರಿ ಸೇತುವೆ ದೇಶದ ಎರಡನೇ ಅತೀ ಉದ್ದದ ತೂಗುಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ರಾಷ್ಟ್ರ ಮಟ್ಟದಲ್ಲಿ ಪ್ರಚಾರಗೊಂಡ ಕಾರಣ ಹೊರ ರಾಜ್ಯಗಳಿಂದಲೂ ಬರುವ ಪ್ರವಾಸಿಗರು ಸೇತುವೆ ಮೇಲೆ ಫೋಟೊ, ಸೆಲ್ಫಿ ತೆಗೆದುಕೊಂಡು ಖುಷಿಪಡುತ್ತಿದ್ದಾರೆ.
ಪಶ್ಚಿಮ ಘಟ್ಟದ ಸಾಲಿನಲ್ಲಿ ಕಂಡುಬರುವ ಪ್ರವಾಸಿ ತಾಣದಲ್ಲಿ ಉತ್ತಮ ಸಾರಿಗೆ ಸೌಲಭ್ಯ ಹೊಂದಿದೆ. ಸಾಗರದವರೆಗೆ ರೈಲು ಮತ್ತು ರಸ್ತೆ ಸಂಪರ್ಕ ದೇವಸ್ಥಾನದವರೆಗೂ ಅತ್ಯುತ್ತಮವಾಗಿದೆ. ಈಗಾಗಲೇ ಸಾಗರ, ಮರಕುಟಕ (ಕೊಲ್ಲೂರು) ಸಂಪರ್ಕಿಸುವ ರಾಷ್ಟ್ರೀಯ 369 ‘ಇ’ ಈ ಮಾರ್ಗದಲ್ಲೇ ಹಾದು ಹೋಗಿದೆ. ರಾಣೇಬೆನ್ನೂರು, ಬೈಂದೂರು ರಾಷ್ಟ್ರೀಯ ಹೆದ್ದಾರಿ– 766 ‘ಸಿ’ ಸಹ ಪ್ರವಾಸಿಗರಿಗೆ ಇನ್ನಷ್ಟು ಸುಗಮವಾಗಿದೆ. ಶರಾವತಿ ಹಿನ್ನೀರಿನ ಮುಪ್ಪಾನೆ, ಹಸಿರು ಮಕ್ಕಿ ಲಾಂಚ್ ಜನರ ಆಕರ್ಷಣೆಯಾಗಿದೆ. ಇದು ಇಲ್ಲಿನ ಸ್ಥಳೀಯ ಆರ್ಥಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ.
ಪೂಜಾ ಸಮಯದಲ್ಲಿ ಬದಲಾವಣೆ
‘ಸಿಗಂದೂರು ಚೌಡೇಶ್ವರಿ ಸೇತುವೆ ಉದ್ಘಾಟನೆ ನಂತರ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಆದ್ದರಿಂದ ದೇವಸ್ಥಾನ ಆಡಳಿತ ಮಂಡಳಿ ಬೆಳಿಗ್ಗೆ 5ರಿಂದ ಮಧ್ಯಾಹ್ನ 2.30 ಹಾಗೂ ಸಂಜೆ 4ರಿಂದ ರಾತ್ರಿ 9ರವರೆಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಅಲ್ಲದೆ ಭಕ್ತರಿಗೆ ರಾತ್ರಿ 9.30ರವರೆಗೂ ಅನ್ನ ಪ್ರಸಾದ ವಿನಿಯೋಗ ಇರಲಿದೆ’ ಎಂದು ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಎಚ್.ಆರ್. ರವಿಕುಮಾರ್ ತಿಳಿಸಿದ್ದಾರೆ.
15 ಸ್ಥಳಗಳು ಸೇರ್ಪಡೆ
ಸಾಗರ ತಾಲ್ಲೂಕಿನ 15 ಸ್ಥಳಗಳು ಪ್ರವಾಸೋದ್ಯಮ ಇಲಾಖೆಗೆ ಸೇರ್ಪಡೆಗೊಂಡಿವೆ. ಸ್ಥಳಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳ ಸಂಬಂಧ ಪ್ರಸ್ತಾವಕ್ಕೆ ಅಲ್ಲಿನ ಭೂ ಪ್ರದೇಶದ ಲಭ್ಯತೆಯ ಮಾಹಿತಿ ಕೋರಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ಸೂಚಿಸಲಾಗಿದೆ. ಈ ವರದಿ ಆಧರಿಸಿ ಅನುದಾನ ಲಭ್ಯತೆಯ ಅನುಸಾರ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರಕ್ಕೆ ಸೂಕ್ತ ಪ್ರಸ್ತಾವ ಸಲ್ಲಿಸಲಾಗುವುದು. ಧರ್ಮಪ್ಪ ಸಹಾಯಕ ನಿರ್ದೇಶಕರು ಪ್ರವಾಸೋದ್ಯಮ ಇಲಾಖೆ ಶಿವಮೊಗ್ಗ *** ಅಭಿವೃದ್ಧಿಗೆ ಸಹಕಾರಿ ‘ಪ್ರವಾಸಿ ತಾಣ’ ಮಾನ್ಯತೆಯಿಂದ ದೈವಿಕ ಭಾವನೆ ಹಾಗೂ ಸ್ಥಳೀಯ ಸಂಸ್ಕೃತಿ ಸಂಪ್ರದಾಯ ಆಚಾರ– ವಿಚಾರ ಆಹಾರ ಪದ್ಧತಿಗೆ ಉತ್ತೇಜನ ಸಿಗಲಿದೆ. ಆರ್ಥಿಕವಾಗಿ ಸಾಮಾಜಿಕವಾಗಿ ಪ್ರಗತಿ ಮೂಲಕ ಜನರ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಎಸ್. ರಾಮಪ್ಪ ಧರ್ಮಾಧಿಕಾರಿ ಶ್ರೀಕ್ಷೇತ್ರ ಸಿಗಂದೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.