ADVERTISEMENT

ಸಣ್ಣ ಕತೆ ಜೀವನ ವ್ಯಾಖ್ಯಾನಿಸುವ ಒಂದು ಪ್ರಕಾರ:‌ ಕತೆಗಾರ ಎಸ್.ದಿವಾಕರ್

ಅತಿ ಸಣ್ಣ ಕತೆಗಳು ಕುರಿತು ಕತೆಗಾರ ಎಸ್.ದಿವಾಕರ್ ವಿಶ್ಲೇಷಣೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 7:03 IST
Last Updated 9 ನವೆಂಬರ್ 2022, 7:03 IST
ಸಾಗರಕ್ಕೆ ಸಮೀಪದ ಹೆಗ್ಗೋಡಿನಲ್ಲಿ ನೀನಾಸಂ ಸಂಸ್ಥೆ ಮಂಗಳವಾರ ಏರ್ಪಡಿಸಿದ್ದ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮದಲ್ಲಿ ‘ಅತಿ ಸಣ್ಣ ಕತೆಗಳು’ ಕುರಿತು ಕತೆಗಾರ ಎಸ್.ದಿವಾಕರ್ ಮಾತನಾಡಿದರು.
ಸಾಗರಕ್ಕೆ ಸಮೀಪದ ಹೆಗ್ಗೋಡಿನಲ್ಲಿ ನೀನಾಸಂ ಸಂಸ್ಥೆ ಮಂಗಳವಾರ ಏರ್ಪಡಿಸಿದ್ದ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮದಲ್ಲಿ ‘ಅತಿ ಸಣ್ಣ ಕತೆಗಳು’ ಕುರಿತು ಕತೆಗಾರ ಎಸ್.ದಿವಾಕರ್ ಮಾತನಾಡಿದರು.   

ಸಾಗರ: ಸಣ್ಣ ಕತೆಗಳು ಜೀವನವನ್ನು ವ್ಯಾಖ್ಯಾನಿಸುವ ಒಂದು ಬಗೆಯ ಪ್ರಕಾರವಾಗಿವೆ ಎಂದು ಕತೆಗಾರ ಎಸ್.ದಿವಾಕರ್ ಹೇಳಿದರು.

ಸಮೀಪದ ಹೆಗ್ಗೋಡಿನಲ್ಲಿ ನೀನಾಸಂ ಸಂಸ್ಥೆ ಮಂಗಳವಾರ ಏರ್ಪಡಿಸಿದ್ದ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮದಲ್ಲಿ ‘ಅತಿ ಸಣ್ಣ ಕತೆಗಳು’ ಕುರಿತು ಮಾತನಾಡಿದರು.

‘ನಮಗಾಗುವ ಸಣ್ಣ, ಅಮೂರ್ತವಾದ ಅನುಭವಗಳನ್ನು ಅನುಭವಗ್ರಾಹ್ಯವಾಗಿ ಮಾಡುವುದು ಅತಿ ಸಣ್ಣ ಕತೆಗಳ ವಿಶೇಷತೆಯಾಗಿದೆ. ಈ ಕತೆಗಳಲ್ಲಿ ವ್ಯಕ್ತವಾಗುವ ಅರ್ಥ ಸಾಧ್ಯತೆಗಳಿಗೆ ಅನಂತತೆ ಇದೆ. ಧ್ವನಿ ಶಕ್ತಿ ಹೆಚ್ಚು ಇರುವ ಕಾರಣಕ್ಕೆ ಅತಿ ಸಣ್ಣ ಕತೆಗಳು ಕಾವ್ಯಕ್ಕೆ ಹತ್ತಿರವಾಗಿವೆ’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

‘ಪಾತ್ರಗಳ ಪರಿಚಯ, ಸ್ವರೂಪ ಇಲ್ಲದೆಯೇ ಧ್ವನಿ ಶಕ್ತಿಯ ಮೂಲಕವೇ ರೂಪುಗೊಳ್ಳುವ ಸಣ್ಣ ಕತೆಗಳಲ್ಲಿ ಉದ್ದೀಪಿಕ ಗುಣ ಇರುತ್ತದೆ.
ವಿವರಗಳಿಲ್ಲದೆ ಓದಿನ ಪ್ರಕ್ರಿಯೆ
ಯಲ್ಲಿ ವಿವರಗಳನ್ನು ಕಲ್ಪಿಸಿಕೊಳ್ಳುವ ಆವರಣವನ್ನು ಅದು ಓದುಗನಿಗೆ ಕಟ್ಟಿಕೊಡುತ್ತದೆ. ಕೆಲವೊಮ್ಮೆ ಒಂದು ಹೇಳಿಕೆ, ಚಿತ್ರಣ, ವರದಿ,
ಎರಡು ಪಾತ್ರಗಳ ನಡುವಿನ
ಮಾತುಕತೆ, ಒಂದು ವ್ಯಾಖ್ಯಾನ ಕೂಡ ಸಣ್ಣ ಕತೆಯಾಗಬಲ್ಲದು’ ಎಂದು ವಿಶ್ಲೇಷಿಸಿದರು.

‘ಸಣ್ಣ ಕತೆಗಳಲ್ಲಿ ಒಂದು ದೃಶ್ಯ ಕಲಾತ್ಮಕವಾಗಿ, ಒಂದು ಘಟಕವಾಗಿ ರೂಪುಗೊಳ್ಳುತ್ತದೆ. ಸಾಂಕೇತಿಕತೆಯ ಮಹತ್ವ ಇಲ್ಲಿ ಹೆಚ್ಚಾಗಿರುತ್ತದೆ.
ಆಶಯದ ತುಣುಕು ಇದ್ದರೂ ಆ ಮೂಲಕವೇ ಪರಿಪೂರ್ಣತೆಯನ್ನು ದಕ್ಕಿಸಿಕೊಳ್ಳುವ ಸಶಕ್ತ ಪ್ರಕಾರ ಸಣ್ಣ ಕತೆಯಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ವಾಸ್ತವವಾದಿ ನೆಲೆಗಟ್ಟಿನ ಜೊತೆಗೆ ಅಪೂರ್ವವಾದ ಕಲ್ಪನಾ ವಿಲಾಸದಲ್ಲಿ ವಿಹರಿಸಲು ಕೂಡ ಸಣ್ಣ ಕತೆಗಳು ಅವಕಾಶ ಮಾಡಿಕೊಡುತ್ತವೆ. ಸಣ್ಣ ಕತೆಗಳಿಗೆ ಕಥಾ ಸಂವಿಧಾನವಿಲ್ಲದಿದ್ದರೂ, ಅವುಗಳ ಕ್ರಿಯಾ ಕ್ಷೇತ್ರ ಸಣ್ಣದಾದರೂ, ಅಗಾಧವಾದ ಅರ್ಥ ವಿಸ್ತಾರಕ್ಕೆ ಅವಕಾಶ ಕಲ್ಪಿಸುವುದು ಈ ಪ್ರಕಾರದ ವಿಶೇಷತೆ’ ಎಂದು ಅವರು ತಿಳಿಸಿದರು.

ಒಂದು ಸಣ್ಣ ಕತೆಯ ಸಾಲು ಸಿನಿಮಾಗೆ ಕಥಾ ವಸ್ತುವಾಗಬಲ್ಲದೇ?, ಸಣ್ಣ ಕತೆಯನ್ನು ಪ್ರದರ್ಶನ ಕಲೆಗಳಿಗೆ ದೀರ್ಘಕಾಲ ಮನಸ್ಸಿನಲ್ಲಿ ಉಳಿಯುವ ರೀತಿಯಲ್ಲಿ ಅಳವಡಿಸಲು ಸಾಧ್ಯವೆ?, ಕನ್ನಡ ಸಾಹಿತ್ಯ ಪ್ರಕಾರದಲ್ಲಿ ಅತಿ ಸಣ್ಣ ಕತೆಗಳಿಗೆ ಭದ್ರವಾದ ನೆಲೆ ಇದೆಯೆ’ ಎಂಬ ವಿಷಯದ ಕುರಿತು ಚರ್ಚೆ, ಸಂವಾದ ನಡೆಯಿತು.

ಚರ್ಚೆಯಲ್ಲಿ ಕೆ.ವಿ.ಅಕ್ಷರ, ಶ್ರೀರಾಮ್ ಭಟ್, ಡಾ.ಎಂ.ಗಣೇಶ್, ಶರತ್ ಅನಂತಮೂರ್ತಿ, ಟಿ.ಪಿ.ಅಶೋಕ್, ಜಯಶ್ರೀ ದಿವಾಕರ್, ಶ್ರೀಧರ ಹೆಗಡೆ, ಮಹಾದೇವ ಹಡಪದ ಪಾಲ್ಗೊಂಡಿದ್ದರು.

ಸಂಜೆ ಶಿವರಾಮ ಕಾರಂತ ರಂಗಮಂದಿರದಲ್ಲಿ ಬೆಂಗಳೂರಿನ ಲೋಕಚರಿತ ತಂಡದವರು ವಿವೇಕ ಶಾನಭಾಗ ರಚಿಸಿರುವ, ಸಾಲಿಯಾನ ಉಮೇಶ ನಾರಾಯಣ ನಿರ್ದೇಶಿಸಿರುವ ‘ಇಲ್ಲಿರುವುದು ಸುಮ್ಮನೆ’ ನಾಟಕವನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.