ADVERTISEMENT

25,000 ಮನೆಗಳ ಸಮೀಕ್ಷೆ ಪೂರ್ಣ; ಡಿ.ಸಿ

ಸಮೀಕ್ಷೆಯಿಂದ ಹೊರಗುಳಿದವರ ಗುರುತಿಸಿ ಪುನಃ ಸಮೀಕ್ಷೆ; ಸಿಇಒ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 5:37 IST
Last Updated 28 ಸೆಪ್ಟೆಂಬರ್ 2025, 5:37 IST
ಗುರುದತ್ತ ಹೆಗಡೆ
ಗುರುದತ್ತ ಹೆಗಡೆ   

ಶಿವಮೊಗ್ಗ: ‘ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಯಶಸ್ವಿಯಾಗಿ ನಡೆಯುತ್ತಿದೆ. 25,000ಕ್ಕೂ ಹೆಚ್ಚು ಮನೆಗಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ’ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

‘ಸಮೀಕ್ಷೆಗೆ 4000ಕ್ಕೂ ಹೆಚ್ಚು ಶಿಕ್ಷಕರನ್ನು ನೇಮಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 7.30 ರಿಂದಲೇ ಸಮೀಕ್ಷೆ ಆರಂಭಿಸಿ, ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅವರು ಕಾರ್ಯ ಪ್ರವೃತ್ತರಾಗಿದ್ದಾರೆ’ ಎಂದು ಶನಿವಾರ ಸುದ್ದಿಗಾರರಿಗೆ ಹೇಳಿದರು. 

‘ಸೆ.28ರಿಂದ ಪ್ರತಿದಿನ 45,000 ಕ್ಕೂ ಹೆಚ್ಚು ಮನೆಗಳ ಸಮೀಕ್ಷೆ ಕಾರ್ಯ ಮುಗಿಸುವ ಗುರಿ ಇದೆ. ತಾಂತ್ರಿಕ ಸಮಸ್ಯೆಗೆ ಪರಿಹಾರ ಒದಗಿಸಲಾಗಿದೆ. ಮುಂದಿನ 10 ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳಲಿದೆ’ ಎಂದರು. 

ADVERTISEMENT

‘ಮಲೆನಾಡು ಪ್ರದೇಶಗಳಲ್ಲಿ ಸಮೀಕ್ಷೆಗೆ ನೆಟ್‌ವರ್ಕ್‌ ಸಮಸ್ಯೆ ತಲೆದೋರಿತ್ತು. ಇಂತಹ ಪ್ರದೇಶವನ್ನು ‘ಶಾಡೊ ಏರಿಯಾ’ ಎಂದು ಗುರುತಿಸಿ ಅಂದಾಜು 120 ಜಾಗಗಳಲ್ಲಿ ಸ್ಥಳೀಯ ಶಾಲೆ, ಗ್ರಾಮ ಪಂಚಾಯಿತಿಗಳಲ್ಲಿ ಕ್ಯಾಂಪ್ ಮಾಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎನ್.ಹೇಮಂತ್ ತಿಳಿಸಿದರು. 

‘ಅದೇ ರೀತಿ, ಸಮೀಕ್ಷೆಯಿಂದ ಹೊರಗುಳಿದವರನ್ನು ಗುರುತಿಸಿ ಪುನಃ ಸಮೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ನಿಗದಿತ ಅವಧಿಯಲ್ಲಿ ಶೇ 100ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲಾಗುವುದು’ ಎಂದರು. 

ಸಮೀಕ್ಷೆಯಲ್ಲಿನ ಸಮಸ್ಯೆಗಳಿಗೆ ಪರಿಹಾರ: ಮಧು ‘

ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂದರ್ಭದಲ್ಲಿ ಎದುರಾಗಿದ್ದ ಕೆಲವು ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.  ‘ಸಮೀಕ್ಷೆ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಆ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಜಿಲ್ಲಾಧಿಕಾರಿ ಸಿಇಒಗಳೊಂದಿಗೆ ಸಭೆ ನಡೆಸಿದ್ದು ಸಮೀಕ್ಷೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ’ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.