
ಸೊರಬ: ರಾಷ್ಟ್ರೀಯ ರೈತ ದಿನಾಚರಣೆಯನ್ನು ಹಬ್ಬದಂತೆ ಆಚರಿಸಲು ಒತ್ತಾಯಿಸಿ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿಯಿಂದ ಡಿ. 8ರಂದು ಬೆಳಗಾವಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಹೇಳಿದರು.
ಪಟ್ಟಣದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಡಿಸೆಂಬರ್ 23ರಂದು ಎಲ್ಲಾ ಇಲಾಖೆಗಳು ಹಾಗೂ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೈತ ದಿನಾಚರಣೆಯನ್ನು ಆಚರಿಸಬೇಕು. ಈ ನಿಟ್ಟಿನಲ್ಲಿ ಡಿ. 7ರಂದು ಸೊರಬದಿಂದ ಹೊರಟು ಡಿ. 8ರಂದು ಬೆಳಗಾವಿಯ ತಲುಪಿ, ಅಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ರೈತ ದಿನಾಚರಣೆಯನ್ನು ಸರ್ಕಾರದ ವತಿಯಿಂದ ಆಚರಿಸುವಂತೆ ಸರ್ಕಾರಕ್ಕೆ ಆಗ್ರಹಿಸಲಾಗುವುದು. ನಾಡಿಗೆ ಅನ್ನ ನೀಡುವ ರೈತನಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ ಎಂದರು.
ಈಗಾಗಲೇ 2016ರಿಂದ ಸಮಿತಿಯ ನೇತೃತ್ವದಲ್ಲಿ ರೈತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪಟ್ಟಣದ ಪುರಸಭೆ ಮುಂಭಾಗದ ವೃತ್ತಕ್ಕೆ ರೈತ ವೃತ್ತ ಎಂದು ನಾಮಕರಣ ಮಾಡಿ, ರೈತರ ಪುತ್ಥಳಿ ನಿರ್ಮಿಸಬೇಕು ಎಂದು ಮನವಿ ನೀಡುತ್ತಾ ಬರಲಾಗುತ್ತಿದ್ದು, ಕೂಡಲೇ ಸರ್ಕಾರ ಆದೇಶ ಮಾಡಬೇಕು. ರೈತರು ಸಾಕಿದ ಜಾನುವಾರುಗಳಿಗಾಗಿ ಪಶು ಆಸ್ಪತ್ರೆಯನ್ನು ದಿನದ 24 ಗಂಟೆಯು ಕಾರ್ಯನಿರ್ವಹಿಸುವಂತೆ ಮಾಡಬೇಕು. ರೈತ ದಿನಾಚರಣೆ ವೇಳೆ ಕೃಷಿ ಸಂಬಂಧ ಮಾರ್ಗದರ್ಶನ ಹಾಗೂ ಉತ್ತಮ ಬೆಳೆ ಬೆಳೆದ ರೈತರನ್ನು ಸರ್ಕಾರ ಗೌರವಿಸಬೇಕು. ಗ್ರಾಮಗಳಲ್ಲಿನ ಗೋಮಾಳಗಳು ಜಾನುವಾರಿಗೆ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಸಮಿತಿಯ ಗೌರವಾಧ್ಯಕ್ಷ ಪ್ರಭಾಕರ ರಾಯ್ಕರ್, ಉಪಾಧ್ಯಕ್ಷರಾದ ನಾಗಪ್ಪ ಬಿದರಗೇರಿ, ಶರತ್ ಸ್ವಾಮಿ, ಪ್ರಧಾನ ಕಾರ್ಯದರ್ಶಿ ವೀರೇಂದ್ರ ಗೌಡ, ಪ್ರಮುಖರಾದ ಸುರೇಶ್ ಗೌಡ ಕುಪ್ಪೆ, ಯುವರಾಜ್ ಕಾನುಗೋಡು ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.