ಸೊರಬ ಪುರಸಭೆ ಕಾರ್ಯಾಲಯ
ಸೊರಬ: ಇಲ್ಲಿನ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೇರಿದ ನಂತರದಲ್ಲಿ ₹ 3 ಕೋಟಿ ಅನುದಾನ ಮಂಜೂರಾಗಿದೆ. ಅದರೂ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಗ್ರಹಣ ಹಿಡಿದಿದೆ.
2021ರಲ್ಲಿ ಮೇಲ್ದರ್ಜೆಗೇರುವ ಮುಂಚೆ ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 12 ವಾರ್ಡ್‌ಗಳಿದ್ದವು. ಕೊಡಕಣಿ, ಕಾನುಕೊಪ್ಪ, ಚಿಕ್ಕಶಕುನ, ಹಳೆಸೊರಬ, ಗೌರಿಕೆರೆ ಮಠ, ಕುಣಜಿಬೈಲು, ಶೀಗೇಹಳ್ಳಿ, ಜಂಗಿನಕೊಪ್ಪ, ಜೇಡಗೇರಿ, ನಡಹಳ್ಳಿ, ಮರೂರು ಸೇರಿದಂತೆ ಅನೇಕ ಗ್ರಾಮಗಳು ಪುರಸಭೆ ವ್ಯಾಪ್ತಿಗೆ ಒಳಪಟ್ಟು 23 ವಾರ್ಡ್‌ಗಳಾಗಿ ನಾಲ್ಕು ವರ್ಷಗಳು ಕಳೆದರೂ ಇಲ್ಲಿ ಮೂಲಸೌಲಭ್ಯ ಮರೀಚಿಕೆಯಾಗಿವೆ.
ಗ್ರಾಮಗಳ ಬಹುಪಾಲು ಜನರು ಕೃಷಿ ಹಾಗೂ ಪಶುಸಂಗೋಪನೆಯನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ಪುರಸಭೆ ವ್ಯಾಪ್ತಿಗೆ ಒಳಪಟ್ಟ ನಂತರದಲ್ಲಿ ಕೆಲವು ಇಲಾಖೆಗಳಿಂದ ದೊರೆಯುತ್ತಿದ್ದ ಸರ್ಕಾರಿ ಸೌಲಭ್ಯಗಳಿಗೆ ಕತ್ತರಿ ಬಿದ್ದಿದೆ. ಪುರಸಭೆಯಿಂದಲೂ ರೈತರಿಗೆ ಯಾವುದೇ ಅನುದಾನ ಸಿಗುತ್ತಿಲ್ಲ ಎಂದು ಕೃಷಿಕ ಕೆ.ಮಂಜುನಾಥ ದೂರಿದರು.
ಪುರಸಭೆ ವ್ಯಾಪ್ತಿಯ ಹಳ್ಳಿಗಳ ಕೆಲವೆಡೆ ಕಾಂಕ್ರೀಟ್ ರಸ್ತೆ ನಿರ್ಮಿಸಿರುವುದು ಹೊರತುಪಡಿಸಿ ಬೇರೆ ಯಾವ ಅಭಿವೃದ್ಧಿಯೂ ಕಾಣುತ್ತಿಲ್ಲ. ಕುಡಿಯುವ ನೀರು ಹಾಗೂ ಬೀದಿದೀಪದ ವ್ಯವಸ್ಥೆಯೂ ಗ್ರಾಮ ಪಂಚಾಯಿತಿಯಲ್ಲಿದ್ದ ಮಾದರಿಯಲ್ಲಿಯೇ ಇದೆ. ಚರಂಡಿ, ಒಳಚರಂಡಿ ವ್ಯವಸ್ಥೆ ಸೇರಿದಂತೆ ಪ್ರಮುಖ ಮೂಲಸೌಕರ್ಯಗಳ ಅಗತ್ಯತೆ ಎದ್ದು ಕಾಣುತ್ತಿದೆ. ಗ್ರಾಮಗಳು ಪುರಸಭೆ ವ್ಯಾಪ್ತಿಗೆ ಒಳಪಟ್ಟ ನಂತರದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸುವ ಗೋಜಿಗೆ ಹೋಗಿಲ್ಲ. ಕೂಡಲೇ ಅಧಿಕಾರಿಗಳು ಪುರಸಭೆ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಅಭಿವೃದ್ದಿ ಕುರಿತು ಸಭೆ ನಡೆಸಬೇಕು ಎಂದು ಸಾರ್ವಜನಿಕ ಹಿರತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಜೇಡಗೇರಿ ಒತ್ತಾಯಿಸಿದರು.
‘ಪುರಸಭೆ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ಗ್ರಾಮಗಳು ಅಭಿವೃದ್ಧಿ ಹೊಂದುತ್ತವೆ ಎಂದು ಸಂತಸ ಪಟ್ಟಿದ್ದೆವು. ಆದರೀಗ ನಮ್ಮ ಕನಸಿಗೆ ತಣ್ಣೀರೆರಚಿದಂತಾಗಿದೆ. ರೈತರ ಗೋಳು ಹೇಳತೀರದಾಗಿದೆ’ ಎಂದು ಚಿಕ್ಕಶಕುನ ಭಾಗದ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದಲ್ಲಿ ಬಡ ಕೂಲಿಕಾರರು ಹೆಚ್ಚಿದ್ದು, ನರೇಗಾ ಯೋಜನೆ ಕೈತಪ್ಪಿದೆ. ಗ್ರಾಮೀಣ ನಿವಾಸಿಗಳಿಗೆ ಸಂಕಷ್ಟ ತಂದೊಡ್ಡಿದೆ ಎಂದು ಕೊಡಕಣಿ ಭಾಗದ ರೈತರು ಅಳಳು ತೋಡಿಕೊಂಡರು.
ಅನೇಕ ಗ್ರಾಮಗಳನ್ನು ಪುರಸಭೆ ವ್ಯಾಪ್ತಿಗೆ ಸೇರಿಸಿ ನಾಲ್ಕು ವರ್ಷಗಳು ಕಳೆದಿವೆ. ಪುರಸಭೆಗೆ ಬಿಡುಗಡೆಯಾಗಿರುವ ವಾರ್ಷಿಕ ಅನುದಾನದ ಮಾಹಿತಿಯೂ ಅಧಿಕಾರಿಗಳ ಬಳಿ ಇಲ್ಲ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ದೂರಿದರು.
ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲು ₹ 3 ಕೋಟಿ ಅನುದಾನ ಮಂಜೂರಾಗಿದೆ. ಅಗತ್ಯ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.ಚಂದನ್, ಮುಖ್ಯಾಧಿಕಾರಿ ಪುರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.