
ಶಿವಮೊಗ್ಗ: ರಾಜ್ಯದಲ್ಲಿ ಮರ್ಯಾದೆಗೇಡು ಹತ್ಯೆಯಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಶೀಘ್ರ ವಿಶೇಷ ಕಾನೂನು ತರಲು ಸರ್ಕಾರ ನಿರ್ಧರಿಸಿದೆ. ಆ ನಿಟ್ಟಿನಲ್ಲಿ ಪ್ರಕ್ರಿಯೆಗಳು ಆರಂಭವಾಗಿವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಇಲ್ಲಿನ ಬೆಕ್ಕಿನಕಲ್ಮಠದಲ್ಲಿ ಸೋಮವಾರ ನಡೆದ ಲಿಂಗೈಕ್ಯ ಗುರುಬಸವ ಮಹಾಸ್ವಾಮಿಗಳ 114ನೇ ಪುಣ್ಯಸ್ಮರಣೋತ್ಸವ, 556ನೇ ಶಿವಾನುಭವಗೋಷ್ಠಿ, ಭಾವೈಕ್ಯ ಹಾಗೂ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಸವಣ್ಣ ಇವನಾರವ, ಇವನಾರವ ಎಂದೆಣಿಸದಿರಯ್ಯ ಎಂದು ಹೇಳಿದ್ದರು. ಕುವೆಂಪು ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟ ಆಗಬೇಕು ಎಂದು ಆಶಿಸಿದ್ದರು. ಆದರೆ ಇಂದು ಬಸವಣ್ಣ, ಕುವೆಂಪು ಹುಟ್ಟಿದ ನಾಡಿನಲ್ಲಿ ಏನು ನಡೆದಿದೆ ಎಂಬದನ್ನು ಗಮನಿಸಿದಾಗ ಸಮಾಜ ಶಾಂತವಾಗಿ ಕೂರಬಾರದು. ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದೆಗೇಡು ಹತ್ಯೆಯಂತಹ ಘಟನೆಗಳ ಮರುಕಳಿಸುವುದನ್ನು ಸರ್ಕಾರ ಸಹಿಸುವುದಿಲ್ಲ. ಆ ಹಿಂಸೆಗೆ ಲಗಾಮು ಹಾಕಲೇಬೇಕಿದೆ ಎಂದು ಹೇಳಿದರು.
ಇಂದು ಬಸವಣ್ಣನವರ ವಚನಗಳನ್ನು ಭಾಷಣದ ಸರಕು ಆಗಿ ಮಾಡಿಕೊಂಡಿದ್ದೇವೆ. ಆದರೆ ನಮ್ಮ ನಡೆ–ನುಡಿಯಲ್ಲಿ ವಚನಗಳ ಆಶಯಗಳು ಇಲ್ಲ. ಅವರನ್ನು ಬರೀ ಧಾರ್ಮಿಕ ದೃಷ್ಟಿಯಿಂದ ನೋಡದೇ ಇದ್ದಿದ್ದರೆ ಇಂದು ಬಸವಣ್ಣ ಜಗತ್ತಿನ ಅತ್ಯಂತ ಶ್ರೇಷ್ಠ ಕ್ರಾಂತಿಕಾರಕ ವ್ಯಕ್ತಿ ಆಗಿರುತ್ತಿದ್ದರು. ಆರ್ಥಿಕ ದೃಷ್ಟಿಕೋನದಲ್ಲಿ ಕಾರ್ಲ್‌ಮಾರ್ಕ್ಸ್‌ಗಿಂತ ಮುಂದೆ ಇರುತ್ತಿದ್ದರು. ಅಲ್ಲಮಪ್ರಭು ಅವರನ್ನು ಅನುಭವ ಮಂಟಪದ ಅಧ್ಯಕ್ಷರಾಗಿಸುವ ಮೂಲಕ ಬಹುದೊಡ್ಡ ಸಂದೇಶ ಕೊಟ್ಟಿದ್ದರು. ಅದನ್ನು ಕೊಂಡಾಡುತ್ತೇವೆ. ಆದರೆ ನಾವೇ ಅವರನ್ನು ಧಾರ್ಮಿಕ ಚೌಕಟ್ಟಿನಲ್ಲಿ ಹಿಡಿದಿಟ್ಟುಕೊಂಡಿದ್ದೇವೆ ಅನ್ನಿಸುತ್ತಿದೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಆಗಿ ಘೋಷಿಸುವ ಮೂಲಕ ಸರ್ಕಾರ ಅವರ ತತ್ವ ಚಿಂತನೆಗಳನ್ನು ಸರಿಯಾಗಿ ಬಿಂಬಿಸಿ ಸಮಾಜವನ್ನು ಆರೋಗ್ಯಕರವಾಗಿಸುವ ಪ್ರಯತ್ನ ಸರ್ಕಾರ ಮಾಡುತ್ತಿದೆ. 12ನೇ ಶತಮಾನದಲ್ಲಿ ಶ್ರೇಣೀಕೃತ ವರ್ಗ ವ್ಯವಸ್ಥೆಯ ನಡುವೆ ಬಸವಣ್ಣ ಅಂತರ್ಜಾತಿಯ ವಿವಾಹ ಮಾಡಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಮಾಜದಲ್ಲಿನ ಉಂಟಾಗಿರುವ ಗೊಂದಲಗಳ ಪರಿಣಾಮ ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದೆಗೇಡು ಹತ್ಯೆಯಲ್ಲಿ ಕಾಣುತ್ತಿದ್ದೇವೆ. ಅಂತಹ ಕೆಲಸಗಳ ವಿರುದ್ಧ ಕಟುವಾದ ಟೀಕೆ ಸಮಾಜದ ನಡುವೆಯೇ ಹುಟ್ಟಿಬರಬೇಕಿದೆ. ಜಾತಿವಾದಿಗಳಿಗೆ ಎಷ್ಟು ಬುದ್ಧಿ ಹೇಳಲು ಸಾಧ್ಯವೋ ಆ ಬುದ್ಧಿ ಹೇಳುವ ಕೆಲಸ ಆಗಲೇಬೇಕಿದೆ ಎಂದು ಪುನರುಚ್ಚರಿಸಿದರು.
ಕಾರ್ಯಕ್ರಮದಲ್ಲಿ ಸಮ್ಮುಖ ನೀಡಿರುವ ಆನಂದಪುರ ಮುರುಘಾಮಠದ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಮುಳುಗುಂದ ಮಠದ ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ರುದ್ರಮುನಿ ಸಜ್ಜನ್, ಜಿಲ್ಲಾ ಒಕ್ಕಲಿಗರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶಾಂತಾ ಸುರೇಂದ್ರ, ಧಾರವಾಡದ ಮಹೇಶ್ ಮಾಶಾಲ್, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಮುಖಂಡರಾದ ಎಸ್.ಪಿ.ದಿನೇಶ್, ಬಳ್ಳೇಕರೆ ಸಂತೋಷ್, ಎಸ್.ಪಿ.ಶೇಷಾದ್ರಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶಿವಮೊಗ್ಗದ ಗಾಂಧಿ ಬಸಪ್ಪ ಮತ್ತು ಹಳದಮ್ಮ ಪ್ರತಿಷ್ಠಾನಕ್ಕೆ ಭಾವೈಕ್ಯತಾ ಪ್ರಶಸ್ತಿ ನೀಡಿ ಎಚ್.ಕೆ.ಪಾಟೀಲ ಗೌರವಿಸಿದರು. ಬೆಳಿಗ್ಗೆ 7ಕ್ಕೆ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಮತ್ತು ಶೂನ್ಯ ಪೀಠಾರೋಹಣ ನಡೆಯಿತು. ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯರು ಉದ್ಘಾಟಿಸಿದರು. ನವಲಗುಂದದ ಗವಿಮಠದ ಬಸವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.
ಯಾವುದೇ ಧರ್ಮದಲ್ಲಿ ಸತ್ಯಕ್ಕೆ ನ್ಯಾಯ ಪ್ರಾಮಾಣಿಕತೆಗೆ ಗೆಲುವು. ಅದನ್ನು ಎತ್ತಿಹಿಡಿದವರು ಮಹಾತ್ಮಾಗಾಂಧೀಜಿ. ಅವರನ್ನು ನೆನಪಿಸಿಕೊಂಡು ಗಾಂಧಿ ಬಸಪ್ಪ ಮತ್ತು ಹಳದಮ್ಮ ಕುಟುಂಬದವರಿಗೆ ಬೆಕ್ಕಿನಕಲ್ಮಠದಿಂದ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯಎಚ್.ಕೆ.ಪಾಟೀಲ ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ
ಭಾವೈಕ್ಯ ಪದಕ್ಕೆ ಈಗ ಏನೇನೂ ಬೆಲೆ ಇಲ್ಲ. ಭಾರತೀಯ ಸಂಸ್ಕೃತಿಗೆ ಧಕ್ಕೆಯುಂಟು ಮಾಡುವುದಿಲ್ಲ ಎಂದು ಎಲ್ಲರೂ ತೀರ್ಮಾನ ಕೈಗೊಂಡಾಗ ಮಾತ್ರ ಸಮಾಜದಲ್ಲಿ ಭಾವೈಕ್ಯ ವೃದ್ಧಿಸುತ್ತದೆ. ಭಾವೈಕ್ಯತೆಗೆ ಅದಕ್ಕೆ ಬಸವೇಶ್ವರರ ಕಾಲದಲ್ಲಿ ಬಹಳ ಅರ್ಥವಿತ್ತು. ಎಲ್ಲರನ್ನೂ ಅನುಭವ ಮಂಟಪದಲ್ಲಿ ಒಟ್ಟಿಗೆ ಕರೆದೊಯ್ದ ಸಂದರ್ಭದಲ್ಲಿ ಇತ್ತು. ಆದರೆ ಇಂದು ಬಸವೇಶ್ವರರನ್ನು ಇಂದು ಒಂದು ಜಾತಿ ಉಪಜಾತಿಗೆ ಸೀಮಿತ ಮಾಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು. ‘ಈ ಭಾವೈಕ್ಯ ಸಮ್ಮೇಳನದಲ್ಲಿ ಏನು ನಡೆಯುತ್ತಿದೆ. ಇದಕ್ಕೂ ಜಾತಿ ಲೇಪನ ಬೀಳುತ್ತಿದೆ. ಸರ್ಕಾರದ ಜಾತಿಗಣತಿ ಇಡೀ ಸಮಾಜ ಒಡೆದು ಛಿದ್ರಗೊಳಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಇಡೀ ಸಮಾಜ ಮತ್ತೆ ಒಂದಾಗಬೇಕಿದೆ. ದಾವಣಗೆರೆಯಲ್ಲಿ ಪಂಚಪೀಠಗಳು ಒಂದಾದ ರೀತಿಯಲ್ಲಿ ಸಮಾಜ ಕೂಡ ಒಂದಾಗುತ್ತದೆ’ ಎಂದು ಭವಿಷ್ಯ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.