ADVERTISEMENT

ಶಿವಮೊಗ್ಗ| ಪ್ರೀತಿ, ಗೌರವ ಭಕ್ತಿಯ ಮೊತ್ತವೇ ನಾಥ್ ಕವಿತೆಗಳು: ಹುಸೇನ್ ಅಫೀಜ್

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 4:28 IST
Last Updated 9 ಫೆಬ್ರುವರಿ 2026, 4:28 IST
ಶಿವಮೊಗ್ಗದ ಸಹ್ಯಾದ್ರಿ ಕಲಾ  ಕಾಲೇಜಿನಲ್ಲಿ ಆಯೋಜಿಸಿದ್ದ  ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಲೇಖಕ ಪ್ರೊ.ಎಸ್.ಎಂ. ಅಕೀಲ್‌ ಅವರ ‘ನಿದಾ-ಎ-ರಹಮತ್ ಪುಸ್ತಕ’ ಬಿಡುಗಡೆಗೊಳಿಸಲಾಯಿತು
ಶಿವಮೊಗ್ಗದ ಸಹ್ಯಾದ್ರಿ ಕಲಾ  ಕಾಲೇಜಿನಲ್ಲಿ ಆಯೋಜಿಸಿದ್ದ  ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಲೇಖಕ ಪ್ರೊ.ಎಸ್.ಎಂ. ಅಕೀಲ್‌ ಅವರ ‘ನಿದಾ-ಎ-ರಹಮತ್ ಪುಸ್ತಕ’ ಬಿಡುಗಡೆಗೊಳಿಸಲಾಯಿತು   

ಶಿವಮೊಗ್ಗ: ‘ಪ್ರೀತಿ, ಗೌರವ ಮತ್ತು ಭಕ್ತಿಯ ಮೊತ್ತವೇ ನಾಥ್ ಕವಿತೆಗಳ ಸಂಗಮ. ನಾಥ್ ಎಂದರೆ ಇಸ್ಲಾಮಿಕ್ ಸಾಹಿತ್ಯದಲ್ಲಿ ಒಂದು ಆಧ್ಯಾತ್ಮಿಕ ಭಕ್ತಿಪೂರ್ಣ ಕವಿತೆಯ ರೂಪ’ ಎಂದು ಉರ್ದು ಅಕಾಡೆಮಿ ಮಾಜಿ ಅಧ್ಯಕ್ಷ  ಅಮ್ಜಾದ್‌ ಹುಸೇನ್ ಅಫೀಜ್ ಕರ್ನಾಟಕಿ ಹೇಳಿದರು.

ಕುವೆಂಪು ವಿಶ್ವವಿದ್ಯಾಲಯ ಹಾಗೂ ಸಹ್ಯಾದ್ರಿ ಕಲಾ ಕಾಲೇಜು ಉರ್ದುವಿಭಾಗದ ಸಂಯುಕ್ತಾಶ್ರಯದಲ್ಲಿ ಶನಿವಾರ ಸಹ್ಯಾದ್ರಿ ಕಾಲೇಜಿನಲ್ಲಿ ಆಯೋಜಿಸಿದ್ದ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ `ಕರ್ನಾಟಕ ಮೇ ಉರ್ದು ನಾಥ್ ಗೋಯಿ’ ಕಾರ್ಯಕ್ರಮದಲ್ಲಿ ಲೇಖಕ ಪ್ರೊ.ಎಸ್.ಎಂ. ಅಕೀಲ್‌ ಅವರ ‘ನಿದಾ-ಎ-ರಹಮತ್ ಪುಸ್ತಕ’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಬರವಣಿಗೆ ಅಷ್ಟು ಸುಲಭವಲ್ಲ. ಅದರಲ್ಲೂ ಕವಿತೆಗಳ ಬರೆಯುವುದು ಕಷ್ಟಸಾಧ್ಯವೇ ಸರಿ. ಕಿರಿದಾದ ಪದಗಳಲ್ಲಿ ಹಿರಿದಾದ ಅರ್ಥಗಳನ್ನು ತುಂಬಬಹುದಾಗಿದೆ. ಈ ಹಿನ್ನಲೆಯಲ್ಲಿ ಪ್ರೊ.ಅಕೀಲ್‌ ಅವರು ತಮ್ಮ ಪುಸ್ತಕದಲ್ಲಿ ಅತ್ಯುತ್ತಮವಾಗಿ ಕವಿತೆಗಳ ಹಿಡಿದಿಟ್ಟಿದ್ದಾರೆ. ಇದೆಲ್ಲಾ ನಮಗೆ ದಾರಿದೀಪ. ಇಂದಿನ ಯುವಜನಾಂಗ ಬರವಣಿಗೆಯತ್ತ ಹೆಚ್ಚು ಗಮನ ಕೊಡಬೇಕಾಗಿದೆ. ಇದು ದೇಶದ ಬೆಳವಣಿಗೆಯ ಸಂಕೇತವೂ ಹೌದು ಎಂದರು.

ADVERTISEMENT

ಮುಖ್ಯ ಅತಿಥಿಯಾಗಿ ಮಾತನಾಡಿದ ಕಲ್ಬುರ್ಗಿ ಕೆಬಿಎನ್ ವಿವಿಯ ಉರ್ದು ವಿಭಾಗದ ಮುಖ್ಯಸ್ಥ ಪ್ರೊ.ಹಮೀದ್ ಅಕ್ಬರ್ ಮಾತನಾಡಿ, ‘ಅಕೀಲ್ ಶಾಹ್‌ಮದಾರ್ ಅವರ ಪುಸ್ತಕವು ಪ್ರವಾದಿ ಮಹಮ್ಮದ್ ಪೈಂಗಬರ್‌ ಅವರ ನಡೆ-ನುಡಿ ಜೀವನ ಶೈಲಿಯ ಬಗ್ಗೆ ಅತ್ಯಂತ ಮನೋಜ್ಞವಾಗಿ ಚಿತ್ರಿತವಾಗಿದೆ. ಮತ್ತು ನಾಥ್ ಬಗ್ಗೆ ಅವರು ಸರಳವಾಗಿ ವಿವರಿಸಿದ್ದಾರೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಭಾರ ಪ್ರಾಂಶುಪಾಲ ಕೆ.ಎನ್. ಮಂಜುನಾಥ್, ‘ಮಾನವ ಜನಾಂಗವನ್ನು ಸಂಕುಚಿತ ಭಾವನೆಯಿಂದ ತೊಡೆದು ಹಾಕುವುದೇ ಬರವಣಿಗೆ ಮತ್ತು ಸಾಹಿತ್ಯದ ಉದ್ದೇಶವಾಗಿದೆ. ನೈತಿಕ ಪಾಠವನ್ನು ಕಲಿಸುವ ಮೂಲಕ ಜನರಲ್ಲಿ ಪ್ರೀತಿ, ವಿಶ್ವಾಸ, ಸಹಬಾಳ್ವೆ, ಪರಸ್ಪರ ಹೊಂದಾಣಿಕೆ, ಜಾತಿಬೇಧ ಮರೆತು ಜೀವನ ಸಾಗಿಸುವುದೇ ಎಲ್ಲಾ ಸಾಹಿತ್ಯಗಳ ಉದ್ದೇಶ’ ಎಂದರು.

ಕಾರ್ಯಕ್ರಮದಲ್ಲಿ ಪ್ರೊ.ಎಸ್.ಎಂ.ಅಕೀಲ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಉರ್ದು ಪತ್ರಿಕೆಯ ಸಂಪಾದಕ ಮುದಾಸೀರ್ ಅಹ್ಮದ್, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಮುಸಾವರ್ ಪಾಷಾ, ಉರ್ದು ವಿಭಾಗದ ಮುಖ್ಯಸ್ಥ ಕೆ.ಶಫೀವುಲ್ಲಾ, ಕಾರ್ಯಕ್ರಮ ಸಂಚಾಲಕಿ ಡಾ.ಶಬೀನಾ ತಾಲತ್ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.