ಶಿವಮೊಗ್ಗ: ‘ಪ್ರೀತಿ– ವಿಶ್ವಾಸಕ್ಕೆ ಮತ್ತೊಂದು ಹೆಸರೇ ಶ್ರೀ ಕೃಷ್ಣ. ಎಲ್ಲರೊಂದಿಗೆ ಅತ್ಯಂತ ಪ್ರೀತಿಯಿಂದ ಬೆರೆಯುವ ಗುಣವಿರುವ ಶ್ರೀ ಕೃಷ್ಣನ ವ್ಯಕ್ತಿತ್ವವನ್ನೇ ಹೊಂದಿರುವ ಗೊಲ್ಲರ ಸಮಾಜ ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದಿ ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಹೇಳಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಗೊಲ್ಲರ (ಯಾದವ) ಸಂಘದ ಸಂಯುಕ್ತಾಶ್ರಯದಲ್ಲಿ ಶನಿವಾರ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಷ್ಣುವಿನ ಎರಡನೇ ಅವತಾರವೇ ಶ್ರೀಕೃಷ್ಣ. ಪ್ರೀತಿ ವಿಶ್ವಾಸದಿಂದ ಎಲ್ಲರೊಂದಿಗೆ ಬೆರೆಯುವ ಗುಣ, ವ್ಯಕ್ತಿತ್ವ ಅವರದ್ದು. ಈ ಗುಣ ಗೊಲ್ಲರ ಸಮುದಾಯದಲ್ಲಿ ಬೆರೆತಿದೆ. ಇವರು ಸಂಘ ಜೀವಿಗಳು. ಈ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿ ಮುಖ್ಯವಾಹಿನಿಗೆ ತರುವ ಪ್ರಯತ್ನ ಸರ್ಕಾರ ಮಾಡುತ್ತಿದೆ. ಅವರ ಬೇಡಿಕೆಗಳಿಗೆ ಸರ್ಕಾರ ಖಂಡಿತ ಸ್ಪಂದಿಸಲಿದೆ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ಮಾತನಾಡಿ, ಯಾದವ ಸಮುದಾಯ ಸಾಮಾಜಿಕ, ಶೈಕ್ಷಣಿಕವಾಗಿ, ರಾಜಕೀಯವಾಗಿ ಬಲಿಷ್ಠವಾಗಬೇಕು. ಜನರು ಆರ್ಥಿಕವಾಗಿ ಅಭಿವೃದ್ಧಿಯಾದರೆ ಅದು ದೇಶದ ಅಭಿವೃದ್ಧಿ. ಹೀಗಾಗಿ ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳ ಜಾರಿಗೊಳಿಸಿದೆ ಎಂದರು.
ಜಿಲ್ಲಾ ಗೊಲ್ಲರ (ಯಾದವ) ಸಂಘದ ಅಧ್ಯಕ್ಷ ಕೆ.ಅಂಜನಪ್ಪ, ತಾಲ್ಲೂಕು ಗೊಲ್ಲರ ಸಂಘದ ಅಧ್ಯಕ್ಷ ಎಸ್.ಎಚ್.ಜಗದೀಶ್, ಡಿಸಿ ಕಚೇರಿ ತಹಶೀಲ್ದಾರ್ ಲಿಂಗರಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಹಾಜರಿದ್ದರು.
‘ಜಗತ್ತನ್ನು ಸೌಹಾರ್ದದಿಂದ ಬೆಸೆದ ಶ್ರೀಕೃಷ್ಣ’
ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಜಿ.ಕೆ ಪ್ರೇಮ ಮಾತನಾಡಿ ಇಡೀ ವಿಶ್ವವೇ ಕೊಂಡಾಡುವ ಶ್ರೀ ಕೃಷ್ಣನ ಜನನ ಬಾಲ ಲೀಲೆ ತುಂಟಾಟ ಜೀವನ ಚರಿತ್ರೆ ಸಾಮಾನ್ಯವಾಗಿ ಎಲ್ಲರಿಗೆ ಗೊತ್ತಿದೆ. ಅವರಿಗೆ ಬಹು ಆಯಾಮಗಳಿವೆ. ಇಷ್ಟೊಂದು ಆಯಾಮಗಳು ಬೇರೆಯವರಲ್ಲಿ ಕಾಣಲು ಸಾಧ್ಯವಿಲ್ಲ. ಅಷ್ಟು ವೈವಿಧ್ಯಮಯವಾದ ಕೃಷ್ಣನನ್ನು ಕಂಡಿದ್ದೇವೆ. ಇಡೀ ಜಗತ್ತನ್ನು ಸೌಹಾರ್ದಯುತವಾಗಿ ಬೆಸೆಯುವ ಕೃಷ್ಣನ ಕುರಿತು ಹಾಡಿ ಹೊಗಳಿದ ಸಾಕಷ್ಟು ಸಾಹಿತ್ಯವಿದೆ. ಪಂಪ ರನ್ನ ಕುಮಾರವ್ಯಾಸರ ಕಾವ್ಯದಲ್ಲಿ ಮೆರೆಸಲಾಗಿದೆ. ಇಡೀ ಮಹಾಭಾರತ ಕಥೆ ಕೃಷ್ಣನನ್ನೇ ಆವರಿಸಿಕೊಂಡು ಅವನಿಂದಲೇ ಮುಕ್ತಾಯವಾಗುತ್ತದೆ ಎಂದರು. ಶ್ರೀ ಕೃಷ್ಣ ಜಯಂತಿ ಕೇವಲ ಆಚರಣೆ ಆಗಬಾರದು. ನಮ್ಮಂತ ಸಣ್ಣ ಸಣ್ಣ ಸಮುದಾಯದವರು ಒಟ್ಟಿಗೆ ಬೆರೆತು ಕುಂದು ಕೊರತೆ ಚರ್ಚಿಸಿ ಪರಿಹಾರಕ್ಕೆ ವೇದಿಕೆ ಕೂಡ ಆಗಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.