ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿಯ ಸುಶಾಂತ್ ಎನ್. ಪ್ರಭು ತಂದೆ ನರಸಿಂಹಮೂರ್ತಿ ಪ್ರಭು ಮತ್ತು ತಾಯಿ ಸುಜಾತಾ ಜೊತೆಯಲ್ಲಿರುವುದು.
ತೀರ್ಥಹಳ್ಳಿ (ಶಿವಮೊಗ್ಗ): ಶಾಲಾ ದಿನಗಳಲ್ಲಿ ತಂದೆಯೊಂದಿಗೆ ಬೈಕ್‌ನ ನಟ್ಟು, ಬೋಲ್ಟ್ ತಿರುಗಿಸುತ್ತಿದ್ದ ತಾಲ್ಲೂಕಿನ ಮೇಗರವಳ್ಳಿಯ 18 ವರ್ಷದ ಯುವಕ ಸುಶಾಂತ್ ಎನ್. ಪ್ರಭು ಉತ್ತರ ಪ್ರದೇಶದಲ್ಲಿರುವ ‘ಐಐಟಿ–ಕಾನ್ಪುರ’ಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲಿ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ-ಟೆಕ್ ವ್ಯಾಸಂಗ ಮಾಡಲಿದ್ದಾರೆ.
ಸುಶಾಂತ್, ಮೇಗರವಳ್ಳಿಯ ನರಸಿಂಹಮೂರ್ತಿ ಪ್ರಭು ಮತ್ತು ಸುಜಾತಾ ದಂಪತಿಯ ಪುತ್ರ. ನರಸಿಂಹಮೂರ್ತಿ ಸಣ್ಣ ಬೈಕ್ ಗ್ಯಾರೇಜ್ ನಡೆಸುತ್ತಿದ್ದಾರೆ.
ಮೇಗರವಳ್ಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಓದಿರುವ ಸುಶಾಂತ್, ಅಪ್ಪನನ್ನು ನೋಡಿ ಬೈಕ್ ರಿಪೇರಿ ಮಾಡುವ ಕೌಶಲ ಕರಗತ ಮಾಡಿಕೊಂಡಿದ್ದರು. ಬೈಕ್ ಚೈನ್‌ಗಳು ಏಕೆ ಹಾಳಾಗುತ್ತವೆ ಎಂಬ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದರು. 8ನೇ ತರಗತಿಯಲ್ಲಿ ಓದುತ್ತಿದ್ದಾಗ ಪ್ರಾಯೋಗಿಕ ಕಲಿಕೆಯ ಆಧಾರದಲ್ಲಿ ನ್ಯಾಷನಲ್ ಇನೋವೇಷನ್ ಫೌಂಡೇಷನ್ ಆಯೋಜಿಸುವ ಇನ್‌ಸ್ಪೈರ್ ಅವಾರ್ಡ್–2022 ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ತಾನಾಗಿಯೇ ಚೈನ್ ಸರಿಪಡಿಸಿಕೊಳ್ಳುವ ‘ಸೆಲ್ಫ್ ಚೈನ್ ಅಡ್ಜೆಸ್ಟ್‌ಮೆಂಟ್ ಸಿಸ್ಟಂ’ ಎಂಬ ಮಾದರಿ ತಯಾರಿಸಿದ್ದರು. ಇದು ರಾಷ್ಟ್ರಮಟ್ಟಕ್ಕೂ ಆಯ್ಕೆಯಾಗಿತ್ತು.
ಸ್ಪರ್ಧೆಯ ಭಾಗವಾಗಿ ಸುಶಾಂತ್ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ (ಎನ್‌ಐಟಿಕೆ) ಭೇಟಿ ನೀಡಿದ್ದರು. ಈ ವೇಳೆ ಅವರಿಗೆ ಶಿಕ್ಷಕ ರಾಘವೇಂದ್ರ ಎ. ಭಟ್ ಮಾರ್ಗದರ್ಶನ ನೀಡಿದ್ದರು.
‘ಎನ್‌ಐಟಿಕೆ ಕ್ಯಾಂಪಸ್‌ನಿಂದ ಪ್ರಭಾವಿತನಾಗಿದ್ದೆ. ಎಸ್‌ಎಸ್‌ಎಲ್‌ಸಿ ಓದುವಾಗ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ ನಡೆಸುವ ತಪಸ್ ಪರೀಕ್ಷೆಯ ಐದು ಸುತ್ತುಗಳನ್ನು ಯಶಸ್ವಿಯಾಗಿ ಪೂರೈಸಿದ್ದೆ. 14,000 ವಿದ್ಯಾರ್ಥಿಗಳ ಪೈಕಿ 40 ವಿದ್ಯಾರ್ಥಿಗಳು ಮಾತ್ರ ಪಿಯುಸಿ ಉಚಿತ ಶಿಕ್ಷಣಕ್ಕೆ ಆಯ್ಕೆಯಾಗಿದ್ದರು. ಅಲ್ಲಿ ಸೇರಿದ ನಂತರ ಐಐಟಿ ಅಥವಾ ಎನ್‌ಐಟಿ ಬಗ್ಗೆ ತಿಳಿದುಕೊಂಡೆ. ಪ್ರವೇಶ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದು ಐಐಟಿ-ಕಾನ್ಪುರಕ್ಕೆ ಆಯ್ಕೆಯಾಗಿರು ವುದು ಖುಷಿ ಕೊಟ್ಟಿದೆ’ ಎನ್ನುತ್ತಾರೆ ಸುಶಾಂತ್.
‘ಪೌರಕಾರ್ಮಿಕರ ಶ್ರಮ ತಗ್ಗಿಸುವ ಉದ್ದೇಶ’
‘ಭಾರತದಲ್ಲಿ ಡ್ರೈನೇಜ್ ಸ್ವಚ್ಛಗೊಳಿಸಲು ಮಾನವ ಸಂಪನ್ಮೂಲ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಪೌರ ಕಾರ್ಮಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದ್ದು, ಹಲವಾರು ಸಮಸ್ಯೆಗಳೂ ಉದ್ಭವವಾಗುತ್ತಿವೆ. ಯಂತ್ರಗಳ ಸಹಾಯದಿಂದ ಈ ಕೆಲಸ ಮಾಡಿ, ಪೌರ ಕಾರ್ಮಿಕರ ಶ್ರಮ ತಗ್ಗಿಸಬಹುದು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಹೊಸ ಆವಿಷ್ಕಾರ ಮಾಡುವ ಕನಸಿದೆ. ಜೊತೆಗೆ ಸ್ವಂತ ಕಂಪನಿ ಸ್ಥಾಪಿಸಬೇಕೆಂಬ ಬಯಕೆಯೂ ಇದೆ. ತಂದೆಯ ಆಸೆಯಂತೆ ನಾಗರಿಕ ಸೇವಾ ಪರೀಕ್ಷೆ ಬರೆಯುವ ಉದ್ದೇಶವಿದೆ’ ಎನ್ನುತ್ತಾರೆ ಸುಶಾಂತ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.