ADVERTISEMENT

ಮಂಗನ ಕಾಯಿಲೆ: ಮುಂಜಾಗೃತಾ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 1:57 IST
Last Updated 11 ಡಿಸೆಂಬರ್ 2019, 1:57 IST
ತೀರ್ಥಹಳ್ಳಿ ತಾಲ್ಲೂಕಿನ ಸಾಲ್ಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಹಕ್ಕಲಿನಲ್ಲಿ ಮಂಗಳವಾರ ಮಂಗನ ಕಾಯಿಲೆ ಮುಂಜಾಗೃತಾ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ ಸಭೆಯಲ್ಲಿ ಮಾತನಾಡಿದರು.
ತೀರ್ಥಹಳ್ಳಿ ತಾಲ್ಲೂಕಿನ ಸಾಲ್ಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಹಕ್ಕಲಿನಲ್ಲಿ ಮಂಗಳವಾರ ಮಂಗನ ಕಾಯಿಲೆ ಮುಂಜಾಗೃತಾ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ ಸಭೆಯಲ್ಲಿ ಮಾತನಾಡಿದರು.   

ತೀರ್ಥಹಳ್ಳಿ: ‘ಮಂಗನ ಕಾಯಿಲೆ ಬಗ್ಗೆ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ರೋಗದ ಬಗ್ಗೆ ತೀವ್ರ ನಿಗಾ ಇಡಿ’ ಎಂದು ಎಲ್ಲ ಇಲಾಖೆಗಳಿಗೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಸೂಚಿಸಿದರು.

ಮಂಗಳವಾರ ತಾಲ್ಲೂಕಿನ ಸಾಲ್ಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಹಕ್ಕಲು ಗ್ರಾಮದಲ್ಲಿ ವಿವಿಧ ಇಲಾಖೆ ಸಿಬ್ಬಂದಿ ಸಭೆಯಲ್ಲಿ ಅವರು ಮಾತನಾಡಿದರು.

‘ಮಂಗನ ಕಾಯಿಲೆ ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಯಾವುದೇ ಸಾವು ನೋವು ಸಂಭವಿಸುವುದಕ್ಕೆ ಆಸ್ಪದ ನೀಡಬಾರದು. ರೋಗದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಇದೇ ಸಂದರ್ಭದಲ್ಲಿ ಕರಪತ್ರವನ್ನು ಅವರು ಬಿಡುಗಡೆಗೊಳಿಸಿದರು. ಮಂಗನ ಕಾಯಿಲೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದು ಸವಾಲಾಗಿದೆ. ಬೇಸಿಗೆ ಸಂದರ್ಭದಲ್ಲಿ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದ್ದು, ಅಗತ್ಯ ಕ್ರಮಗಳನ್ನು ಆರೋಗ್ಯ ಇಲಾಖೆ ತೆಗೆದುಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

ಶಿವಮೊಗ್ಗ ಪ್ರಯೋಗಾಲಯದ ಉಪ ನಿರ್ದೇಶಕ ಎಸ್.ಕೆ.ಕಿರಣ್ ಮಾತನಾಡಿ, ‘ರೋಗ ಕುರಿತು 24 ಗಂಟೆಗಳ ಒಳಗೆ ರಕ್ತದ ಮಾದರಿಯ ಪರೀಕ್ಷೆ ನಡೆಸಿ ಫಲಿತಾಂಶದ ವರದಿ ನೀಡಲಾಗುವುದು. ಈಗಾಗಲೇ 40 ಸಾವಿರಕ್ಕೂ ಹೆಚ್ಚು ಜನರಿಗೆ ಮಂಗನಕಾಯಿಲೆ ತಡೆಗಟ್ಟುವ ರೋಗ ನಿರೋಧಕ ಲಸಿಕೆ ನೀಡಲಾಗಿದೆ. ಉಣ್ಣೆ ಮೈಗೆ ಅಂಟದಂತೆ ತಡೆಗಟ್ಟುವ ಡಿಎಂಪಿ ತೈಲವನ್ನು ವಿತರಿಸಲಾಗಿದ್ದು ದಾಸ್ತಾನು ಹೊಂದಲಾಗಿದೆ’ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕಲ್ಪನಾ ಪದ್ಮನಾಭ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನವಮಣಿ ರವಿಕುಮಾರ್, ಸಾಲ್ಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ, ಉಪಾಧ್ಯಕ್ಷ ರವೀಂದ್ರ, ಸದಸ್ಯ ಸಂತೋಷ್, ತಹಶೀಲ್ದಾರ್ ಎಂ.ಭಾಗ್ಯಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆಶಾಲತಾ, ತಾಲ್ಲೂಕು ವೈದ್ಯಾಧಿಕಾರಿ ಡಾ.ಅಶೋಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.