ADVERTISEMENT

ಭದ್ರಾವತಿ| ಜ. 24ರಿಂದ ತರಳಬಾಳು ಹುಣ್ಣಿಮೆ; ಕ್ರೀಡೆ, ಸಾಂಸ್ಕೃತಿಕ ಮೆರುಗು

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 4:32 IST
Last Updated 9 ಜನವರಿ 2026, 4:32 IST
<div class="paragraphs"><p>ತರಳಬಾಳು ಹುಣ್ಣಿಮೆ ಮಹೋತ್ಸವ ಮಹಾಮಂಟಪದ ಸಾಂದರ್ಭಿಕ ಚಿತ್ರ</p></div>

ತರಳಬಾಳು ಹುಣ್ಣಿಮೆ ಮಹೋತ್ಸವ ಮಹಾಮಂಟಪದ ಸಾಂದರ್ಭಿಕ ಚಿತ್ರ

   

ಸಿರಿಗೆರೆ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದಲ್ಲಿ ಜ. 24ರಿಂದ ಫೆ. 1ರವರೆಗೆ ನಡೆಯಲಿರುವ ಸಿರಿಗೆರೆ ಮಠದ ತರಳಬಾಳು ಹುಣ್ಣಿಮೆ  ಮಹೋತ್ಸವದ ಸಂಭ್ರಮಕ್ಕೆ ಈ ಬಾರಿ  ಕ್ರೀಡೆ  ಮತ್ತು  ಸಾಂಸ್ಕೃತಿಕ  ಸ್ಪರ್ಧೆಗಳೂ ಜೊತೆಯಾಗುತ್ತಿದ್ದು, ಈ ಮಹೋತ್ಸವವು ಯುವ ಪ್ರತಿಭೆಗಳನ್ನು ಸೆಳೆಯಯವ ಮಾದರಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.

ಜ. 25ರಂದು ಭದ್ರಾವತಿ, ಕಡೂರು, ಚನ್ನಗಿರಿ, ತರೀಕೆರೆ, ಶಿವಮೊಗ್ಗ ತಾಲ್ಲೂಕಿನ ತಂಡಗಳಿಗೆ ಭಜನಾ ಸ್ಪರ್ಧೆಗಳು ನಡೆಯಲಿವೆ. 26ರಂದು ಗಣರಾಜ್ಯೋತ್ಸದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ದೇಶಭಕ್ತಿ ಗೀತೆಗಳ ನೃತ್ಯ ಕಾರ್ಯಕ್ರಮ ನಡೆಯಲಿದೆ. 27ರಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧೆಗಳಲ್ಲಿ ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಪಟುಗಳು ಭಾಗಿಯಾಗಲಿದ್ದಾರೆ.

ADVERTISEMENT

ಜ. 28ರಂದು ಭದ್ರಾವತಿ, ಕಡೂರು, ಚನ್ನಗಿರಿ, ತರೀಕೆರೆ ಮತ್ತು ಶಿವಮೊಗ್ಗ ತಾಲ್ಲೂಕುಗಳಲ್ಲಿನ ತಂಡಗಳಿಗೆ ವೀರಗಾಸೆ ಸ್ಪರ್ಧೆ ಏರ್ಪಡಿಸಲಾಗಿದೆ. 29ರಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಚನ ನೃತ್ಯ ಮತ್ತು ಜನಪದ ನೃತ್ಯ ಸ್ಪರ್ಧೆಗಳು ನಡೆಯಲಿವೆ.

ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ  ಜ. 30ರಂದು ವಿಜ್ಞಾನ ವಸ್ತು ಪ್ರದರ್ಶನ ನಡೆಯಲಿದೆ.

ರಾಜ್ಯದಲ್ಲಿನ ಹಲವು ಪ್ರತಿಭೆಗಳನ್ನು ಗುರುತಿಸುವ ಪ್ರತಿಭಾನ್ವೇಷಣೆ ಕಾರ್ಯಕ್ರಮ ಜ. 31ರಂದು ನಡೆಯಲಿದೆ. ಇದರಲ್ಲಿ ಸಂಗೀತ, ನೃತ್ಯ ಮತ್ತು ಅಭಿನಯ ವಿಭಾಗದಲ್ಲಿ ಸಾಧನೆ ಮಾಡುತ್ತಿರುವ ಕಲಾವಿದರು ಭಾಗಿಯಾಗಲಿದ್ದಾರೆ. ಫೆ.1ರಂದು ಕರ್ನಾಟಕದ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸುವ ‘ಜಾನಪದ ಕಲಾ’ ಪ್ರದರ್ಶನ ನಡೆಯಲಿದೆ.

31ರಂದು ರಾಜ್ಯಮಟ್ಟದ ಮುಕ್ತ ಕುಸ್ತಿ ಪಂದ್ಯಾವಳಿ ಹಾಗೂ ಫೆ. 1ರಂದು ರಾಷ್ಟ್ರಮಟ್ಟದ ಮಹಿಳಾ ಮತ್ತು ಪುರುಷರ ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ.

ಈ ಎಲ್ಲಾ ಸ್ಪರ್ಧೆಗಳಲ್ಲಿ ವಿಜೇತರಾಗುವ ತಂಡಗಳಿಗೆ ಆಕರ್ಷಕ ನಗದು ಬಹುಮಾನ, ಫಲಕ ನೀಡಲಾಗುವುದು ಎಂದು ಸಿರಿಗೆರೆಯ ತರಳಬಾಳು ಮಠದ ಪ್ರಕಟಣೆ ತಿಳಿಸಿದೆ.

ಕ್ರೀಡಾಕೂಟ

ಜ. 25ರಂದು ಪುರುಷರ ಆಹ್ವಾನಿತ ಕಬಡ್ಡಿ ಟೂರ್ನಿ, 26ರಂದು ವಾಲಿಬಾಲ್‌ ಟೂರ್ನಿ, 27ರಂದು ಮಹಿಳಾ ಮತ್ತು ಪುರುಷರ ಗ್ರಾಮೀಣ ಕ್ರೀಡಾ ಸ್ಪರ್ಧೆಗಳು, 28ರಂದು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕಬಡ್ಡಿ, ವಾಲಿಬಾಲ್‌, ಥ್ರೋಬಾಲ್‌ ಹಾಗೂ ಚೆಸ್‌ ಸ್ಪರ್ಧೆಗಳು, 29ರಂದು ಪ್ರೌಢಶಾಲಾ ವಿದ್ಯಾರ್ಥಿಗಳ ಕಬಡ್ಡಿ, ವಾಲಿಬಾಲ್‌, ಥ್ರೋಬಾಲ್‌ ಮತ್ತು ಚೆಸ್‌ ಸ್ಪರ್ಧೆಗಳು ನಡೆಯಲಿವೆ. 30ರಂದು ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.