ADVERTISEMENT

ಭದ್ರಾವತಿ| ತರಳಬಾಳು ಹುಣ್ಣಿಮೆ ಮಹೋತ್ಸವ ಜ.24ರಿಂದ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 2:36 IST
Last Updated 21 ಜನವರಿ 2026, 2:36 IST
ಭದ್ರಾವತಿಯ ತರಳಬಾಳು ಹುಣ್ಣಿಮೆಯ ಮಹಾಮಂಟಪದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ.ಸಂಗಮೇಶ ಹಾಗೂ ಎಚ್.ಆರ್.ಬಸವರಾಜಪ್ಪ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದರು
ಭದ್ರಾವತಿಯ ತರಳಬಾಳು ಹುಣ್ಣಿಮೆಯ ಮಹಾಮಂಟಪದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ.ಸಂಗಮೇಶ ಹಾಗೂ ಎಚ್.ಆರ್.ಬಸವರಾಜಪ್ಪ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದರು   

ಭದ್ರಾವತಿ: ಉಕ್ಕಿನ ನಗರಿಯ ವಿಐಎಸ್ಎಲ್ ಏರೋ ಡ್ರಮ್ ಮೈದಾನದಲ್ಲಿ ಜ. 24 ರಿಂದ ಫೆ.1 ರವರೆಗೆ ‘ತರಳಬಾಳು ಹುಣ್ಣಿಮೆ ಮಹೋತ್ಸವ’ ನಡೆಯಲಿದೆ. ಇದರ ಅಂಗವಾಗಿ ಸಿದ್ಧವಾಗುತ್ತಿರುವ ಮಹಾಮಂಟಪದಲ್ಲಿ ಮಂಗಳವಾರ ತರಳಬಾಳು ಹುಣ್ಣಿಮೆ ಮಹೋತ್ಸವ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ. ಸಂಗಮೇಶ ಹಾಗೂ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದರು. 

ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಚ್.ಆರ್.ಬಸವರಾಜಪ್ಪ, ತರಳಬಾಳು ಬೃಹನ್ಮಠ 76 ವರ್ಷಗಳಿಂದ ಈ ವಾರ್ಷಿಕ ಸಮಾರಂಭ ನಡೆಸಿಕೊಂಡು ಬಂದಿದೆ. ಈ ಬಾರಿ ಭದ್ರಾವತಿ ನಗರದಲ್ಲಿ 9 ದಿನ ನಡೆಯಲಿದೆ. ಸಿರಿಗೆರೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿವೆ ಎಂದರು.

ಜ. 24ರಂದು ಸಂಜೆ 6.30ಕ್ಕೆ ಮೊದಲ ದಿನದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಾನಪದ ವಿದ್ವಾಂಸ ಶಂಭು ವಿ. ಬಳಿಗಾರ್, ಕುವೆಂಪು ವಿವಿ ಕುಲಪತಿ ಶರತ್ ಅನಂತಮೂರ್ತಿ, ಎನ್ಎಸ್ಎಸ್ ಅಧಿಕಾರಿ ಶುಭಾ ಮರವಂತೆ, ಕಲಾವಿದ ಅರುಣ್ ಸಾಗರ್ ಉಪನ್ಯಾಸ ನೀಡಲಿದ್ದಾರೆ. ಶಾಸಕರಾದ ಎಂ. ಚಂದ್ರಪ್ಪ, ಶಾರದಾ ಪೂರ್ಯಾನಾಯ್ಕ ಹಾಗೂ ಭದ್ರಾವತಿ ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ADVERTISEMENT

ಪ್ರತಿದಿನ ವಿವಿಧ ವಿಷಯಗಳ ಬಗ್ಗೆ ಕಾರ್ಯಕ್ರಮ ನಡೆಯಲಿವೆ. ಸ್ವಾಮೀಜಿಗಳಿಂದ ಆಶೀರ್ವಚನ, ವಿದ್ವಾಂಸರಿಂದ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಕಲೆ ಮತ್ತು ಸಂಸ್ಕೃತಿ, ಆರೋಗ್ಯ ಮತ್ತು ಸಮಾಜ, ರಾಜಕಾರಣ, ಸಾಹಿತ್ಯ ಮತ್ತು ಶಿಕ್ಷಣ, ಸರ್ವಧರ್ಮ ಸಮನ್ವಯ, ಕೃಷಿ, ಧರ್ಮ, ವಿಜ್ಞಾನ ಸೇರಿದಂತೆ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಮಹಾಮಂಟಪದ ಆವರಣದಲ್ಲಿ ಪ್ರತಿದಿನ ಬೆಳಿಗ್ಗೆ ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆ ನಡೆಯಲಿವೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ತಿಳಿಸಿದರು. 
 
ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ಸದಸ್ಯ ಬಿ.ಕೆ. ಮೋಹನ್, ಪ್ರಮುಖರಾದ ಬಿ.ಎಸ್. ಗಣೇಶ್, ತೀರ್ಥಯ್ಯ, ಸಂಜೀವ್ ಕುಮಾರ್, ವಿಜಯಕುಮಾರ್, ಮಲ್ಲೇಶ್ ಗೌಡ, ಡಿ.ಜಿ. ಹಳ್ಳಿ ಶಾಂತಣ್ಣ, ಕೆ.ಜಿ. ರವಿಕುಮಾರ್, ಸಿದ್ಧಲಿಂಗಯ್ಯ, ನಾಗರಾಜ್, ರಾಜಣ್ಣ, ಶಿವಕುಮಾರ್, ಡಿವೈಎಸ್ಪಿ ಪ್ರಕಾಶ್ ರಾಥೋಡ್, ನಗರಸಭೆ ಆಯುಕ್ತ ಕೆ.ಎನ್. ಹೇಮಂತ್ ಇದ್ದರು.  

₹4 ಕೋಟಿ ವೆಚ್ಚದಲ್ಲಿ ತರಳಬಾಳು ಹುಣ್ಣಿಮೆ ನಡೆಯುತ್ತಿದೆ. ಇದಕ್ಕೆ ಮಠದಿಂದ ಹಣ ಕೊಡುವುದಿಲ್ಲ. ಮಹೋತ್ಸವಕ್ಕಾಗಿ ಸಂಗ್ರಹಿಸಿ ಉಳಿದ ಹಣವನ್ನು ಮಠಕ್ಕೆ ನೀಡುವುದಿಲ್ಲ. ಬದಲಿಗೆ ಮಹೋತ್ಸವದ ನೆನಪಿಗೆ ಗುರುತಿಸುವ ಯೋಜನೆಗೆ ಬಳಸಲಾಗುವುದು
ಎಚ್.ಆರ್.ಬಸವರಾಜಪ್ಪ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ

ಎಲ್ಲರ ಸಹಕಾರದೊಂದಿಗೆ ಹುಣ್ಣಿಮೆಗೆ ಸಿದ್ಧತೆ: ಸಂಗಮೇಶ್ 38 ವರ್ಷಗಳ ನಂತರ ಭದ್ರಾವತಿ ನಗರದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಯುತ್ತಿದೆ. ಇದಕ್ಕಾಗಿ ಎಲ್ಲರ ಸಹಕಾರದೊಂದಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲ ಸಮಾಜ ಬಾಂಧವರು ಯಶಸ್ಸಿಗೆ ಸಹಕಾರ ನೀಡಬೇಕು ಎಂದು ಶಾಸಕ ಬಿ.ಕೆ. ಸಂಗಮೇಶ ಮನವಿ ಮಾಡಿದರು. 100 ಎಕರೆಗೂ ಅಧಿಕ ಪ್ರದೇಶದಲ್ಲಿ ಸುಸಜ್ಜಿತ ವ್ಯವಸ್ಥೆಯೊಂದಿಗೆ ಸಮಾವೇಶಕ್ಕೆ ಸಿದ್ಧತೆ ನಡೆದಿದೆ. ಮಹಾಮಂಟಪದ ಆವರಣದಲ್ಲಿ ಭಜನಾ ಸ್ಪರ್ಧೆ ಭಾಷಣ ವೀರಗಾಸೆ ವಚನ ನೃತ್ಯ ಜನಪದ ವಿಜ್ಞಾನ ವಸ್ತು ಪ್ರದರ್ಶನ ಯೋಗಾಸನ ಕುಸ್ತಿ ಪಂದ್ಯಾವಳಿ ನಡೆಯಲಿವೆ. ಮಹೋತ್ಸವಕ್ಕೆ ಎಲ್ಲಾ ಸಮಾಜ ಬಾಂಧವರು ಧರ್ಮದವರು ಸಹಕಾರ ನೀಡಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.