ಶಿಕಾರಿಪುರ: ಶಿಕ್ಷಕಿಯೊಬ್ಬರು ಕಳೆದ 26ವರ್ಷದಿಂದ ನಿಯೋಜನೆ ಮೇಲಿದ್ದು ಸ್ಥಳೀಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗಿದೆ. ಕೂಡಲೇ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಸಾಲೂರು ಗ್ರಾಮದ ಸರ್ಕಾರಿ ಶಾಲೆಗೆ ಬೀಗ ಹಾಕಿದ ಗ್ರಾಮಸ್ಥರು, ಪೋಷಕರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.
ಗ್ರಾ.ಪಂ. ಮಾಜಿ ಅಧ್ಯಕ್ಷ ಶೇಖರನಾಯ್ಕ ಮಾತನಾಡಿ, ‘ದಾಖಲೆ ಪ್ರಕಾರ ಶಿಕ್ಷಕಿಯೊಬ್ಬರು 1999ರಲ್ಲಿ ನಿಯೋಜನೆ ಮೇರೆಗೆ ಶಿರಾಳಕೊಪ್ಪ ಸರ್ಕಾರಿ ಶಾಲೆಗೆ ತೆರಳಿದ್ದು ಅಲ್ಲಿಂದ ಇಲ್ಲಿಯವರೆಗೂ ಪ್ರತಿವರ್ಷ ನಿಯೋಜನೆ ವಿಸ್ತರಿಸಿಕೊಳ್ಳುತ್ತಿದ್ದಾರೆ. ಕಳೆದ ಹಲವು ವರ್ಷದಿಂದ ಶಾಲಾಭಿವೃದ್ಧಿ ಸಮಿತಿ ನಿಯೋಜನೆ ರದ್ದತಿಗೆ ಪ್ರಯತ್ನ ಫಲಕೊಟ್ಟಿಲ್ಲ. ಜೂನ್ ತಿಂಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆದೇಶ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಡಿಡಿಪಿಐ, ಬಿಇಒ ಕಚೇರಿಯ ಅಧಿಕಾರಿಗಳ ಕುಮ್ಮಕ್ಕು ಇದ್ದರೆ ಮಾತ್ರ ಇಂತಹ ಘಟನೆ ಇರಲು ಸಾಧ್ಯ. ಅಧಿಕಾರಿಗಳೇ ಸರ್ಕಾರ ನಡೆಸುವುದು ಜನಪ್ರತಿನಿಧಿಗಳು ಅಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ. ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಇಂತಹದ್ದೊಂದು ಘಟನೆ ನಡೆದಿರುವುದು ಆಶ್ಚರ್ಯಕರ ರಾಜ್ಯದಲ್ಲಿ ಇಂತಹ ಇನ್ನೆಷ್ಟು ಪ್ರಕರಣ ಇರಬಹುದು ಸಚಿವರು ಕೂಡಲೇ ಶಿಕ್ಷಕಿ ನಿಯೋಜನೆ ರದ್ದುಗೊಳಿಸಿ ಮೂಲ ಸ್ಥಳದಲ್ಲಿ ಕೆಲಸಕ್ಕೆ ಹಾಜರಾಗುವಂತೆ ಮಾಡಬೇಕು ಇಲ್ಲವೆ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸುವುದಾಗಿ’ ಎಚ್ಚರಿಸಿದರು.
ಶಾಲೆಯಲ್ಲಿ ಶಿಕ್ಷಕರ ಕೊರತೆ ಕಾರಣಕ್ಕೆ ವಿದ್ಯಾರ್ಥಿಗಳ ಕಲಿಕೆ ಗುಣಮಟ್ಟ ಕುಸಿದಿದೆ ಇನ್ನೂ ಇಬ್ಬರು ಶಿಕ್ಷಕರು ಅಗತ್ಯವಿರುವ ಶಾಲೆಯಲ್ಲಿ ನಿಯೋಜನೆ ಮೇರೆಗೆ ಬೇರೆ ಶಾಲೆಗೆ ಕಳುಹಿಸಿರುವುದು ಸರಿಯಲ್ಲ ಸಾಂಕೇತಿಕ ಪ್ರತಿಭಟನೆಗೆ ಸಮಸ್ಯೆ ಪರಿಹಾರ ಆಗದಿದ್ದರೆ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸುವುದಾಗಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶನಾಯ್ಕ ಹೇಳಿದರು.
ಗ್ರಾ.ಪಂ. ಅಧ್ಯಕ್ಷ ಹನುಮಂತನಾಯ್ಕ, ರವಿನಾಯ್ಕ, ಸರವಣ ಚಂದ್ರು ಪೋಷಕರು, ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.