ADVERTISEMENT

ಶಿಕ್ಷಕ ಇಮ್ತಿಯಾಜ್ ಕೊಲೆ: ಪತ್ನಿ, ಪ್ರಿಯಕರನಿಗೆ ಮರಣದಂಡನೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 4:26 IST
Last Updated 24 ಆಗಸ್ಟ್ 2025, 4:26 IST
ಲಕ್ಷ್ಮಿ
ಲಕ್ಷ್ಮಿ   

ಶಿವಮೊಗ್ಗ: ಸರ್ಕಾರಿ ಶಾಲೆ ಶಿಕ್ಷಕರೊಬ್ಬರನ್ನು ಕ್ರೂರವಾಗಿ ಕೊಲೆ ಮಾಡಿದ ಆರೋಪ ಸಾಬೀತಾದ ಕಾರಣ ಮೃತರ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ಮರಣದಂಡನೆ ವಿಧಿಸಿ ಭದ್ರಾವತಿಯ ನಾ‌ಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶನಿವಾರ ಆದೇಶಿಸಿದೆ.

2016ರ ಜುಲೈ 7ರಂದು ಭದ್ರಾವತಿಯ ಜನ್ನಾಪುರದಲ್ಲಿ ಶಿಕ್ಷಕ ಇಮ್ತಿಯಾಜ್ ಅಹಮದ್ ಅವರನ್ನು ಕೊಲೆ ಮಾಡಿ ಮೃತದೇಹವನ್ನು ನೈಲಾನ್ ದಾರದಲ್ಲಿ ಕಟ್ಟಿ ಭದ್ರಾವತಿಯ ಹೊಸಸೇತುವೆ ಸಮೀಪ ಭದ್ರಾ ನದಿಯಲ್ಲಿ ಎಸೆಯಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ್ದ ನ್ಯೂಟೌನ್ ಠಾಣೆ ಪೊಲೀಸರು ಇಮ್ತಿಯಾಜ್ ಪತ್ನಿ, ಶಿಕ್ಷಕಿ ಲಕ್ಷ್ಮಿ (29), ಆಕೆಯ ಪ್ರಿಯಕರ, ಜನ್ನಾಪುರದ ಎನ್‌.ಟಿ.ರಸ್ತೆಯ ನಿವಾಸಿ ಕೃಷ್ಣಮೂರ್ತಿ ಅಲಿಯಾಸ್ ಕಿಟ್ಟಿ (30) ಹಾಗೂ ಈತನ ಸ್ನೇಹಿತ ಶಿವರಾಜ್ ಅಲಿಯಾಸ್ ಶಿವು (32) ಎಂಬುವವರನ್ನು ಬಂಧಿಸಿದ್ದರು. 

ADVERTISEMENT

ಇಮ್ತಿಯಾಜ್ ಹಾಗೂ ಲಕ್ಷ್ಮಿ ಪ್ರೀತಿಸಿ ವಿವಾಹವಾಗಿದ್ದರು. ನಂತರ ಆಕೆ, ಬಾಲ್ಯ ಸ್ನೇಹಿತ, ಚಾಲಕನಾಗಿದ್ದ ಕೃಷ್ಣಮೂರ್ತಿ ಜೊತೆ ಸ್ನೇಹ ಬೆಳೆಸಿದ್ದಳು. ಅದು ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಪತ್ನಿಯು ಪ್ರಿಯಕರನ ಜೊತೆ ಸಲುಗೆಯಿಂದ ಇರುವುದನ್ನು ಇಮ್ತಿಯಾಜ್ ವಿರೋಧಿಸಿದ್ದರು. ಹೀಗಾಗಿ ಜನ್ನಾಪುರದ ಮನೆಯಲ್ಲಿ ಅವರ ತಲೆಗೆ ರಾಡ್ ಮತ್ತು ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದರು.

ತನಿಖೆ ನಡೆಸಿದ್ದ ಭದ್ರಾವತಿ ನಗರ ವಿಭಾಗದ ಆಗಿನ ಇನ್‌ಸ್ಪೆಕ್ಟರ್‌ಗಳಾದ ಪ್ರಭು ಬಿ.ಸೂರಿನ್ ಹಾಗೂ ಟಿ.ಕೆ.ಚಂದ್ರಶೇಖರ್ ನ್ಯಾಯಾಲಯಕ್ಕೆ ದೋಷಾರೋಪ‍ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್‌ ಅವರು ಲಕ್ಷ್ಮಿ ಹಾಗೂ ಕೃಷ್ಣಮೂರ್ತಿಗೆ ಮರಣದಂಡನೆ ಹಾಗೂ ಮತ್ತೊಬ್ಬ ಆರೋಪಿ ಶಿವರಾಜ್‌ಗೆ ಏಳು ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

ಕೃಷ್ಣಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.