ADVERTISEMENT

ಜ. 3ರಿಂದ ಬೆಕ್ಕಿನ ಕಲ್ಮಠದ ಗುರುಬಸವ ಶ್ರೀ ಪುಣ್ಯಸ್ಮರಣೆ, ಶರಣ ಸಾಹಿತ್ಯ ಸಮ್ಮೇಳನ

ಸಂಸದ ಬಿ.ವೈ.ರಾಘವೇಂದ್ರ, ಲೇಖಕಿ ಜಯಶ್ರೀ ದಂಡೆ, ಪ್ರೊ.ಸಿ.ನಾಗಭೂಷಣಗೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 5:26 IST
Last Updated 1 ಜನವರಿ 2026, 5:26 IST
ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ
ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ   

ಶಿವಮೊಗ್ಗ: ಇಲ್ಲಿನ ಬೆಕ್ಕಿನಕಲ್ಮಠದ ಗುರುಬಸವ ಭವನದಲ್ಲಿ ಜ.3ರಿಂದ 5ರ ವರೆಗೆ ಲಿಂಗೈಕ್ಯ ಗುರುಬಸವ ಮಹಾಸ್ವಾಮಿಗಳ 114ನೇ ಪುಣ್ಯಸ್ಮರಣೋತ್ಸವ ಆಯೋಜಿಸಲಾಗಿದೆ.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಕಾರ್ಯಕ್ರಮದ ವಿವರ ನೀಡಿದರು. ಈ ವರ್ಷದ ಗುರುಬಸವಶ್ರೀ ಪ್ರಶಸ್ತಿಯನ್ನು ಸಂಸದ ಬಿ.ವೈ.ರಾಘವೇಂದ್ರ, ಅಕ್ಕಮಹಾದೇವಿ ಪ್ರಶಸ್ತಿಯನ್ನು ಕಲಬುರ್ಗಿಯ ಸಾಹಿತಿ ಡಾ.ಜಯಶ್ರೀ ದಂಡೆ ಅವರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು. 

ಜ.3ರ ಸಂಜೆ 5 ಗಂಟೆಗೆ 556ನೇ ಶಿವಾನುಭವ ಗೋಷ್ಠಿ, ಗುರುಬಸವಶ್ರೀ ಹಾಗೂ ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕನಕಪುರ ದೇಗುಲಮಠದ ಚನ್ನಬಸವೇಶ್ವರ ಮಹಾಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಾಸಕ ಎಸ್.ಎನ್.ಚನ್ನಬಸಪ್ಪ ಮಠದ ದಿನದರ್ಶಿಕೆ ಬಿಡುಗಡೆ ಮಾಡುವರು ಎಂದರು. 

ADVERTISEMENT

ಜ.4ರ ಬೆಳಿಗ್ಗೆ 10 ಗಂಟೆಗೆ ನಡೆಯುವ ರಂಗೋಲಿ ಹಾಗೂ ಜನಪದ ಗೀತೆಗಳ ಸ್ಪರ್ಧೆ ಹಾನಗಲ್‌ ವಿರಕ್ತಮಠದ ಶಿವಯೋಗಿ ಸ್ವಾಮೀಜಿ ಉದ್ಘಾಟಿಸಲಿದ್ದು, ತಾಳಗುಪ್ಪದ ಕೂಡಲಿಮಠದ ಸಿದ್ಧವೀರ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. 

ಸಂಜೆ 5 ಗಂಟೆಗೆ ಶರಣ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುಸ್ತಕ ಬಿಡುಗಡೆ ಮಾಡುವರು. ಇದೇ ವೇಳೆ ಪ್ರಾಧ್ಯಾಪಕ ಸಿ.ನಾಗಭೂಷಣ್ ಅವರಿಗೆ ಅಲ್ಲಮ ಪ್ರಭು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು. 

ಜ.5ರ ಬೆಳಿಗ್ಗೆ 7ಕ್ಕೆ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಮತ್ತು ಶೂನ್ಯ ಪೀಠಾರೋಹಣ ನಡೆಯಲಿದೆ. ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯರು ಉದ್ಘಾಟಿಸಲಿದ್ದು, ನವಲಗುಂದದ ಗವಿಮಠದ ಬಸವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 4.30ಕ್ಕೆ ಶ್ರೀಗಳ ಪುಣ್ಯಸ್ಮರಣೆ ಹಾಗೂ ಭಾವೈಕ್ಯ ಸಮ್ಮೇಳನವನ್ನು ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಸಚಿವ ಎಚ್.ಕೆ.ಪಾಟೀಲ್ ಉದ್ಘಾಟಿಸಲಿದ್ದಾರೆ ಎಂದರು.

ಶ್ರೀಮಠದಿಂದ ಇದೇ ಮೊದಲ ಬಾರಿಗೆ ಭಾವೈಕ್ಯತಾ ಪ್ರಶಸ್ತಿಯನ್ನು ಶಿವಮೊಗ್ಗದ ಗಾಂಧಿ ಬಸಪ್ಪ ಮತ್ತು ಹಳದಮ್ಮ ಪ್ರತಿಷ್ಠಾನಕ್ಕೆ ನೀಡಲಾಗುತ್ತಿದೆ. ಧಾರಾವಾಡದ ಚಿಂತಕ ಮಹೇಶ್ ಮಾಶಾಲ್ ಉಪನ್ಯಾಸ ನೀಡಲಿದ್ದಾರೆ ಎಂದರು.

ಸ್ಮರಣೋತ್ಸವ ಸಮಿತಿಯ ಅಧ್ಯಕ್ಷ ಕೆ.ಎನ್.ತಾರಾನಾಥ್, ಪ್ರಧಾನ ಕಾರ್ಯದರ್ಶಿ ಎಸ್.ಎನ್.ಮಹಾಲಿಂಗಯ್ಯ ಶಾಸ್ತ್ರಿ, ಖಜಾಂಚಿ ಹರ್ಷ ರುದ್ರೇಗೌಡ್ರು, ಪ್ರಮುಖರಾದ ಎಚ್.ಸಿ.ಯೋಗೀಶ್, ಎಸ್.ಎಸ್. ಜ್ಯೋತಿಪ್ರಕಾಶ್, ಶಾಂತಾ ಆನಂದ್, ಚಂದ್ರಶೇಖರಯ್ಯ, ಅನಿತಾ ರವಿಶಂಕರ್, ವಿವಿಧ ಸಮಿತಿಯ ಅಧ್ಯಕ್ಷರಾದ ಪುಷ್ಪಾ ಹಾಲಪ್ಪ, ವಿ.ಟಿ.ಅರುಣ್, ನಾಗರತ್ನ ಚಂದ್ರಶೇಖರ್, ಟಿ.ಎಸ್.ಸಿದ್ದೇಶ್, ಬಿ.ಶಿವರಾಜ್, ಸಂಚಾಲಕ ಡಾ.ವಿದ್ವಾನ್ ರೇಣುಕಾರಾಧ್ಯ, ಕಿರಣ್ ದೇಸಾಯಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.