ADVERTISEMENT

ಜೈಲು ಸೇರಿದ್ದ ಅಣ್ಣನೇ ಹೋರಾಟಕ್ಕೆ ಸ್ಫೂರ್ತಿ: ಎ.ಟಿ.ಕಾಶಿನಾಥಶೆಟ್ಟಿ

ವೆಂಕಟೇಶ ಜಿ.ಎಚ್.
Published 14 ಆಗಸ್ಟ್ 2022, 3:23 IST
Last Updated 14 ಆಗಸ್ಟ್ 2022, 3:23 IST
ಎ.ಟಿ.ಕಾಶಿನಾಥಶೆಟ್ಟಿ
ಎ.ಟಿ.ಕಾಶಿನಾಥಶೆಟ್ಟಿ   

ಶಿವಮೊಗ್ಗ: ‘ಅಪ್ಪ ತಿಮ್ಮಯ್ಯ ಶೆಟ್ಟಿ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಅಣ್ಣ ಜಗನ್ನಾಥಶೆಟ್ಟಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡು ಬ್ರಿಟಿಷರಿಂದ ಬಂಧನಕ್ಕೊಳಗಾಗಿ ಚಿತ್ರದುರ್ಗ ಜೈಲು ಸೇರಿದ್ದರು. ನನಗೂ ಹೋರಾಟದಲ್ಲಿ ಪಾಲ್ಗೊಳ್ಳಲು ಇದು ಪ್ರೇರಣೆಯಾಯಿತು’...

ಹೀಗೆಂದು ಸ್ವಾತಂತ್ರ್ಯ ಹೋರಾಟದ ಆ ದಿನಗಳನ್ನು ‘ಪ್ರಜಾವಾಣಿ’ ಎದುರು ಮೆಲುಕು ಹಾಕಿದರು ಶಿವಮೊಗ್ಗದ ವಿನಾಯಕ ನಗರದ ನಿವಾಸಿ ಎ.ಟಿ.ಕಾಶಿನಾಥಶೆಟ್ಟಿ.

‘ನನಗೆ ಆಗ 16 ವರ್ಷ ಹೊಳಲ್ಕೆರೆಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೆ. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಆಗ್ರಹಿಸಿ ಮಹಾತ್ಮ ಗಾಂಧೀಜಿ, ಮಾಡಿ ಇಲ್ಲವೇ ಮಡಿ ಚಳವಳಿಗೆ ಕರೆಕೊಟ್ಟರು. ನಾವು ಶಾಲೆ ಬಿಟ್ಟು ಹೊರಬಂದೆವು. ಅಣ್ಣನ ಗೆಳೆಯರಾದ ಗೋಪಾಲ ಶೆಟ್ಟಿ, ಹನುಮಂತ ಶೆಟ್ಟಿ ಅವರೊಂದಿಗೆ ಸೇರಿ ಊರಿನಲ್ಲಿ ಪ್ರಭಾತ್ ಪೇರಿ ನಡೆಸಿ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯ ಹಾಡುಗಳ ಹಾಡುತ್ತಿದ್ದೆವು. ಘೋಷಣೆಗಳ ಕೂಗುತ್ತಿದ್ದೆವು. ಬ್ರಿಟಿಷರು ಬರುತ್ತಿದ್ದಂತೆಯೇ ಓಡಿ ಹೋಗುತ್ತಿದ್ದೆವು’ ಎಂದರು.

ADVERTISEMENT

‘ಈ ಚಟುವಟಿಕೆ ಜೊತೆಗೆ ನಾನು ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅಣ್ಣನ ಸ್ನೇಹಿತರಿಗೆ ರಹಸ್ಯವಾಗಿ ಪತ್ರಗಳ ತಲುಪಿಸುವ ಕೆಲಸ ಮಾಡುತ್ತಿದ್ದೆ. ಎಲ್ಲ ಕಡೆ ಓಡಾಡಿ ಸಮಾನ ಮನಸ್ಕರನ್ನು ಒಗ್ಗೂಡಿಸುವ ಕೆಲಸಕ್ಕೂ ಮುಂದಾಗಿದ್ದೆವು. ಇದೇ ವೇಳೆ ಶಿವಮೊಗ್ಗಕ್ಕೆ ನಮ್ಮ ಕಾರ್ಯ ಚಟುವಟಿಕೆ ವಿಸ್ತರಿಸಿದೆವು. ಶಿವಮೊಗ್ಗ ನಮ್ಮ ಅಜ್ಜಿಯ ಮನೆ. ಇಲ್ಲಿ ನಾನು ನಾಗಪ್ಪಶೆಟ್ಟರು, ಜೈಹಿಂದ್ ಹೋಟೆಲ್ ಕೃಷ್ಣಮೂರ್ತಿ, ಅಯ್ಯಂಗಾರ್ ಅವರೊಂದಿಗೆ ಸೇರಿಕೊಂಡು ಹೋರಾಟದಲ್ಲಿ ಸಕ್ರಿಯನಾದೆ. ಇಲ್ಲಿ ಹಗಲೆಲ್ಲಾ ಓಡಾಟ ಮಾಡಿ ಸರ್ಕಲ್‌ಗಳಲ್ಲಿ ಕುಳಿತು ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಮಾಹಿತಿಗಳ ಕಲೆ ಹಾಕಿ ಪತ್ರದಲ್ಲಿ ಬರೆದು ಹೋರಾಟದ ಮುಂಚೂಣಿಯಲ್ಲಿದ್ದವರಿಗೆ ತಲುಪಿಸುತ್ತಿದ್ದೆ’ ಎಂದು ನೆನಪಿಸಿಕೊಂಡರು.

‘ಒಮ್ಮೆ ಬ್ರಿಟಿಷರ ಕೈಗೆ ಸಿಕ್ಕುಬಿದ್ದೆ. ಇಲ್ಲಿನ ಹಳೆಯ ಪ್ರವಾಸಿ ಮಂದಿರವನ್ನು ಆಗ ಬಯಲು ಬಂಧಿಖಾನೆ ಎಂದು ಘೋಷಿಸಿದ್ದರು. ಅಲ್ಲಿ ನನ್ನಂತೆಯೇ ಹಲವರನ್ನು ಹಗಲು ಹೊತ್ತು ಕರೆತಂದು ಬಿಡುತ್ತಿದ್ದರು. ಸಂಜೆ ಮನೆಗೆ ಕಳುಹಿಸುತ್ತಿದ್ದರು. ಕೆಲವೊಮ್ಮೆ ಹಿಂಬದಿ ಬೇಲಿ ಹಾರಿ ನಾವೇ ಮನೆಗೆ ಓಡಿ ಹೋಗುತ್ತಿದ್ದೆವು’ ಎಂದು ಆ ದಿನಗಳ ನೆನಪು ಬಿಚ್ಚಿಟ್ಟರು.

ಮುಂದೆ ಈಚಲು ಮರ ಕಡಿಯುವ ಹೋರಾಟದಲ್ಲೂ ಕಾಶಿನಾಥಶೆಟ್ಟಿ ಸಕ್ರಿಯರಾಗಿದ್ದರು. ಮುಂದೆ ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಅವರು ವಾಪಸ್ ಹೊಳಲ್ಕೆರೆಗೆ ಮರಳಿದ್ದರು. ಅಲ್ಲಿ ಅಪ್ಪನಿಗೆ ಬಟ್ಟೆ ವ್ಯಾಪಾರದಲ್ಲಿ ಸಹಾಯ ಮಾಡುತ್ತಲೇ ಚಿಕ್ಕಜಾಜೂರಿನಲ್ಲಿ ಮೆಟ್ರಿಕ್ ಶಿಕ್ಷಣ ಮುಗಿಸಿದ್ದರು. ಮತ್ತೆ ಶಿವಮೊಗ್ಗಕ್ಕೆ ವಾಪಸ್ ಬಂದು ಮದುವೆಯಾಗಿ ಇಲ್ಲಿಯೇನೆಲೆಸಿದ್ದಾರೆ.

ಗಾಂಧೀಜಿ ನೆನಪು; ಅರಳಿದ ಮುಖ..

ಕಾಶಿನಾಥ ಶೆಟ್ಟಿ ಹಾಗೂ ಸರಸ್ವತಿ ದಂಪತಿಗೆ ನಾಲ್ವರು ಮಕ್ಕಳು. ಕಿರಿಯ ಮಗ ಉಡುಪಿ ಕೃಷ್ಣ ಅವರೊಂದಿಗೆ ಇಲ್ಲಿನ ವಿನಾಯಕ ನಗರದಲ್ಲಿ ಶೆಟ್ಟರು ವಾಸವಿದ್ದಾರೆ. ಅವರಿಗೆ ಈಗ 90 ವರ್ಷ. ಬಿಪಿ, ಶುಗರ್ ಏನೂ ಇಲ್ಲ. ವಾಕರ್ ಹಿಡಿದು ಓಡಾಡುತ್ತಾರೆ. ಕಿವಿ ಸ್ವಲ್ಪ ಮಂದವಾಗಿದೆ. ಆದರೆ ಸ್ಪಷ್ಟವಾಗಿ ಮಾತಾಡುತ್ತಾರೆ. ಶಿವಮೊಗ್ಗಕ್ಕೆ ಮಹಾತ್ಮ ಗಾಂಧೀಜಿ ಬಂದಾಗ ಅವರನ್ನು ನೋಡಲು ಹೋಗಿದ್ದನ್ನು ನೆನಪಿಸಿಕೊಂಡ ಅವರ ಮುಖ ಅರಳಿತು.

ಕಾಶಿನಾಥ ಶೆಟ್ಟರ ಮನೆಗೆ ಇತ್ತೀಚೆಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಹಾಗೂ ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ತೆರಳಿ ಸನ್ಮಾನಿಸಿದ್ದಾರೆ. ಭಾರತೀಯ ರೈಲ್ವೆಯಿಂದಲೂ ಅವರನ್ನು ಗೌರವಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.