ADVERTISEMENT

ರೋಗಿಗೆ ಔಷಧ ನೀಡುವ ಸೇವೆ ಶ್ಲಾಘನೀಯ: ಬಿ.ವೈ. ಅರುಣಾದೇವಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 4:04 IST
Last Updated 26 ಸೆಪ್ಟೆಂಬರ್ 2021, 4:04 IST
ಶಿವಮೊಗ್ಗ ಜಿಲ್ಲಾ ಫಾರ್ಮಾಸಿಸ್ಟ್ ಅಸೋಸಿಯೇಷನ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಫಾರ್ಮಾಸಿಸ್ಟ್‌ ದಿನಾಚರಣೆಯನ್ನು ಜನ ಶಿಕ್ಷಣ ಸಂಸ್ಥೆ ನಿರ್ದೇಶಕಿ ಬಿ.ವೈ. ಅರುಣಾದೇವಿ ಉದ್ಘಾಟಿಸಿದರು.
ಶಿವಮೊಗ್ಗ ಜಿಲ್ಲಾ ಫಾರ್ಮಾಸಿಸ್ಟ್ ಅಸೋಸಿಯೇಷನ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಫಾರ್ಮಾಸಿಸ್ಟ್‌ ದಿನಾಚರಣೆಯನ್ನು ಜನ ಶಿಕ್ಷಣ ಸಂಸ್ಥೆ ನಿರ್ದೇಶಕಿ ಬಿ.ವೈ. ಅರುಣಾದೇವಿ ಉದ್ಘಾಟಿಸಿದರು.   

ಶಿವಮೊಗ್ಗ: ಔಷಧ ತಜ್ಞರೂ ರೋಗಿಯ ಆರೈಕೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಾರೆ ಎಂದು ಜನ ಶಿಕ್ಷಣ ಸಂಸ್ಥೆ ನಿರ್ದೇಶಕಿ ಬಿ.ವೈ. ಅರುಣಾದೇವಿ ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಂಸ್ಥೆ, ರಾಷ್ಟ್ರೀಯ ಔಷಧ ಮಹಾವಿದ್ಯಾಲಯ, ಜಿಲ್ಲಾ ಫಾರ್ಮಾಸಿಸ್ಟ್ ಅಸೋಸಿಯೇಷನ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಔಷಧ ತಜ್ಞರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯರು ರೋಗಿಗಳಿಗೆ ಜೀವದಾನ ನೀಡಿದರೆ, ಔಷಧ ತಜ್ಞ ಔಷಧಗಳಿಗೆ ಜೀವ ಕೊಡುತ್ತಾನೆ. ಫಾರ್ಮಾಸಿಸ್ಟ್‌ಗಳ ಕೆಲಸವೂ ಜವಾಬ್ದಾರಿಯಿಂದ ಕೂಡಿದೆ. ನಿರ್ದಿಷ್ಟ ಕಾಯಿಲೆಗಳಿಗೆ ಅದರದೇ ಆದ ನಿರ್ದಿಷ್ಟ ಔಷಧ ಕೊಡಬೇಕೆಂಬ ಕಲ್ಪನೆ ಅವರಿಗೆ ಮಾತ್ರ ಇರುತ್ತದೆ.ಜಿಲ್ಲೆಯಲ್ಲಿ ವೈದ್ಯರ ಕೊರತೆ ಬಹಳಷ್ಟಿದೆ. ಹೀಗಾಗಿ ಔಷಧ ತಜ್ಞರ ಪಾತ್ರ ಬಹಳ ಮುಖ್ಯವಾಗಿದೆ. ವೈದ್ಯರು ಹೇಳಿರುವುದು ರೋಗಿಗಳಿಗೆ ಗೊತ್ತಾಗದೆ ಇರಬಹುದು. ಅಂತಹಸಂದರ್ಭದಲ್ಲಿ ಫಾರ್ಮಾಸಿಸ್ಟರು ರೋಗಿಗಳಿಗೆ ಅಗತ್ಯ ಮಾಹಿತಿ ನೀಡಬೇಕಿದೆ. ತಂತ್ರಜ್ಞಾನ ಬದಲಾವಣೆಗೆ ತಕ್ಕಂತೆ ಅವರು ಬದಲಾಗುವ ಅಗತ್ಯವಿದೆ ಎಂದು ತಿಳಿಸಿದರು.

ADVERTISEMENT

ಔಷಧ ತಜ್ಞರಲ್ಲಿ ವಿಜ್ಞಾನದ ಬುದ್ಧಿ, ತಂತ್ರಜ್ಞಾನ ಮನಸ್ಸು ಮತ್ತು ತತ್ವಪತಿಯ ಹೃದಯವಿರಬೇಕು. ಲಕ್ಷಕ್ಕಿಂತ ಲಕ್ಷ್ಯ ಕೊಡುವ ಔಷಧ ತಜ್ಞರ ಸೇವೆ ಗೌರವಯುತವಾಗಿದೆ. ಕೌಶಲದ ಜೊತೆಗೆ ಸ್ಪಷ್ಟ ಗುರಿಯನ್ನು ಹೊಂದಿದಾಗ ಮಾತ್ರ ಸಾಧನೆ ಮಾಡಬಹುದು. ಜನರ ಆರೋಗ್ಯವನ್ನು ಕಾಪಾಡುವಲ್ಲಿ ಔಷಧ ತಜ್ಞರ ಪಾತ್ರ ಬಹುಮುಖ್ಯ. ವೈದ್ಯರೊಂದಿಗೆ ಸೇರಿಕೊಂಡು ಮಾದರಿ ರೀತಿಯಲ್ಲಿ ಸೇವೆ ಸಲ್ಲಿಸಬೇಕು. ಅಲ್ಲದೇ ಭಾರತೀಯ ಔಷಧಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದು ಸಲಹೆ ನೀಡಿದರು.

ಪ್ರಾಂಶುಪಾಲ ಡಾ.ಜಿ. ನಾರಾಯಣ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ, ಸಹಾಯಕ ಔಷಧ ನಿಯಂತ್ರಕ ವಿ.ಮಂಜುನಾಥ ರೆಡ್ಡಿ, ವೀರೇಶ್ ಬಾಬು, ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್. ನಾಗರಾಜ್, ಉಪಾಧ್ಯಕ್ಷ ಟಿ.ಆರ್. ಅಶ್ವಥ್ ನಾರಾಯಣ ಶೆಟ್ಟಿ, ಫಾರ್ಮಾಸಿಸ್ಟ್ ಅಸೋಸಿಯೇಶನ್ ಅಧ್ಯಕ್ಷ ಗಣೇಶ್ ಎಂ. ಅಂಗಡಿ, ಗೌರವಾಧ್ಯಕ್ಷ ಎನ್‌.ಶಿವಮೂರ್ತಿ, ಜಿ.ಎಸ್. ಕಿರಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.