ADVERTISEMENT

ಸಕ್ರೆಬೈಲಿನ ಆನೆ ಗಂಗೆ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 6:42 IST
Last Updated 27 ಸೆಪ್ಟೆಂಬರ್ 2021, 6:42 IST
ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದ ಗಂಗೆ (ಸಂಗ್ರಹ ಚಿತ್ರ)
ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದ ಗಂಗೆ (ಸಂಗ್ರಹ ಚಿತ್ರ)   

ಶಿವಮೊಗ್ಗ: ಅನಾರೋಗ್ಯದಿಂದ ಬಳಲುತ್ತಿದ್ದ ಸಕ್ರೆಬೈಲು ಆನೆ ಬಿಡಾರದ ಗಂಗೆ ಭಾನುವಾರ ಮೃತಪಟ್ಟಿದ್ದು, ಆನೆ ಬಿಡಾರದಲ್ಲಿ ಸೂತಕದ ಛಾಯೆ ಆವರಿಸಿದೆ.

ಗಂಡಾನೆಗಳನ್ನು ತನ್ನತ್ತ ಸೆಳೆದು, ಅವುಗಳನ್ನು ಖೆಡ್ಡಾಕ್ಕೆ ಬೀಳಿಸಲು ನೆರವಾಗುತ್ತಿದ್ದ ಗಂಗೆ ‘ಮೋಹಕ ರಾಣಿ’ ಎಂದೇ ಹೆಸರುವಾಸಿಯಾಗಿದ್ದಳು.

‘2 ವರ್ಷಗಳಿಂದ ಗಂಗೆ ಆರೋಗ್ಯದಲ್ಲಿ ಏರುಪೇರು ಕಂಡುಬರುತ್ತಿತ್ತು. ಹದಿನೈದು ದಿನಗಳ ಹಿಂದೆ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾದ ಗಂಗೆ ಸಂಪೂರ್ಣವಾಗಿ ಅಸ್ವಸ್ಥಗೊಂಡಿದ್ದಳು. ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ’ ಎಂದು ಚಿಕಿತ್ಸೆ ನೀಡುತ್ತಿದ್ದ ಡಾ. ವಿನಯ್ ತಿಳಿಸಿದರು.

ADVERTISEMENT

ಯಾವುದೇ ಖೆಡ್ಡಾ ಆಪರೇಷನ್ ಇರಲಿ, ಗಂಗೆ ಅಲ್ಲಿ ಹಾಜರಿದ್ದು, ಉಪಟಳ ನೀಡುತ್ತಿರುವ ಕಾಡಾನೆಯನ್ನು ಸೆಳೆಯುತ್ತಿದ್ದಳು. ಯಾವಾಗ ಕಾಡಾನೆ ಗಂಗೆಯನ್ನು ನೋಡಿ ಹತ್ತಿರಕ್ಕೆ ಬರುತ್ತಿತ್ತೋ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಕಾಡಾನೆಯನ್ನು ಖೆಡ್ಡಾಕ್ಕೆಬೀಳಿಸುತ್ತಿದ್ದರು.

‘ಕಾಕನಕೋಟೆಯಲ್ಲಿ 1971ರಲ್ಲಿ ನಡೆದ ಖೆಡ್ಡಾ ಆಪರೇಷನ್‌ನಲ್ಲಿ ಗಂಗೆ ಸೆರೆಸಿಕ್ಕಿದ್ದಳು. ಅಲ್ಲಿಂದ ಇಲ್ಲಿವರೆಗೂ ಸಕ್ರೆಬೈಲು ಬಿಡಾರದ ಪ್ರೀತಿಯ ಆನೆ ಎನಿಸಿಕೊಂಡಿದ್ದಳು. ಸಕ್ರೆಬೈಲಿನ ಎಲ್ಲ ಸಾಕಾನೆಗಳ ಪಾಲಿಗೆ ಅಜ್ಜಿಯಾಗಿ, ತಾಯಿಯಾಗಿದ್ದಳು. ಅಲ್ಲದೇ ಸಕ್ರೆಬೈಲಿನಲ್ಲಿಯೇ ಆರು ಮರಿಗಳನ್ನು ಹಾಕಿದ್ದ ಗಂಗೆ ಬಿಡಾರದಲ್ಲಿಯೇ ಮಹಾತಾಯಿ ಎನಿಸಿದ್ದಳು’ ಎಂದು ಡಿಎಫ್‌ಒಐ.ಎಂ. ನಾಗರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.