
ತೀರ್ಥಹಳ್ಳಿ: ಜಾತ್ಯತೀತ ನಿಲುವಿನ ಮೂಲಕ ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದ ಕಡ್ತೂರು ಶ್ರೀನಿವಾಸಗೌಡ ಅವರು ಮಲೆನಾಡಿನ ಅನರ್ಘ್ಯ ರತ್ನ ಎಂದು ಶಾಸಕ ಆರಗ ಜ್ಞಾನೇಂದ್ರ ಬಣ್ಣಿಸಿದರು.
ಪಟ್ಟಣದ ಕೆಟಿಕೆ ಸಭಾಂಗಣದಲ್ಲಿ ಈಚೆಗೆ ಅಗಲಿದ ತಾಲ್ಲೂಕು ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಕಡ್ತೂರು ಶ್ರೀನಿವಾಸಗೌಡ ಅವರಿಗೆ ಮಂಗಳವಾರ ಶ್ರದ್ದಾಂಜಲಿ ಸಲ್ಲಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಅನುಕರಣೀಯ ವ್ಯಕ್ತಿತ್ವ ಹೊಂದಿದ್ದ ಅವರು ಸಾವಿನ ನಂತರವೂ ಜನರ ಮನಸ್ಸಿನಲ್ಲಿ ಜಿರಂಜೀವಿಯಾಗಿ ಉಳಿದಿದ್ದಾರೆ. ರಾಜಕೀಯ, ಧಾರ್ಮಿಕ, ಸಹಕಾರ, ಶಿಕ್ಷಣ, ಕೃಷಿ, ಸಮಾಜಸೇವೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸುಮಾರು 60 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಸೈದ್ಧಾಂತಿಕ ಭಿನ್ನತೆ ಇದ್ದರೂ ಅವರೊಂದಿಗಿನ ಒಡನಾಟ ಸ್ಮರಣೀಯ ಎಂದರು.
‘ಸಾರ್ವಜನಿಕ ಜೀವನದಲ್ಲಿ ತಾಳ್ಮೆ ಕಳೆದುಕೊಳ್ಳದೆ ನಿಸ್ವಾರ್ಥ ಸೇವೆ ಸಲ್ಲಿಸಿದ ಕಡ್ತೂರು ಶ್ರೀನಿವಾಸಗೌಡರ ಕುರಿತ ಜೀವನ ಚರಿತ್ರೆ ಪುಸ್ತಕ ಹೊರತರಬೇಕಾದ ಅಗತ್ಯ ಇದೆ. ಬಡವರ ಬಗ್ಗೆ ಅವರಿಗಿದ್ದ ಕಾಳಜಿ ಸಮಾಜಕ್ಕೆ ತಿಳಿಸಬೇಕು. ಸಮಾನತೆ ಸಮಾಜ ನಿರ್ಮಾಣದ ಚಿಂತನೆ ಹೊಂದಿದ್ದರು’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.
‘ಒಕ್ಕಲಿಗ ಸಂಘದ ಪ್ರಗತಿಯ ಜೊತೆಗೆ ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಯ ನಿರ್ವಹಿಸಿದ್ದರು. ಯಾರೊಂದಿಗೂ ನಿಷ್ಠುರವಾಗಿ ಮಾತನಾಡದೇ ಪ್ರಾಮಾಣಿಕತೆ ಮೂಲಕ ಜನರ ವಿಶ್ವಾಸ ಗಳಿಸಿದ್ದರು. ಕಡ್ತೂರು ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಿಸಲು ಬಹಳಷ್ಟು ಶ್ರಮವಹಿಸಿದ್ದರು‘ ಎಂದು ಮಾಜಿ ಶಾಸಕ ಕಡಿದಾಳು ದಿವಾಕರ್ ಹೇಳಿದರು.
ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಬಸವಾನಿ ವಿಜಯದೇವ್, ಶಿವಮೊಗ್ಗ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಿ.ಎಸ್. ನಾರಾಯಣರಾವ್, ಟಿಎಪಿಸಿಎಂಎಸ್ ಅಧ್ಯಕ್ಷ ನಾಗರಾಜ ಶೆಟ್ಟಿ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿರಿಬೈಲು ಧರ್ಮೇಶ್, ಶಿವಮೊಗ್ಗ ಒಕ್ಕಲಿಗರ ಸಂಘದ ಅಧ್ಯಕ್ಷ ಆದಿಮೂರ್ತಿ, ತಾಲ್ಲೂಕು ಅಧ್ಯಕ್ಷ ಬಾಳೇಹಳ್ಳಿ ಪ್ರಭಾಕರ್, ಮುಖಂಡರಾದ ಜೆ.ಎಲ್. ಪದ್ಮನಾಭ, ಕಡಿದಾಳ್ ದಯಾನಂದ್, ಡಿ.ಎಸ್. ವಿಶ್ವನಾಥ ಶೆಟ್ಟಿ, ಕೊಡಸಗೊಳ್ಳಿ ಶಾಮಣ್ಣ, ಮಮತಾ ಸಾಯಿನಾಥ್, ಚೇತನಾ ಶ್ರೀಕಾಂತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.