ADVERTISEMENT

ಆರಗ: ತೀರ್ಥಹಳ್ಳಿ ತಾಲ್ಲೂಕು ಘಟಕದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 3:04 IST
Last Updated 26 ಡಿಸೆಂಬರ್ 2025, 3:04 IST
9ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಆರಗ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಡಿ.ಎಂ. ಜನ್ಯ ಮಾತನಾಡಿದರು
9ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಆರಗ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಡಿ.ಎಂ. ಜನ್ಯ ಮಾತನಾಡಿದರು   

ಆರಗ(ಕೋಣಂದೂರು): ‘ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನಗಳು ನಮ್ಮಲ್ಲಿ ಭಾಷೆಯ ಪ್ರೀತಿಯನ್ನು ಹೆಚ್ಚಿಸುವ ಅತ್ಯುತ್ತಮ ವೇದಿಕೆಗಳಾಗಿವೆ’ ಎಂದು ತೀರ್ಥಹಳ್ಳಿ ತಾಲ್ಲೂಕು ಘಟಕದ 9ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಆರಗ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಡಿ.ಎಂ. ಜನ್ಯ ಹೇಳಿದರು.

ಇಲ್ಲಿನ ಆರಗದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ತೀರ್ಥಹಳ್ಳಿ ತಾಲ್ಲೂಕು ಘಟಕದ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌, ಸ.ಪ್ರೌ. ಶಾಲೆ ಆರಗ, ಗ್ರಾಮ ಪಂಚಾಯಿತಿ ಆರಗ ವತಿಯಿಂದ ನಡೆದ ತೀರ್ಥಹಳ್ಳಿ ತಾಲ್ಲೂಕು ಘಟಕದ 9ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

‘ಕನ್ನಡ ಭಾಷೆ ನಮ್ಮ ಮಾತೃ ಭಾಷೆಯಾಗಿದ್ದು, ಈ ಭಾಷೆಯಲ್ಲಿ ನಗು, ಮಮತೆ ಭವ್ಯ ಪರಂಪರೆಯಿದೆ. ಇಂದಿನ ಸಮ್ಮೇಳನದಲ್ಲಿ ನಾವು ಕವನ, ಕಥೆ, ಪ್ರಬಂಧ ಹಾಗೂ ಮಕ್ಕಳ ಪ್ರತಿಭೆಯಿಂದ ಮೂಡುವ ಅನೇಕ ಸಾಹಿತ್ಯ ರೂಪಗಳನ್ನು ನೋಡಲಿದ್ದೇವೆ. ಪ್ರತಿಯೊಬ್ಬ ವಿದ್ಯಾರ್ಥಿಯೊಳಗೂ ಒಬ್ಬ ಕವಿ, ಒಬ್ಬ ಕಲಾವಿದ ಅಡಗಿದ್ದು, ಇಂತಹ ಪ್ರತಿಭೆಯನ್ನು ಹೊರ ಸೂಸಲು ಈ ಸಮ್ಮೇಳನದ ವೇದಿಕೆ ಅವಕಾಶ ಕಲ್ಪಿಸಿದೆ. ಈ ಭಾಷೆಯನ್ನು ಪ್ರೀತಿಸಿ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ADVERTISEMENT

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಚಿಟ್ಟೇಬೈಲು ಪ್ರಜ್ಞಾ ಭಾರತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಾಧ್ವಿ ಎಸ್. ಪ್ರಭು ಅವರು, ಕನ್ನಡವೆಂದರೆ ಕೇವಲ ವರ್ಣಮಾಲೆ ಅಷ್ಟೇ ಅಲ್ಲ. ಅದು ಕರುನಾಡ ನೆಲ, ಜಲ, ಜನ, ಭಾಷೆ, ಸಂಗೀತ, ಸಾಹಿತ್ಯ ಎಲ್ಲವನ್ನೂ ಒಳಗೊಂಡಿದೆ ಎಂದರು.

ಕರ್ನಾಟಕದಲ್ಲಿ ಕನ್ನಡಕ್ಕೆ ಕನ್ನಡಿಗರೆ ಶತ್ರುಗಳಾಗಿದ್ದಾರೆ. ಆದರೆ, ವಿದೇಶಗಳಲ್ಲಿ ನೆಲೆಸಿರುವವರು ಮತ್ತು ಅನಿವಾಸಿ ಕನ್ನಡಿಗರು ಕನ್ನಡ ಸಂಘಗಳನ್ನು ಕಟ್ಟಿಕೊಂಡು ಪರದೇಶಗಳಲ್ಲೂ ನಾಡು ನುಡಿಯ ಸೇವೆ ಮಾಡುತ್ತಿದ್ದಾರೆ. ಆದರೆ, ಕನ್ನಡದ ನೆಲದಲ್ಲಿಯೇ ಕನ್ನಡದ ಬಗ್ಗೆ ಅಸಡ್ಡೆಯ ಭಾವನೆಯಿರುವುದು ಅತ್ಯಂತ ದುರದೃಷ್ಟಕರ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿರಾಜ್, ಆರಗ ಗ್ರಾಮ ಪಂಚಾಯಿತಿ ಅಧ್ಯಕ್ಷ ನಲ್ಲಿಗದ್ದೆ ಚಂದ್ರಶೇಖರ್,  ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ, ಮಾಜಿ ಗ್ರಾ.ಪಂ. ಅಧ್ಯಕ್ಷ ಮಂಜುನಾಥ್, ನೈಜಲಾ ಪಟಮಕ್ಕಿ ರತ್ನಾಕರ್, ಆರಗ ಕಲಾನಾಥೇಶ್ವರ ಸಹಕಾರ ಸಂಘದ ಅಧ್ಯಕ್ಷೆ ಸಹನಾ ಉಪೇಂದ್ರ, ಮಾಜಿ ತಾ.ಪಂ. ಸದಸ್ಯೆ ಭಾರತಿ ಸುರೇಶ್, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಶ್ಯಾಮಲಾ ವಿ., ಗ್ರಾ.ಪಂ. ಸದಸ್ಯರಾದ ಅಗಳಬಾಗಿಲು ಮಹೇಶ್, ಸುಧಾಕರ್, ಶಂಕರಪ್ಪ, ಪ್ರೇಮ, ರೇವತಿ ಗಣೇಶ್ ಇದ್ದರು.

ಹಿಂದಿನ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ವಂಶಿಕ್ ಪ್ರಭು ಅವರು ಕನ್ನಡದ ಭಾವುಟವನ್ನು ಹಾಲಿ ಅಧ್ಯಕ್ಷೆ ಜನ್ಯಾರಿಗೆ ಹಸ್ತಾಂತರಿಸಿದರು.

ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ದಾನೇಶ್ ಕೆ.ಎನ್. ಅವರು ಸ್ವಾಗತಿಸಿ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷೆ ರೇವತಿ ಎಂ. ಹೆಗಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಲೀಲಾವತಿ ಸಮ್ಮೇಳನದ ಸರ್ವಾಧ್ಯಕ್ಷರನ್ನು ಪರಿಚಯಿಸಿದರು. ಶಿಕ್ಷಕಿ ಪ್ರಶಾಂತಿ ಪಾಟೀಲ್ ನಿರೂಪಿಸಿದರು.

ಆರಗ ಗ್ರಾಮದ ಬೀದಿಗಳಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರು, ಉದ್ಘಾಟಕರು ಹಾಗೂ ಭುವನೇಶ್ವರಿಯಾಗಿ ಕಾಣಿಸಿಕೊಂಡ ವಿದ್ಯಾರ್ಥಿನಿಯರನ್ನು ತೆರದ ವಾಹನದಲ್ಲಿ ಆಕರ್ಷಕ ಮೆರವಣಿಗೆ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.