ADVERTISEMENT

ತೀರ್ಥಹಳ್ಳಿ: ಪಾದಚಾರಿ ಮಾರ್ಗಗಳ ಮಧ್ಯೆ ವಿದ್ಯುತ್ ಕಂಬಗಳು!

ನಗರ, ಪಟ್ಟಣಗಳಲ್ಲಿನ ಪಾರ್ಕಿಂಗ್ ಸಮಸ್ಯೆ, ಬೀದಿಬದಿ ವ್ಯಾಪಾರಕ್ಕೆ ಸಿಗದ ಮುಕ್ತಿ

ನಿರಂಜನ ವಿ.
Published 21 ಫೆಬ್ರುವರಿ 2022, 4:03 IST
Last Updated 21 ಫೆಬ್ರುವರಿ 2022, 4:03 IST
ಸುರೇಂದ್ರ ಯಡೂರು
ಸುರೇಂದ್ರ ಯಡೂರು   

ತೀರ್ಥಹಳ್ಳಿ: ಪಟ್ಟಣದಲ್ಲಿ ದ್ವಿಪಥ ರಸ್ತೆಯ ಇಕ್ಕೆಲಗಳಲ್ಲಿ ಪಾದಚಾರಿಗಳು ಸರಾಗವಾಗಿ ಓಡಾಡಲು ಸಾಧ್ಯವೇ ಆಗದು. ಪಾದಚಾರಿ ಮಾರ್ಗ ಮಧ್ಯೆ ಅವೈಜ್ಞಾನಿಕವಾಗಿ ವಿದ್ಯುತ್ ಕಂಬ ಹಾಕಲಾಗಿದೆ. ಈ ಕಂಬಗಳಿಂದ ಕೊಪ್ಪ ವೃತ್ತದ ಗಾಂಧಿ ಚೌಕದವರೆಗೆ ಸರದಿ ಸಾಲು ಇರುತ್ತದೆ.

ಉಡುಪಿಯಿಂದ ತೀರ್ಥಹಳ್ಳಿ ಪಟ್ಟಣದ ಮಾರ್ಗವಾಗಿ ಬೆಂಗಳೂರಿಗೆ ಹೋಗುವಾಗ ಅತ್ಯಂತ ಅಚ್ಚುಕಟ್ಟಾಗಿ ಸುಸಜ್ಜಿತ ದ್ವಿಪಥ ರಸ್ತೆಯನ್ನು ಅಂತರರಾಷ್ಟ್ರೀಯ ಮಾದರಿಯಲ್ಲಿ ನಿರ್ಮಿಸಲಾಗಿದೆ. ನೋಡುಗರಿಗೆ ಇದೊಂದು ಅದ್ಭುತ ಎನಿಸಿದರೂ ಸ್ಥಳೀಯರಿಗೆ ವಾಹನ ನಿಲುಗಡೆಗೆ ಜಾಗ ಸಾಲುತ್ತಿಲ್ಲ.

ಕಾಲ್ನಡಿಗೆಯ ಮೂಲಕ ನಾಗರಿಕರು ಪಟ್ಟಣದಲ್ಲಿ ಓಡಾಡುವುದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಪುರುಷೋತ್ತಮ ರಾವ್ ಸಾರ್ವಜನಿಕ ಬಸ್ ನಿಲ್ದಾಣದಿಂದ ಕೊಪ್ಪ ವೃತ್ತದವರೆಗೆ ಹಳೆಯ ರಸ್ತೆ ವಿಸ್ತರಣೆ ಆಗಿಲ್ಲ. ವಾಹನ ನಿಲುಗಡೆಗೆ ಅವಕಾಶ ಇಲ್ಲದೇ ಬಹುತೇಕರು ಪೊಲೀಸ್ ಇಲಾಖೆ ಗುರುತು ಮಾಡಿದ ದ್ವಿಪಥ ರಸ್ತೆಯಲ್ಲಿ ಕಾರು, ಬೈಕ್‌ಗಳನ್ನು ನಿಲುಗಡೆ ಮಾಡಿ ಕಚೇರಿಗಳಿಗೆ ತೆರಳುತ್ತಾರೆ.

ADVERTISEMENT

ಇಷ್ಟಿದ್ದರೂ ಕೊಪ್ಪ ವೃತ್ತದ ಭಾಗದಲ್ಲಿ ಹೆಚ್ಚು ವಾಹನಗಳ ದಟ್ಟಣೆ ಇದೆ. ಪಾದಚಾರಿಗಳು ರಸ್ತೆಗೆ ತಾಗಿಕೊಂಡೇ ನಡೆಯಬೇಕು. ಬೀದಿ ಬದಿ ವ್ಯಾಪಾರಿಗಳು ರಸ್ತೆಯ ಮೇಲೆ ಅಂಗಡಿ ಬಿಚ್ಚುವುದರಿಂದ ಇರುವ ಅಲ್ಪಸ್ವಲ್ಪ ಫುಟ್‌ಪಾತ್‌ ಅಂಗಡಿಗಳ ಪಾಲಾಗುತ್ತಿದೆ. ಗಾಂಧಿ ಚೌಕದಲ್ಲಿ ಹೂ, ಹಣ್ಣಿನ ವ್ಯಾಪಾರಿಗಳು ಅಂಗಡಿ ಜಾಗ ಫುಟ್‌ಪಾತ್ ಮೇಲೆ ಹಾಕಿಕೊಳ್ಳುತ್ತಾರೆ. ಹೋಟೆಲ್ ಒಂದರ ಮುಂದೆ ಪಾರ್ಕಿಂಗ್ ಜಾಗದ ಹೆಸರಿನಲ್ಲಿ ಪಾದಚಾರಿ ಮಾರ್ಗ ಮಾಯವಾಗಿದೆ.

ಜಾಹೀರಾತು ಫಲಕ ಕಾಟ: ಕಾಂಪ್ಲೆಕ್ಸ್ ಒಳಗೆ ಇರುವ ಅಂಗಡಿ ಮಾಲೀಕರು ಪ್ರಚಾರದ ಬೋರ್ಡ್‌ಗಳನ್ನು ಫುಟ್‌ಪಾತ್ ಮೇಲೆ ಇಡುತ್ತಿದ್ದಾರೆ. 2ರಿಂದ 3 ಅಡಿ ಉದ್ದದ ನಾಮಫಲಕಗಳು ರಸ್ತೆಗೆ ತಾಗಿಸಿಕೊಂಡು ಹಾಕಲಾಗಿದೆ. ಇದರಿಂದ ಹಲವರು ಕಾಲಿಗೆ ತಾಗಿ ಎಡವಿ ಬೀಳುವುದು ಸಾಮಾನ್ಯವಾಗಿದೆ.

ವಿದ್ಯುತ್ ಅವಘಡಕ್ಕೆ ಆಹ್ವಾನ: ಪಾದಚಾರಿ ಮಾರ್ಗ ಮಧ್ಯೆ ಸುಮಾರು 50ರಿಂದ 70 ವಿದ್ಯುತ್ ಕಂಬಗಳು ಇವೆ. ಇದೇ ಮಾರ್ಗದಲ್ಲಿ ಶಾಲಾ ಮಕ್ಕಳು, ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರು ಓಡಾಡುತ್ತಾರೆ. ಹೆಚ್ಚು ಕಮ್ಮಿ ಆದರೆ ವಿದ್ಯುತ್ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಕೆಲವರು ಅವಘಡವಾಗುವ ಸಂಭವಕ್ಕೆ ಹೆದರಿ ಪಾದಚಾರಿ ಮಾರ್ಗ ತೊರೆದು ರಸ್ತೆಯಲ್ಲೇ ನಡೆಯುವುದನ್ನು ರೂಢಿ ಮಾಡಿಕೊಂಡಿದ್ದಾರೆ. ವೇಗವಾಗಿ ಬರುವ ವಾಹನಗಳಿಂದಲೂ ಅಪಾಯ ಎದುರಿಸಬೇಕಿದೆ.

***

ತೀರ್ಥಹಳ್ಳಿ ಪಟ್ಟಣದಲ್ಲಿ ಫುಟ್‌ಪಾತ್ ವ್ಯವಸ್ಥೆ ಸರಿಯಾಗಿಲ್ಲ. ನಡೆಯುವಾಗ ಕಂಬಗಳಿಗೆ ತಾಗಿ ಗಾಯಗೊಂಡಿದ್ದಾರೆ. ವಾಹನ ನಿಲುಗಡೆ ಸರಿದಾರಿಗೆ ತರಲು ಪಟ್ಟಣ ಪಂಚಾಯಿತಿ, ಪೊಲೀಸ್ ಇಲಾಖೆ ಜಂಟಿಯಾಗಿ ಕೆಲಸ ಮಾಡಬೇಕು. ಬೀದಿ ಬದಿಯಲ್ಲಿ ವ್ಯಾಪಾರ ವಿಸ್ತರಣೆ ನಿಯಂತ್ರಿಸಲು ಕಠಿಣ ನಿಯಮ ಜಾರಿ ಮಾಡಬೇಕು.

ಸುರೇಂದ್ರ ಯಡೂರು, ಕರವೇ ಅಧ್ಯಕ್ಷ, ತೀರ್ಥಹಳ್ಳಿ

***

ಬೀದಿಬದಿ ವ್ಯಾಪಾರಿಗಳ ಜೀವನ ಕೂಡ ಇದರಲ್ಲಿದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳು ವ್ಯಾಪಾರಸ್ಥರ ಮನವೊಲಿಸಿ ತೆರವು ಮಾಡಬೇಕು. ಕಾನೂನು ಪಾಲನೆ ಮಾಡುವಾಗ ಜೀವನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು.

ಆದರ್ಶ ಹುಂಚದಕಟ್ಟೆ, ಯುವ ಕಾಂಗ್ರೆಸ್ ವಕ್ತಾರ

***

ಬೀದಿ ಬದಿ ವ್ಯಾಪಾರಿಗಳ ಮಾರಾಟ ವಲಯ ಹಾಗೂ ಫುಡ್‌ಕೋರ್ಟ್ ನಿರ್ಮಾಣಕ್ಕಾಗಿ ಪಟ್ಟಣದ 7 ಸ್ಥಳಗಳನ್ನು ಗುರುತಿಸಲಾಗಿದೆ. ನಾಲ್ಕು ಸ್ಥಳಗಳಲ್ಲಿ ಮಾರಾಟ ವಲಯ ನಿರ್ಮಿಸಲು ಅನುಮತಿ ದೊರೆತಿದೆ. ಪಾದಚಾರಿಗಳ ಸಮಸ್ಯೆಗಳು ಶೀಘ್ರ ನಿವಾರಣೆಯಾಗಲಿವೆ.

ಸುರೇಶ್, ಮುಖ್ಯಾಧಿಕಾರಿ, ಪುರಸಭೆ, ಶಿಕಾರಿಪುರ

***

ಮಾರಾಟ, ಪ್ರದರ್ಶನಕ್ಕೆ ಫುಟ್‌ಪಾತ್‌ ಬಳಕೆ

ಕೆ.ಎನ್. ಶ್ರೀಹರ್ಷ

ಭದ್ರಾವತಿ: ಮುಖ್ಯ ರಸ್ತೆಯ ಎರಡು ಬದಿಯ ಫುಟ್‌ಪಾತ್ ಎಂಬುದು ಸದ್ಯ ಇಲ್ಲಿ ಮಾರಾಟ ವಸ್ತುಗಳ ಪ್ರದರ್ಶನಕ್ಕೆ ಸೀಮಿತ ಎಂಬ ಪರಿಸ್ಥಿತಿ ಬಹುತೇಕ ಕಡೆ ಇದೆ.

ನಗರದ ಪ್ರಮುಖ ವಾಣಿಜ್ಯ ಚಟುವಟಿಕೆ ರಸ್ತೆಯಾದ ಬಿ.ಎಚ್. ರಸ್ತೆ ವಿಶಾಲವಾಗಿ ಎರಡು ಬದಿ ಫುಟ್‌ಪಾತ್ ವ್ಯವಸ್ಥೆ ಇದ್ದರೂ ಅದನ್ನು ಆಕ್ರಮಿಸಿಕೊಂಡು ವ್ಯಾಪಾರ ವಹಿವಾಟು ಮಾಡುವ ಅಂಗಡಿ ಮಳಿಗೆಗಳು ಒಂದೆಡೆ ಇದ್ದರೆ ಮತ್ತೊಂದೆಡೆ ರಸ್ತೆಬದಿಯ ವ್ಯಾಪಾರಿಗಳು ಅದರಲ್ಲಿ ತಮ್ಮ ದೈನಂದಿನ ಬದುಕು ಕಟ್ಟಿಕೊಳ್ಳುವ ಕೆಲಸ ನಡೆದಿದೆ.

‘ಇಲ್ಲಿನ ಪ್ರಮುಖ ರಸ್ತೆಯಲ್ಲಿ ಫುಟ್‌ಪತ್ ಇದ್ದರೂ ಅದು ವ್ಯಾಪಾರ–ವಹಿವಾಟಿನ ಸ್ಥಳವಾಗಿದೆ. ಇನ್ನು ಕೆಲವೆಡೆ ಅದನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಿರುವುದು ಇದೆ’ ಎನ್ನುತ್ತಾರೆ ನಕುಲ್.

‘ಬಿ.ಎಚ್. ರಸ್ತೆಯ ಹಲವೆಡೆ ಫುಟ್‌ಪಾತ್ ಇದ್ದರೆ, ಮತ್ತೆ ಕೆಲವೆಡೆ ಅದರ ಗುರುತು ಇಲ್ಲದ ರೀತಿಯಲ್ಲಿ ಮಾಡಿರುವ ಪರಿಸ್ಥಿತಿ ಸಹ ಇದೆ’ ಎನ್ನುತ್ತಾರೆ ಅವರು.

‘ಚನ್ನಗಿರಿ ರಸ್ತೆ, ತರೀಕೆರೆ ರಸ್ತೆ ಭಾಗದಲ್ಲಿ ವಿಶಾಲ ರಸ್ತೆಯಾಗಿದೆ. ಎರಡು ಬದಿಗಳಲ್ಲಿ ಇರುವ ಪಾದಚಾರಿ ರಸ್ತೆಗಳು ಒಂದಿಷ್ಟು ಓಡಾಟಕ್ಕೆ ಸುಗಮತೆ ನೀಡಿದೆ’ ಎಂದು ರಜತ್ ಹೇಳಿದರು.

‘ಸಂಜೆ ಮೇಲೆ ಇಲ್ಲಿಯೂ ಸಹ ಕೆಲವು ತಾತ್ಕಾಲಿಕ ಅಂಗಡಿಗಳು ತಲೆ ಎತ್ತಿದರೂ ಬೆಳಗಿನ ಪಾದಚಾರಿ ಓಡಾಟ ಹಾಗೂ ಇನ್ನಿತರೆ ಆವಶ್ಯಕತೆಗಳಿಗೆ ಯಾವುದೇ ಅಡ್ಡಿಯಾಗಿಲ್ಲ’ ಎಂದರು.

ರಂಗಪ್ಪ ವೃತ್ತದಿಂದ ಹೊಳೆಹೊನ್ನೂರು ಹಾಗೂ ಚನ್ನಗಿರಿ ಕಡೆಗೆ ಹೋಗುವ ಪ್ರಮುಖ ರಸ್ತೆಯಲ್ಲಿ ಪಾದಚಾರಿ ರಸ್ತೆ ಹಾಗೂ ಫುಟ್‌ಪಾತ್ ನೋಡಲೂ ಸಾಧ್ಯವಿಲ್ಲ. ಎರಡು ಬದಿಗಳಲ್ಲಿ ಪಾರ್ಕಿಂಗ್ ವಾಹನಗಳ ಭರಾಟೆ ಇದ್ದರೆ ಮತ್ತೆ ಕೆಲವೆಡೆ ತಾತ್ಕಾಲಿಕ ಅಂಗಡಿಗಳ ಸಾಲು ಇದ್ದೇ ಇದೆ.

‘ಹೊಸದಾಗಿ ರಸ್ತೆ ವಿಸ್ತರಣೆ ಹಾಗೂ ಇರುವ ರಸ್ತೆಯಲ್ಲಿನ ಬದಲಾವಣೆ ಕಾರ್ಯ ಹಲವೆಡೆ ನಡೆದಿದೆ. ಇಲ್ಲಿ ಎಲ್ಲಿಯೂ ಪಾದಚಾರಿ ಓಡಾಟಕ್ಕೆ ಸೀಮಿತವಾದ ವ್ಯವಸ್ಥೆ ಇಲ್ಲ. ಬದಲಾಗಿ ಆ ಜಾಗದಲ್ಲಿ ಪಾರ್ಕಿಂಗ್ ಇಲ್ಲವೇ ಪೆಟ್ಟಿಗೆ ಅಂಗಡಿಗಳ ಗೂಡು ಸೇರಿ, ದೊಡ್ಡ ಅಂಗಡಿಗಳ ಮಾರಾಟ ವಸ್ತುಗಳ ಪ್ರದರ್ಶನದ ವ್ಯವಸ್ಥೆ ಇವೆ. ಇದಕ್ಕೆ ಒಂದಿಷ್ಟು ಬದಲಾವಣೆ ತರುವ ಕೆಲಸವಾಗಬೇಕು’ ಎನ್ನುತ್ತಾರೆ ಬಸವರಾಜ್.

***

7 ಸ್ಥಳಗಳಲ್ಲಿ ಫುಡ್‌ಕೋರ್ಟ್‌ ನಿರ್ಮಾಣ

ಎಚ್.ಎಸ್. ರಘು

ಶಿಕಾರಿಪುರ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗವನ್ನು ಕ್ಯಾಂಟೀನ್, ಹಣ್ಣಿನ ಅಂಗಡಿ ಸೇರಿ ಹಲವು ಬೀದಿ ಬದಿ ವ್ಯಾಪಾರಿಗಳು ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿರುವ ಸಮಸ್ಯೆ ತಪ್ಪಿಸಲು 7 ಸ್ಥಳಗಳಲ್ಲಿ ಫುಡ್‌ಕೋರ್ಟ್‌ ನಿರ್ಮಿಸಲು ಪಟ್ಟಣ ಪಂಚಾಯಿತಿ ಮುಂದಾಗಿದೆ.

ಪಟ್ಟಣದ ಶಿವಮೊಗ್ಗ ರಸ್ತೆ ಸೇರಿ ಕೆಲವು ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗಗಗಳಲ್ಲಿ ಹಲವು ವಾಣಿಜ್ಯ ಚಟುವಟಿಕೆಗಳನ್ನು ಅಂಗಡಿ ಮಾಲೀಕರು ನಡೆಸಿಕೊಂಡು ಬಂದಿದ್ದಾರೆ. ಕೆಲವೊಮ್ಮೆ ಪಾದಚಾರಿ ಮಾರ್ಗದಲ್ಲಿ ಓಡಾಡುವ ಜನರಿಗೆ ತೊಂದರೆಯಾಗುತ್ತಿದೆ.

ಹಲವು ವರ್ಷಗಳಿಂದ ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ನಡೆಸುವ ಅಂಗಡಿ ಮಾಲೀಕರಿಗೆ ಸೂಕ್ತ ಸ್ಥಳ ನೀಡಬೇಕು ಎಂಬ ಕೂಗು ಕೇಳಿ ಬಂದರೂ ಇದುವರೆಗೂ ಸೂಕ್ತ ಸ್ಥಳ ನೀಡಿಲ್ಲ. ಬೀದಿಬದಿಯ ಕ್ಯಾಂಟೀನ್ ಮಾಲೀಕರೂ ಫುಡ್‌ಕೋರ್ಟ್ ನಿರ್ಮಾಣಕ್ಕೆ ಮನವಿ ಮಾಡಿದ್ದಾರೆ. ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ಸ್ಥಳ ನೀಡಿದರೆ, ಪಾದಚಾರಿ ಮಾರ್ಗದಲ್ಲಿ ಸಂಚರಿಸುವವರಿಗೆ ಉಂಟಾಗುವ ಕಿರಿಕಿರಿ ದೂರವಾಗಲಿದೆ.

ಪಾದಚಾರಿ ಮಾರ್ಗದಲ್ಲಿ ಓಡಾಡುವ ಜನರಿಗೆ ತೊಂದರೆಯಾಗದಂತೆ ನಾವು ಹಲವು ವರ್ಷಗಳಿಂದ ವ್ಯಾಪಾರ ವಹಿವಾಟು ನಡೆಸಿಕೊಂಡು ಬಂದಿದ್ದೇವೆ ಎನ್ನುತ್ತಾರೆ ಕ್ಯಾಂಟೀನ್ ಮಾಲೀಕ ಶೇಖರ್.

ಪಟ್ಟಣದ ಕೆಲವು ರಸ್ತೆಗಳಲ್ಲಿ ಮಾತ್ರ ಪಾದಚಾರಿ ಮಾರ್ಗ ನಿರ್ಮಾಣವಾಗಿದೆ. ಆದರೆ, ಹಲವು ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗ ನಿರ್ಮಾಣವಾಗಿಲ್ಲ. ಈ ರಸ್ತೆಗಳಲ್ಲಿ ಜನರು ವಾಹನಗಳು ಓಡಾಡುವ ರಸ್ತೆಯಲ್ಲಿ ಓಡಾಡುತ್ತಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.