ADVERTISEMENT

ತೀರ್ಥಹಳ್ಳಿ: ಕೇಸರಿ ಶಾಲಿಗೆ ಪ್ರತಿಯಾಗಿ ಬುರ್ಖಾ ಧರಿಸಿದ ವಿದ್ಯಾರ್ಥಿನಿಯರು

​ಪ್ರಜಾವಾಣಿ ವಾರ್ತೆ
Published 20 ಜನವರಿ 2022, 19:25 IST
Last Updated 20 ಜನವರಿ 2022, 19:25 IST
ತೀರ್ಥಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು
ತೀರ್ಥಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು   

ತೀರ್ಥಹಳ್ಳಿ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಈಚೆಗೆ ವಿದ್ಯಾರ್ಥಿಯೊಬ್ಬ ಕೇಸರಿ ಶಾಲು ಹಾಕಿಕೊಂಡು ಬಂದಿರುವುದಕ್ಕೆ ಪ್ರತಿಯಾಗಿ ಗುರುವಾರ 25 ವಿದ್ಯಾರ್ಥಿನಿಯರು ಬುರ್ಖಾ–ಹಿಜಾಬ್‌ ಹಾಕಿಕೊಂಡು ಬಂದಿದ್ದಾರೆ.

ಈ ಬೆಳವಣಿಗೆಯ ಬೆನ್ನಲ್ಲೇ ವಿದ್ಯಾರ್ಥಿನಿಯರಿಗೆ ಬುರ್ಖಾ ಧರಿಸಲು ಅವಕಾಶ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯರು ಕಾಲೇಜು ಮಂಡಳಿ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.

ಏನಿದು ವಿವಾದ?:‘ಕಾಲೇಜಿಗೆ ಬುರ್ಖಾ ಹಾಕಿಕೊಂಡು ಬರುವುದಾದರೆ ನಮಗೆ ಕೇಸರಿ ಶಾಲು ಹಾಕಲು ಅವಕಾಶ ನೀಡಬೇಕು’ ಎಂದು ಕೆಲ ತಿಂಗಳ ಹಿಂದೆ ವಿದ್ಯಾರ್ಥಿಗಳು ಒತ್ತಾಯಿಸಿದ್ದರು. ಸಭೆ ನಡೆಸಿದ್ದ ಕಾಲೇಜು ಆಡಳಿತ ಮಂಡಳಿ, ‘ಕಾಲೇಜಿನ ಆವರಣ ಹೊರತುಪಡಿಸಿ ತರಗತಿಯೊಳಗೆ ಯಾವುದೇ ವಿದ್ಯಾರ್ಥಿಗಳು ಬುರ್ಖಾ, ಹಿಜಾಬ್‌, ಕೇಸರಿ ಶಾಲು ಹಾಕಿಕೊಂಡು ಬರಲು ಅವಕಾಶ ಇಲ್ಲ. ವಸ್ತ್ರಸಂಹಿತೆಯನ್ನು ಪಾಲಿಸಬೇಕು’ ಎಂದು ತೀರ್ಮಾನ ಕೈಗೊಂಡಿತ್ತು. ಬಳಿಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಸ್ತ್ರಸಂಹಿತೆ ಪಾಲಿಸುತ್ತಿದ್ದರು. ಆದರೆ, ಈಚೆಗೆ ವಿದ್ಯಾರ್ಥಿಯೊಬ್ಬ ಕೇಸರಿ ಶಾಲು ಹಾಕಿಕೊಂಡು ಬಂದ ಕಾರಣ ವಿವಾದ ಮತ್ತೆ ಶುರುವಾಗಿದೆ.

ADVERTISEMENT

‘ಕೆಲ ವಿದ್ಯಾರ್ಥಿಗಳು ನಿಯಮ ಉಲ್ಲಂಘಿಸುತ್ತಿದ್ದಾರೆ. ಈ ಸಂಬಂಧ ಆಡಳಿತ ಮಂಡಳಿ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ಎಂದು ಪ್ರಾಚಾರ್ಯರಾದ ವೈ.ಎಂ. ಸುಧಾ ಪ್ರತಿಕ್ರಿಯಿಸಿದರು.

‘ಸಭೆ ನಡೆಸಿ ಕಠಿಣ ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ. ನಿಯಮ ಉಲ್ಲಂಘಿಸುವುದು ಸರಿಯಲ್ಲ’ ಎಂದುಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷನಾಗರಾಜ್‌ ಶೆಟ್ಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.