ADVERTISEMENT

ಫೆ.17ರಿಂದ ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆ: ದೇವಸ್ಥಾನ ಆಡಳಿತ ಮಂಡಳಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 3:58 IST
Last Updated 4 ಫೆಬ್ರುವರಿ 2026, 3:58 IST
ನಾಗರಾಜ ಶೆಟ್ಟಿ
ನಾಗರಾಜ ಶೆಟ್ಟಿ   

ತೀರ್ಥಹಳ್ಳಿ: ಎರಡು ವರ್ಷಗಳಿಗೊಮ್ಮೆ ನಡೆಯುವ ಮಾರಿಕಾಂಬಾ ಜಾತ್ರೆ ಫೆ. 17ರಿಂದ 25ರವರೆಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜ ಶೆಟ್ಟಿ ತಿಳಿಸಿದರು.

ಪ್ರತಿದಿನ ಮಧ್ಯಾಹ್ನ ಸುವರ್ಣ ಸಹಕಾರ ಭವನದಲ್ಲಿ ಅನ್ನಸಂತರ್ಪಣೆ ಇರುತ್ತದೆ. ಸಂಜೆ 6ರಿಂದ ದೇವಸ್ಥಾನದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಒಟ್ಟು ₹80 ಲಕ್ಷ ವೆಚ್ಚದಲ್ಲಿ ಜಾತ್ರೆ ನಡೆಯಲಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಫೆ. 17ರಂದು ಜಾತ್ರೆ ಸಾರುವುದು, 18ರಂದು ಪಾರಾಯಣ, ಸಂಜೆ ಸುಮುಖ ಸಂಗೀತ ನೃತ್ಯ ಶಾಲೆ, ರಾಜರಾಜೇಶ್ವರಿ ನೃತ್ಯ ಶಾಲೆಯ ಕಲಾವಿದರಿಂದ ನೃತ್ಯ ಸಂಗಮ, 19ರಂದು ಯಕ್ಷ ಕಲಾವಿದ ಪಟ್ಲ ಸತೀಶ್‌ ಶೆಟ್ಟಿ ಸಾರಥ್ಯದ ಪಾವಂಜೆ ಯಕ್ಷಗಾನ ಮೇಳ ಪ್ರಸ್ತುತ ಪಡಿಸುವ ‘ಕಾಲಮಿತಿ ಯಕ್ಷಗಾನ ಸಂಪೂರ್ಣ ದೇವಿ ಮಹಾತ್ಮೆ’ ಪ್ರದರ್ಶನ ನಡೆಯಲಿದೆ.

ADVERTISEMENT

20ರಂದು ಗಣೇಶ್‌ ದೇಸಾಯಿ, ಸುರೇಖಾ ಹೆಗಡೆ ಸುಶ್ರಾವ್ಯ ಸಂಗೀತದೊಂದಿಗೆ ನೀರ್ನಳ್ಳಿ ಗಣಪತಿ ಹೆಗಡೆ ಅವರಿಂದ ಬಣ್ಣದ ಚಿತ್ತಾರ ಮೂಡಲಿದೆ.

21ರಂದು ಚಂಡಿಕಾ ಹೋಮ, ಪೂರ್ಣಾಹುತಿ, ಸಂಜೆ ಡಾನ್ಸ್‌ ಪ್ಯಾಲೇಸ್‌ ಕೃ ಅವರಿಂದ ನೃತ್ಯ ವೈವಿಧ್ಯ, ಸಂಗೀತ ಸುಧೆ, 22ರಂದು ಧಾರ್ಮಿಕ ಕಾರ್ಯಕ್ರಮ, ಸಂಜೆ ರಾಜಗುರು ಹೊಸಕೋಟೆ ಅವರಿಂದ ಜಾನಪದ ಸಂಗೀತ, 23ರಂದು ಕಲ್ಪೋಕ್ತ ಪೂಜೆ, ಸಂಜೆ ಪುತ್ತೂರು ಜಗದೀಶ್‌ ಆಚಾರ್ಯ ಅವರಿಂದ ಸಂಗೀತ ಗಾಯನ ಸಂಭ್ರಮ ಇರುತ್ತದೆ.

24ರಂದು ರಾತ್ರಿ 8 ಗಂಟೆಗೆ ಜಾತ್ರಾ ವಿಶೇಷ ಪೂಜೆ, ಎಣ್ಣೆ ಭಂಡಾರ ಪೂಜೆ, ಸಂಪ್ರದಾಯದಂತೆ ನಾಡ್ತಿ ಆಚಾರ್‌ ಕುಟುಂಬದಿಂದ ಕೆತ್ತನೆಯ ಗೊಂಬೆ ಪೂಜೆ, ನಂತರ ಮೆರವಣಿಗೆಯಲ್ಲಿ ಹೊರಟು ಗದ್ದುಗೆ ಪ್ರತಿಷ್ಠಪಿಸುವುದು. 25ರಂದು ಬೆಳಿಗ್ಗೆ 5ಕ್ಕೆ ಗೊಂಬೆ ಪೂಜೆ, ಮಧ್ಯಾಹ್ನ 3ರಿಂದ ವಿವಿಧ ವಾದ್ಯ ವೇಷ ಭೂಷಣಗಳೊಂದಿಗೆ ಅದ್ದೂರಿ ರಾಜಬೀದಿ ಉತ್ಸವ, ನಂತರ ತುಂಗಾ ನದಿಯಲ್ಲಿ ಗೊಂಬೆ ವಿಸರ್ಜನೆ ನಡೆಯಲಿದೆ.  

ಪತ್ರಿಕಾಗೋಷ್ಠಿಯಲ್ಲಿ ಖಜಾಂಚಿ ಮಂಜುನಾಥ ಜೆ. ಶೆಟ್ಟಿ, ಕಾರ್ಯದರ್ಶಿ ಜಿ.ಸತ್ಯನಾರಾಯಣ, ಸಹ ಕಾರ್ಯದರ್ಶಿ ಕೆ.ಸಿ.ಚಂದ್ರಶೇಖರ್‌, ಮೊಕ್ತೇಸರರು ಟಿ.ಕೆ.ಜಯರಾಮ ಶೆಟ್ಟಿ, ಧರ್ಮದರ್ಶಿಗಳಾದ ಎ.ಎಸ್.ಧನಂಜಯ, ಜಯಪ್ರಕಾಶ ಶೆಟ್ಟಿ, ನಾಗಪ್ಪ ಆಚಾರ್‌, ಸಂದೇಶ ಜವಳಿ, ಬಿ.ನಾಗರಾಜ್‌, ಟಿ.ಎನ್‌. ಅನಿಲ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.