ಕಾರ್ಗಲ್: ವಿಶ್ವವಿಖ್ಯಾತ ಜೋಗ ಜಲಪಾತ ದರ್ಶನಕ್ಕೆ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಲಗ್ಗೆ ಇಟ್ಟ ಪ್ರವಾಸಿಗರು ನೂರಾರು ಮೀಟರ್ ಸರತಿ ಸಾಲಿನಲ್ಲಿ ನಿಂತು ಪ್ರವೇಶಾವಕಾಶ ಪಡೆಯುವ ಸ್ಥಿತಿ ಭಾನುವಾರ ಉಂಟಾಗಿತ್ತು.
ಲಾಕ್‌ಡೌನ್ ತೆರವು ನಂತರ ಪ್ರಥಮ ಬಾರಿಗೆ ಜನದಟ್ಟಣೆ ಅತಿ ಹೆಚ್ಚು ಕಂಡುಬಂದಿತ್ತು. 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದು, ಜಲಪಾತ ವೀಕ್ಷಣೆಗೆ ಸಂಗ್ರಹಿಸುವ ಪ್ರವೇಶ ಶುಲ್ಕ ಭಾನುವಾರ ದಾಖಲೆ ಬರೆದಿದ್ದು, ಒಂದೇ ದಿನ ₹ 2 ಲಕ್ಷ ದಾಟಿದೆ ಎಂದು ಪ್ರವಾಸೋದ್ಯಮ ಇಲಾಖೆ ಮೂಲಗಳು ತಿಳಿಸಿವೆ.
ಬಸ್, ಕಾರು, ಜೀಪು, ಬೈಕ್‌ಗಳು ಸೇರಿ 4 ಸಾವಿರಕ್ಕೂ ಹೆಚ್ಚು ವಾಹನಗಳು ಜೋಗಕ್ಕೆ ಬಂದಿದ್ದ ಕಾರಣ ಜಲಪಾತ ಪ್ರದೇಶದಲ್ಲಿ ಒಂದು ಕಿ.ಮೀ. ಉದ್ದದಷ್ಟು ವಾಹನ ದಟ್ಟಣೆ ಉಂಟಾಗಿತ್ತು.
ಜಲಪಾತ ಪ್ರದೇಶ, ರಾಣಿ ಪಾರ್ಕಿಂಗ್ ಲಾಟ್, ಸೀತಾ ಕಟ್ಟೆ ಸೇತುವೆ, ಮುಂಬಯಿ ಬಂಗಲೆ, ಶಿರೂರು ಕೆರೆ, ಯೂತ್ ಹಾಸ್ಟೆಲ್, ರಿಸರ್ವ್ ಕ್ಯಾಂಪ್ ಸೇರಿ ಜೋಗದ ಎಲ್ಲೆಡೆ ವಾಹನಗಳು ಎಲ್ಲೆಂದರಲ್ಲಿ ನಿಲುಗಡೆ ಮಾಡಲಾಗಿತ್ತು.
ಜೋಗದ ಸಬ್‌ಇನ್‌ಪೆಕ್ಟರ್ ನಿರ್ಮಲಾ ಪ್ರವಾಸಿಗರನ್ನು ನಿಯಂತ್ರಿಸಲು ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದರು. ಇದರಿಂದ ವಾಹನ ಸಂಚಾರ ಅಲ್ಪಮಟ್ಟಿಗೆ ಸುಗಮಗೊಂಡಿತ್ತು. ಜಲಪಾತ ಪ್ರದೇಶದಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸದಂತೆ ನಿಗಾ ವಹಿಸಿದ್ದರು.
ಜಲಪಾತ ಪ್ರದೇಶದಲ್ಲಿ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಮಧ್ಯಮ ವರ್ಗದವರಿಗೆ ಅನುಕೂಲವಾಗುವ ಹೋಟೆಲ್ ವ್ಯವಸ್ಥೆ ಮತ್ತು ವಸತಿ ವ್ಯವಸ್ಥೆಗಳು ಇಲ್ಲದ ಕಾರಣ ಪ್ರವಾಸಿಗರು ಪರಿತಪಿಸುವ ಸ್ಥಿತಿ ಉಂಟಾಗಿತ್ತು. ಪ್ರವಾಸೋದ್ಯಮ ಇಲಾಖೆಯ ಹೋಟೆಲ್‌ನಲ್ಲಿ ನಿಯಮಿತ ಜನರಿಗೆ ಮಾತ್ರ ಸೌಲಭ್ಯಗಳು ಲಭ್ಯವಾಗುತ್ತಿದ್ದು, ದುಬಾರಿ ಬೆಲೆ ತೆರುವ ಪರಿಸ್ಥಿತಿ ಇದೆ.
ಪ್ರವಾಸೋದ್ಯಮ ಇಲಾಖೆಯ ಹೋಟೆಲ್ ಮತ್ತು ಉಪಾಹಾರ ಗೃಹಗಳಲ್ಲಿ ಚಹಾ, ಕಾಫಿಯಿಂದ ಹಿಡಿದು ಪ್ರತಿಯೊಂದು ಆಹಾರ ಸಾಮಗ್ರಿಗೂ ತೆರಿಗೆ ಪಾವತಿಸಬೇಕಾದ ಅನಿವಾರ್ಯ ಎದುರಾಗುತ್ತಿದೆ. ಪ್ರವೇಶ ಶುಲ್ಕ ಪಾವತಿಸಿ ಜಲಪಾತ ಪ್ರದೇಶದ ಒಳಭಾಗಕ್ಕೆ ಬಂದ ಮೇಲೆ ಆಹಾರ ಪದಾರ್ಥಗಳಿಗೆ ತೆರಿಗೆ ಪಾವತಿಸುವ ಕ್ರಮವನ್ನು ಕೈಬಿಡುವ ಕ್ರಮಕ್ಕೆ ಸರ್ಕಾರ ಪ್ರವಾಸೋದ್ಯಮ ಇಲಾಖೆಗೆ ಸೂಚನೆ ನೀಡಬೇಕಾಗಿದೆ ಎಂಬುದು ಹೆಚ್ಚಿನ ಪ್ರವಾಸಿಗರ ಒತ್ತಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.