
ಶಿವಮೊಗ್ಗ: ತುಂಗಭದ್ರಾ ನದಿಯನ್ನು ಮಾಲಿನ್ಯ ಮುಕ್ತಗೊಳಿಸಲು ಮಲೆನಾಡಿನ ಪರಿಸರಾಸಕ್ತ ಸಂಘಟನೆಗಳು ಆಯೋಜಿಸಿದ್ದ ನಿರ್ಮಲ ತುಂಗ–ಭದ್ರಾ ಅಭಿಯಾನ ಆರಂಭವಾಗಿ ನ. 4ಕ್ಕೆ ಒಂದು ವರ್ಷ ಪೂರ್ಣಗೊಂಡಿದೆ. ಹೀಗಿದ್ದರೂ, ಶಿವಮೊಗ್ಗದಲ್ಲಿ ತುಂಗಾ ನದಿಯ ಆರೋಗ್ಯ ಸುಧಾರಣೆಯಾಗಿಲ್ಲ. ಅದರ ಬದಲು ಇನ್ನಷ್ಟು ಹದಗೆಟ್ಟಿದೆ.
ಸ್ವತಃ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ತುಂಗೆಯನ್ನು ರಾಜ್ಯದ ಅತ್ಯಂತ ಮಲಿನಕಾರಿ ನದಿಗಳ ಪಟ್ಟಿಗೆ (ಸಿ ಕೆಟಗರಿ) ಸೇರಿಸಿದೆ. ತುಂಗೆಯ ನೀರು ನೇರವಾಗಿ ಬಳಸಲಾಗದ ಸ್ಥಿತಿಯಲ್ಲಿದೆ ಎಂದು ಮಂಡಳಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಅಪಾಯಕಾರಿ ಮಟ್ಟದಲ್ಲಿ ಅಲ್ಯೂಮಿನಿಯಂ ಅಂಶ ಹೊಂದಿರುವ ತುಂಗಾ ನದಿ ನೀರು ಕುಡಿಯಲು ಮಾತ್ರವಲ್ಲ ಬಳಕೆಗೂ (ಸ್ನಾನಕ್ಕೂ) ಯೋಗ್ಯವಿಲ್ಲ ಎಂದು ತಿಳಿಸಿದೆ. ಹೀಗಾಗಿ ‘ತುಂಗಾ ಪಾನ, ಗಂಗಾ ಸ್ನಾನ’ ನುಡಿಗಟ್ಟು ಇನ್ನು ಬರೀ ಆಡು ಮಾತಿಗೆ ಸೀಮಿತವಾಗಲಿದೆ.
ಯಥಾ ಸ್ಥಿತಿ ಮುಂದುವರಿದಿದೆ:
ಶಿವಮೊಗ್ಗದಲ್ಲಿ ನದಿಯ ಆರೋಗ್ಯ ರಕ್ಷಣೆಯ ವಿಚಾರದಲ್ಲಿ ಆಗಬೇಕಾದ ಕೆಲಸ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಮಹಾನಗರ ಪಾಲಿಕೆಯ ಗುಂಡಪ್ಪ ಶೆಡ್‌ನ ಟ್ರೀಟ್‌ಮೆಂಟ್ ಪ್ಲಾಂಟ್ (ಎಸ್‌ಟಿಪಿ) ಹೂಳು ತುಂಬಿಕೊಂಡಿದೆ. ಮೋಟರ್ ಸಿದ್ಧವಾಗಿಲ್ಲ. ಅಲ್ಲಿನ ಏಳು ವೆಟ್‌ವೆಲ್‌ಗಳಲ್ಲೂ ಕೆಲಸ ಆಗಿಲ್ಲ. ಹೀಗಾಗಿ ಯಥಾ ಸ್ಥಿತಿಯೇ ಮುಂದುವರಿದಿದೆ ಎಂದು ನಿರ್ಮಲ ತುಂಗಭದ್ರಾ ಅಭಿಯಾನದ ಸಂಚಾಲಕರಲ್ಲೊಬ್ಬರಾದ ತ್ಯಾಗರಾಜ ಮಿತ್ಯಾಂತ ಬೇಸರ ವ್ಯಕ್ತಪಡಿಸುತ್ತಾರೆ.
ಭೀಮನ ಮಡು ಪ್ರದೇಶದಲ್ಲಿ ಸ್ಮಾರ್ಟ್‌ಸಿಟಿ ಸಂಸ್ಥೆಯಿಂದ ಲೈನ್ ಆಗಿದೆ. ವಾಕಿಂಗ್ ಪಾಥ್ ಕೆಳಗೆ ಏಳು ವೆಟ್‌ವೆಲ್ ಮಾಡಿದ್ದಾರೆ. ಅವು ಕೆಲಸ ಮಾಡದೇ ಉಪಯೋಗ ಆಗುತ್ತಿಲ್ಲ. ಅಲ್ಲಿ ಮಳೆಗಾಲದಲ್ಲಿ ವಾಲ್ವ್ ತೆರೆಯುತ್ತಾರೆ. ಮಳೆ ನೀರು ಕಡಿಮೆಯಾಗುತ್ತಿದ್ದಂತೆಯೇ ವಾಲ್ವ್ ಬಂದ್ ಮಾಡಿ ಸೀಗೆಹಟ್ಟಿಯ ದೊಡ್ಡ ಟ್ಯಾಂಕ್‌ಗೆ ಕಳಿಸಬೇಕು. ಅದಕ್ಕೆ ಸಿಬ್ಬಂದಿ ಇಲ್ಲ. ಹೇಗಿದ್ದರೂ ಸೀಗೆಹಟ್ಟಿ ಬಳಿಯೂ ಟ್ರೀಟ್‌ಮೆಂಟ್ ಆಗದೇ ನದಿಗೆ ತ್ಯಾಜ್ಯ ಬಿಡಲಾಗುತ್ತಿದೆ. ಇಲ್ಲಿಯೇ ಬಿಟ್ಟು ಬಿಡೋಣ ಎಂದು ಭೀಮನಮಡು ಬಳಿಯೇ ಬಿಡಲಾಗುತ್ತಿದೆ ಎನ್ನುತ್ತಾರೆ.
ಭೀಮನಮಡು ಬಳಿ ಪ್ಲಾಸ್ಟಿಕ್ ತ್ಯಾಜ್ಯ ಪದೇ ಪದೇ ಸಿಲುಕುವುದರಿಂದ ಮೋಟರ್ ಕೂಡ ಹಾಳಾಗುತ್ತಿವೆ. ಗುಂಡಪ್ಪ ಶೆಡ್ ಬಳಿ ಪ್ರತ್ಯೇಕ ಟ್ಯಾಂಕ್ ಮಾಡಿ, ಅಲ್ಲಿ ತ್ಯಾಜ್ಯ ಫಿಲ್ಟರ್ ಆಗಿ ನಂತರ ಅದು ವೆಟ್‌ವೆಲ್‌ಗೆ ಹೋಗುವಂತೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸುತ್ತಿದ್ದೇವೆ ಎಂದು ಹಿಂದಿನ ಪಾಲಿಕೆ ಆಯಕ್ತರು ಹೇಳಿದ್ದರು. ಆದರೆ, ಈ ಕೆಲಸ ಇನ್ನೂ ಆಗಿಲ್ಲ. ನದಿಯ ಮಾಲಿನ್ಯ ನಿಯಂತ್ರಣದ ನಿರ್ವಹಣೆಗೆ ಪಾಲಿಕೆಗೆ ಇಚ್ಛಾಶಕ್ತಿ ಇಲ್ಲ. ಕುಡಿಯುವ ನೀರು ಮಲಿನವಾಗುತ್ತಿದೆ. ಅದನ್ನು ತುರ್ತಾಗಿ ತಪ್ಪಿಸಬೇಕಿದೆ. ಅದು ಆದ್ಯತೆಯ ಕೆಲಸ ಎಂದು ಭಾವಿಸುತ್ತಿಲ್ಲ ಎನ್ನುತ್ತಾರೆ.
ಶಾಸಕರಿಗೂ ಮನವಿ:
‘ಶಾಸಕ ಎಸ್.ಎನ್.ಚನ್ನಬಸಪ್ಪ ಅವರ ಗಮನಕ್ಕೂ ತಂದಿದ್ದೇವೆ. ತುಂಗಾ ನದಿ ಮಾಲಿನ್ಯದ ವಿಚಾರಕ್ಕೆ ಸಂಬಂಧಿಸಿದಂತೆ ಆಯುಕ್ತರು, ಒಳಚರಂಡಿ ವಿಭಾಗದವರು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಕೋರಿದ್ದೇವೆ’ ಎಂದು ತ್ಯಾಗರಾಜ ಮಿತ್ಯಾಂತ ಹೇಳುತ್ತಾರೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಮಾನದಂಡದ ಅನ್ವಯ ತುಂಗಾ ನದಿಯ ಶುದ್ಧೀಕರಣಕ್ಕೆ ಸಿದ್ಧತೆ ನಡೆಸಿದ್ದೇವೆ. ವೆಟ್‌ವೆಲ್‌ಗಳು ಕೆಲಸ ಮಾಡದೇ ನದಿಗೆ ಮಾಲಿನ್ಯ ಸೇರುತ್ತಿರುವ ಕಡೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುವೆಎಸ್.ಎನ್.ಚನ್ನಬಸಪ್ಪ ಶಿವಮೊಗ್ಗ ನಗರ ಶಾಸಕ
ಅಭಿಯಾನದಿಂದ ನದಿಗಳ ಮಾಲಿನ್ಯದ ವಿಚಾರ ಸಾರ್ವಜನಿಕವಾಗಿ ಚರ್ಚೆಯಾಗುವಷ್ಟು ಯಶಸ್ಸು ದೊರೆತಿದೆ. ತುಂಗ ಹಾಗೂ ಭದ್ರಾ ನದಿಗಳನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನೂ ಜನರಿಗೆ ಮನದಟ್ಟು ಮಾಡಿದ್ದೇವೆತ್ಯಾಗರಾಜ ಮಿತ್ಯಾಂತ ನಿರ್ಮಲ ತುಂಗಭದ್ರಾ ಅಭಿಯಾನದ ಸಂಚಾಲಕ
ತುಂಗೆಯ ಹಾದಿ ಮಾಲಿನ್ಯದ್ದೇ ಸದ್ದು..
ಪಶ್ಚಿಮಘಟ್ಟ ಸಾಲಿನ ಕುದುರೆಮುಖ ಬಳಿಯ ಗಂಗಡಿಕಲ್ಲು ಬಳಿ ಜನಿಸುವ ತುಂಗಾ ನದಿ ಅಲ್ಲಿಂದ 147 ಕಿ.ಮೀ. ದೂರ ಹರಿದುಬಂದು ಕೂಡಲಿ ಬಳಿ ಭದ್ರಾ ನದಿಯನ್ನು ಸೇರುತ್ತದೆ. ಶೃಂಗೇರಿಗೆ ಕಳೆದ ವರ್ಷ 98 ಲಕ್ಷ ಯಾತ್ರಾರ್ಥಿಗಳು ಭೇಟಿ ನೀಡಿದ್ದಾರೆ. ಅವರು ಉಳಿದುಕೊಂಡಿದ್ದ ಸ್ಥಳದ ಮಾನವ ತ್ಯಾಜ್ಯ ಕೂಡ ನದಿಯ ಒಡಲು ಸೇರಿದೆ ಎಂಬ ಸಂಗತಿ ನಿರ್ಮಲ ತುಂಗ–ಭದ್ರಾ ಅಭಿಯಾನದ ಅಧ್ಯಯನದ ವೇಳೆ ಗೊತ್ತಾಗಿದೆ. ತೀರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗದತ್ತ ಹರಿದು ಬರುವಾಗ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಮಾನವ ತ್ಯಾಜ್ಯ (ರಾಸಾಯನಿಕ ಗೊಬ್ಬರ–ಕೀಟನಾಶಕ) ಬಂದು ಸೇರಿಕೊಂಡರೆ ಗಾಜನೂರು ಜಲಾಶಯದಿಂದ ಹೊಳೆಹೊನ್ನೂರು ಬಳಿಯ ಕೂಡಲಿವರೆಗಿನ (ತುಂಗ–ಭದ್ರಾ ಸಂಗಮ ಸ್ಥಳ) 33 ಕಿ.ಮೀ ವ್ಯಾಪ್ತಿಯಲ್ಲಿ ಕೈಗಾರಿಕೆ ಹಾಗೂ ಒಳಚರಂಡಿಯ ತ್ಯಾಜ್ಯ ಸೇರುವುದರಿಂದ ತುಂಗೆಯ ನೀರು ಬಳಸಲೂ ಯೋಗ್ಯವಿಲ್ಲದಂತಾಗಿದೆ. ಎರಡನೇ ಹಂತದ ಪಾದಯಾತ್ರೆಗೆ ಸಿದ್ಧತೆ.. ನಿರ್ಮಲ ತುಂಗಭದ್ರಾ ಅಭಿಯಾನ ತಂಡ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಕಿಷ್ಕಿಂಧೆಯವರೆಗಿನ 430 ಕಿ.ಮೀ. ಹಾದಿಯಲ್ಲಿ ಪಾದಯಾತ್ರೆ ನಡೆಸಿದೆ. ಈಗ ಕಿಷ್ಕಿಂಧೆಯಿಂದ ಮಂತ್ರಾಲಯದವರೆಗೆ ಎರಡನೇ ಹಂತದಲ್ಲಿ ಪಾದಯಾತ್ರೆಗೆ ಸಿದ್ಧತೆ ನಡೆಸಿದೆ. ಮೊದಲ ಹಂತದಲ್ಲಿ ಪಾದಯಾತ್ರೆಯು ತುಂಗಭದ್ರಾ ನದಿಪಾತ್ರದ ಏಳು ಜಿಲ್ಲೆ 13 ತಾಲ್ಲೂಕು ಹಾಗೂ 120ಕ್ಕೂ ಹೆಚ್ಚು ಗ್ರಾಮಗಳ ಮೂಲಕ ಒಟ್ಟು 22 ದಿನಗಳಲ್ಲಿ ಸಾಗಿ ಜಲಜಾಗೃತಿ ಮೂಡಿಸಿದೆ.
ಶಿವಮೊಗ್ಗ ಸುತ್ತಮುತ್ತ ಎಲ್ಲೆಲ್ಲಿ ನದಿ ಮಾಲಿನ್ಯ..
ಗಾಜನೂರು ಜಲಾಶಯದಿಂದ ಮುಂದೆ ಹೊಸಳ್ಳಿ ಆಚೆ ದಡದ ಮತ್ತೂರು ಬಳಿ ಹರಕೆರೆ ಬಳಿಯ ದೇವಸ್ಥಾನದ ಪಕ್ಕದಲ್ಲಿ ದೊಡ್ಡ ಮೋರಿ ಹಾಗೂ ನೀರಾವರಿ ಕಾಲುವೆಯ ನೀರು ತ್ಯಾಜ್ಯದ ರೂಪದಲ್ಲಿ ನದಿಯೊಳಗೆ ಸೇರುತ್ತಿದೆ. ಶಿವಮೊಗ್ಗದ ಹಳೆಯ ಮಂಡ್ಲಿ ಸವಾಯಿಪಾಳ್ಯ ಎನ್.ಟಿ.ರಸ್ತೆಯ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಚರಂಡಿ ನೀರು ಸೀದಾ ನದಿಗೆ ಸೇರುತ್ತಿದೆ. ಇಂದಿರಾ ನಗರ ವಿದ್ಯಾನಗರ ಕಂಟ್ರಿಕ್ಲಬ್ ಹಾಗೂ ರುದ್ರಭೂಮಿಯ ಬಳಿಯೂ ನದಿ ಮಲಿನಗೊಳ್ಳುತ್ತಿದೆ. ಅಲ್ಲಿ ವೆಟ್‌ವೆಲ್ ಇದ್ದರೂ ಅದಕ್ಕೆ ಸಂಪರ್ಕವಿಲ್ಲದೇ ಮಾಲಿನ್ಯ ಮುಂದುವರಿಯುತ್ತಿದೆ. ಅದೇ ಹಾದಿಯಲ್ಲಿ ರಾಜೀವ್‌ಗಾಂಧಿ ಬಡಾವಣೆ ಬಳಿಯೂ ದೊಡ್ಡ ಪ್ರಮಾಣದಲ್ಲಿ ಕೊಳಚೆ ನೀರು ನದಿಗೆ ಸೇರುತ್ತಿದೆ. ನದಿಯ ಈಚೆ ದಡದ ಸವಾಯಿಪಾಳ್ಯ ಹೊಸ ಸೇತುವೆಯ ಕೆಳಗೆ ಸೀಗೆಹಟ್ಟಿಯಲ್ಲಿ ದೊಡ್ಡ ಹಳ್ಳ ರಾಮಶೆಟ್ಟಿ ಪಾರ್ಕ್ ಭೀಮೇಶ್ವರ ದೇವಸ್ಥಾನ ಕೋರ್ಪಾಳಯ್ಯನ ಛತ್ರದ ಹತ್ತಿರ ನಗರದ ಚರಂಡಿ ನೀರು ಗುಂಡಪ್ಪಶೆಡ್ ಬಳಿ ರಾಜಕಾಲುವೆಯ ಕೊಳಚೆ ನೀರು ನದಿಯತ್ತ ಮುಖ ಮಾಡಿದೆ.
ಎಸ್‌ಟಿಪಿಯಲ್ಲೂ ತೊಂದರೆ
ನದಿಗೆ ನೇರ ತ್ಯಾಜ್ಯ ಹೊನ್ನಾಳಿ ರಸ್ತೆಯ ತ್ಯಾವರೆಚಟ್ನಳ್ಳಿ ಬಳಿ ಪ್ರತಿ ದಿನ 34 ದಶಲಕ್ಷ ಲೀಟರ್ ಸಾಮರ್ಥ್ಯದ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ಸ್ಥಾಪಿಸಿದೆ. ಅದಕ್ಕೆ 36 ಪಂಪ್‌ಗಳಿವೆ. ಶಿವಮೊಗ್ಗದ ವಿನೋಬನಗರ ಭಾಗದಿಂದಲೂ ಕೊಳಚೆ ನೀರು ಅಲ್ಲಿಗೆ ಹರಿದು ಬರುತ್ತಿದೆ. ಬಹಳಷ್ಟು ಕಡೆ ಒಳಚರಂಡಿಯಲ್ಲಿ ಸಂಪರ್ಕವೇ ಸರಿಯಾಗಿಲ್ಲ (ಯುಜಿಡಿಯಲ್ಲಿ ಕನೆಕ್ಟಿವಿಟಿ). ಅಲ್ಲಲ್ಲಿ ತುಂಡಾಗಿದೆ. ಕೆಲವು ಕಡೆ ಚರಂಡಿ ನೀರನ್ನು ನದಿಗೆ ತಿರುಗಿಸಲಾಗಿದೆ. ಕೆಲವೆಡೆ ಮನೆಯವರೇ ಯುಜಿಡಿ ಸಂಪರ್ಕ ಕೊಟ್ಟುಕೊಂಡಿಲ್ಲ. ಹೀಗಾಗಿ ಎಸ್‌ಟಿಪಿಗೆ ನಿತ್ಯ 11 ದಶಲಕ್ಷ ಲೀಟರ್ ಮಾತ್ರ ತ್ಯಾಜ್ಯ ನೀರು ಬರುತ್ತಿದೆ. ಹೀಗಾಗಿ ಅಲ್ಲಿನ ಪಂಪ್‌ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಫ್ಯಾನ್‌ಗಳು ತುಕ್ಕು ಹಿಡಿದಿವೆ. ಉಳಿದ 23 ದಶಲಕ್ಷ ಲೀಟರ್ ಕೊಳಚೆ ನೇರವಾಗಿ ನದಿಗೆ ಸೇರುತ್ತಿದೆ. ಬಹಳಷ್ಟು ಕಡೆ ವೆಟ್‌ವೆಲ್‌ಗಳಿಗೂ ಯುಜಿಡಿ ಸಂಪರ್ಕ ರಾಜಕಾಲುವೆ ಸಂಪರ್ಕ ಇಲ್ಲ. ಕೊಳಚೆ ನೀರು ನದಿಗೆ ನೇರವಾಗಿ ಹೋಗುತ್ತಿದೆ. ಇದು ಸಮಸ್ಯೆಯ ಮೂಲ ಎಂದು ಒಳಚರಂಡಿ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ.
ಮಾಲಿನ್ಯ; ಸಾಮೂಹಿಕ ಹೊಣೆಗಾರಿಕೆಯೇ ಮದ್ದು
ಶಿವಮೊಗ್ಗದಲ್ಲಿ ತುಂಗೆಯ ಮಾಲಿನ್ಯದ ಹೊಣೆಗಾರಿಕೆಯನ್ನು ಇಲ್ಲಿನ ಜನರು ಮಹಾನಗರ ಪಾಲಿಕೆ ತುಂಗಾ ಕಾಲುವೆಯ ಮೂಲಕ ನದಿಗೆ ಕೊಳಚೆ ನೀರು ಹರಿಸುತ್ತಿರುವ ಜಲಸಂಪನ್ಮೂಲ ಇಲಾಖೆ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾಡಳಿತ ಒಳಚರಂಡಿ ಮಂಡಳಿ ಸಾಮೂಹಿಕವಾಗಿ ಹೊರಬೇಕಿದೆ. ಈಗ ಎಲ್ಲರೂ ನದಿಗೆ ಜೀವ ಕೊಡಲು ಕೈ ಜೋಡಿಸಬೇಕಿದೆ ಎಂದು ಪರಿಸರ ಹೋರಾಟಗಾರ ಆದರ್ಶ ಸಿಂಗನಮನೆ ಹೇಳುತ್ತಾರೆ. ಸಿಗರೇಟ್ ಸಂಸ್ಥೆಯವರು ಕ್ಯಾನ್ಸರ್ ಆಸ್ಪತ್ರೆ ಕಟ್ಟಲು ಹಣ ಕೊಟ್ಟಂತೆ ಪರಿಸರಾಸಕ್ತರು ಹಮ್ಮಿಕೊಂಡಿದ್ದ ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಶಿವಮೊಗ್ಗ ಮಹಾನಗರ ಪಾಲಿಕೆಯೂ ಹಣದ ನೆರವು ಕೊಟ್ಟಿದೆ ಎಂದು ವ್ಯಂಗ್ಯವಾಡುತ್ತಾರೆ.
ಮಾಲಿನ್ಯ; ಮೀನುಗಳಿಗೂ ಬರ..
‘ತುಂಗಾ ನದಿಗೆ ಮಲಿನ ನೀರು ಸೇರುತ್ತಿರುವುದರಿಂದ ಕೋರ್ಪಾಳಯ್ಯನ ಛತ್ರದ ಬಳಿ ಮೀನುಗಾರರಿಗೆ ಮೀನಿನ ಬರ ಎದುರಾಗಿದೆ. ಮೃಗಾಲ್ ಕಾಟ್ಲಾ ರೋಹು ಮೀನುಗಳು ಮೊದಲು ಇಲ್ಲಿಯೇ ದಂಡೆ ಬಳಿ ಹಿಡಿಯಲು ಸಿಗುತ್ತಿದ್ದವು. ಗಲೀಜು ನೀರು ಸೇರುತ್ತಿರುವುದರಿಂದ ಅವು ಇಲ್ಲಿಂದ ದೂರ ಹೋಗಿವೆ. ಇಲ್ಲಿ ಬರೀ ಜಿಲೇಬಿ ಮೀನು ಮಾತ್ರ ಸಿಗುತ್ತಿವೆ. ಮೊದಲಿನಷ್ಟು ಮೀನು ಸಿಗುತ್ತಿಲ್ಲ’ ಎಂದು ಗಾಳದ ದಾರ ಬಿಗಿ ಮಾಡಿಕೊಳ್ಳುತ್ತಿದ್ದ ಮೀನುಗಾರ ನಾಗರಾಜ ಹೇಳಿದರು.
ಅಧ್ಯಯನ ಸಮಿತಿಯೂ ನಿಷ್ಕ್ರಿಯ..
ನಟ ಅನಿರುದ್ಧ ಜತಕರ್ ಮನವಿ ಮೇರೆಗೆ ತುಂಗಾ ನದಿಯ ಜೀರ್ಣೋದ್ಧಾರ ಮತ್ತು ಅದನ್ನು ಮತ್ತೆ ಜೀವಂತಗೊಳಿಸುವ ಉದ್ದೇಶದಿಂದ ಅಧ್ಯಯನಕ್ಕೆಂದು ಐಐಎಂ ಹಾಗೂ ಐಐಎಸ್ಸಿ ತಜ್ಞರನ್ನೊಳಗೊಂಡ ಸಮಿತಿಯನ್ನು ಸರ್ಕಾರ 2024ರ ಆಗಸ್ಟ್ 8ರಂದು ನೇಮಿಸಿದೆ. ಸಮಿತಿಯು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ವೈಜ್ಞಾನಿಕ ಅಧಿಕಾರಿ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಜಿಲ್ಲಾ ಪಂಚಾಯಿತಿ ಸಿಇಒ ಮಹಾನಗರ ಪಾಲಿಕೆ ಆಯುಕ್ತರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಮಂಡಳಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಧಾರವಾಡದ ನೀರು ಮತ್ತು ನೆಲ ನಿರ್ವಹಣಾ ಸಂಸ್ಥೆ ಸೇರಿದಂತೆ 15 ಸದಸ್ಯರನ್ನೊಳಗೊಂಡಿದೆ. ಎರಡು ಬಾರಿ ಸಭೆ ನಡೆಸಿದ್ದು ಬಿಟ್ಟರೆ ಬೇರೆ ಯಾವುದೇ ಬೆಳವಣಿಗೆ ನಡೆದಿಲ್ಲ. ಸಮಿತಿ ನಿಷ್ಕ್ರಿಯಗೊಂಡಿದೆ ಎಂಬುದು ಪರಿಸರಾಸಕ್ತರ ಅಳಲು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.