ಶಿವಮೊಗ್ಗ: ಇಲ್ಲಿನ ವಿದ್ಯಾನಗರದ ಸಹ್ಯಾದ್ರಿ ಕಾಲೇಜು ಎದುರಿನ ದೂರದರ್ಶನ ಮರುಪ್ರಸರಣ ಕೇಂದ್ರದ ಆವರಣದಲ್ಲಿ ಭದ್ರಾವತಿ ಆಕಾಶವಾಣಿಯ 10 ಕಿಲೋ ವ್ಯಾಟ್ ಸಾಮರ್ಥ್ಯದ ಟ್ರಾನ್ಸ್‌ಮೀಟರ್ ಅಳವಡಿಕೆಗೆ ಕೇಂದ್ರದ ಮಾಹಿತಿ ಮತ್ತು ಪ್ರಸರಣ ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆಯ ರಾಜ್ಯ ಸಚಿವ ಎಲ್.ಮುರುಗನ್ ಮಂಗಳವಾರ ಪೂಜೆ ನೆರವೇರಿಸಿದರು.
ಭದ್ರಾವತಿ ಆಕಾಶವಾಣಿ ಇಲ್ಲಿಯವರೆಗೂ 1 ಕಿಲೋ ವ್ಯಾಟ್ ಸಾಮರ್ಥ್ಯದ ಮಧ್ಯಮ ತರಂಗಾಂತರದ (ಎಂಡಬ್ಲ್ಯು) ಟ್ರಾನ್ಸ್‌ಮೀಟರ್ ಒಳಗೊಂಡಿತ್ತು. ಈಗ ಅದು 10 ವ್ಯಾಟ್‌ಗೆ ಹೆಚ್ಚಳಗೊಂಡು ಫ್ರಿಕ್ವೆನ್ಸಿ ಮೊಡ್ಯುಲೇಟರ್ (ಎಫ್‌ಎಂ) ತಾಂತ್ರಿಕತೆಗೆ ಮೇಲ್ದರ್ಜೆಗೇರಲಿದೆ.
ಈ ವೇಳೆ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, 'ಭದ್ರಾವತಿ ಆಕಾಶವಾಣಿಯ 60ನೇ ವರ್ಷದ ಸ್ಮರಣೆಗೆ ಈ ತಾಂತ್ರಿಕತೆ ಅಳವಡಿಸಲಾಗುತ್ತಿದೆ. ಅದಕ್ಕಾಗಿ ₹10 ಕೋಟಿ ವೆಚ್ಚದಲ್ಲಿ ಕೆನಡಾದಿಂದ ಟ್ರಾನ್ಸ್‌ಮೀಟರ್ ಆಮದು ಮಾಡಿಕೊಳ್ಳಲಾಗಿದೆ. ಇನ್ನು ಮುಂದೆ ಭದ್ರಾವತಿ ಆಕಾಶವಾಣಿ ಪ್ರಸರಣ ಸಾಮರ್ಥ್ಯ ಸುತ್ತಲಿನ 100 ಕಿ.ಮೀ ದೂರಕ್ಕೆ ಹೆಚ್ಚಲಿದೆ' ಎಂದರು.
ಪೂಜೆಯ ವೇಳೆ ಶಿವಮೊಗ್ಗ ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಭದ್ರಾವತಿ ಆಕಾಶವಾಣಿ ಮುಖ್ಯಸ್ಥ ಎಸ್.ಆರ್.ಭಟ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.