ಶಿವಮೊಗ್ಗ: ಕುರುಬರು ಸೇರಿದಂತೆ ಬೇರೆ ಸಮುದಾಯದವರನ್ನು ಪರಿಶಿಷ್ಟ ಪಂಗಡದ (ಎಸ್‌ಟಿ) ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಜಿಲ್ಲಾ ನಾಯಕ ವಾಲ್ಮೀಕಿ ಸಂಘದ ನೇತೃತ್ವದಲ್ಲಿ ಸಮಾಜದ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಗೂ ಮುನ್ನ ಮೆರವಣಿಗೆಯಲ್ಲಿ ಬಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಹಿಂದುಳಿದ ವರ್ಗಗಳ ಪ್ರವರ್ಗ 1 ರಲ್ಲಿರುವ ಬೆಸ್ತ, ಅಂಬಿಗ, ಕಬ್ಬಲಿಗ, ಕೋಲಿ ಜಾತಿಯವರಿಗೆ ನಾಯಕ ತಳವಾರರ ಹೆಸರಿನಲ್ಲಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿದೆ. ಅದನ್ನು ಕೂಡಲೇ ನಿಲ್ಲಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ವಾಲ್ಮೀಕಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್.ಹನುಮಂತಪ್ಪ ಮಾತನಾಡಿ, ‘ತಳವಾರ ಜಾತಿಗೆ ಸೇರದಿದ್ದರೂ ಕೇವಲ ತಳವಾರಿಕೆ ವೃತ್ತಿ ಮಾಡುತ್ತಿದ್ದರು ಎಂಬ ಕಾರಣಕ್ಕೆ ಇತರೆ ಜಾತಿಯವರು ಪರಿಶಿಷ್ಟ ವರ್ಗದ ಪ್ರಮಾಣ ಪತ್ರ ಮತ್ತು ಸಿಂಧುತ್ವ ಪ್ರಮಾಣ ಪತ್ರ ತೆಗೆದುಕೊಂಡು ಮೂಲ ತಳವಾರ ಸಮುದಾಯದವನ್ನು ವಂಚಿಸುತ್ತಿದ್ದಾರೆ. ಇದು ತಕ್ಷಣವೇ ನಿಲ್ಲಬೇಕು. ಸರ್ಕಾರ ಈ ಕೂಡಲೇ ಈ ಬಗ್ಗೆ ಗಮನಹರಿಸಬೇಕು’ ಎಂದು ಆಗ್ರಹಿಸಿದರು.
‘ಕುರುಬ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತಾರೆ. ನಾವು ಹೇಗೋ ಹೋರಾಟ ಮಾಡಿ ನಮ್ಮ ಮೀಸಲಾತಿಯನ್ನು ಶೇ 7.5ರಷ್ಟು ಪಡೆಯುತ್ತಿದ್ದೆವು. ಈಗ ಕುರುಬರು ನಮ್ಮ ಪರಿಶಿಷ್ಟವರ್ಗದ ಪಟ್ಟಿಗೆ ಬಂದರೆ ನಮ್ಮ ಸಮುದಾಯಕ್ಕೆ ಬಹಳ ದೊಡ್ಡ ಅನ್ಯಾಯವಾಗುತ್ತದೆ’ ಎಂದರು.
‘ಪರಿಶಿಷ್ಟ ವರ್ಗಕ್ಕೆ ಸೇರಿಸುವಂತೆ ಅನೇಕ ಜಾತಿಗಳು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿವೆ. ಈ ಒತ್ತಡಕ್ಕೆ ಸರ್ಕಾರ ಮಣಿಯಬಾರದು’ ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಸಮುದಾಯದ ಮುಖಂಡರಾದ ಬಿ.ಎಸ್.ನಾಗರಾಜ್, ಹರೀಶ್, ಡಿ.ಬಿ.ಹಳ್ಳಿ ಬಸವರಾಜಪ್ಪ, ಶೇಖರಪ್ಪ, ಸುರೇಶ್, ಲಕ್ಷ್ಮಣಪ್ಪ, ನಿಜಲಿಂಗಪ್ಪ, ರಂಗಪ್ಪ, ಹನುಮಂತಪ್ಪ, ಗೋಪಿ, ದುರ್ಗಪ್ಪ, ಮಲ್ಲೇಶ್ ಸೇರಿದಂತೆ ಹಲವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.