ADVERTISEMENT

ಶಿಕ್ಷಣವು ಸುಸಂಸ್ಕೃತ ಸಮಾಜ ಸೃಷ್ಟಿಸಲಿ: ಶಾಸಕ ಆರಗ ಜ್ಞಾನೇಂದ್ರ

ಹಳೆ ವಿದ್ಯಾರ್ಥಿಗಳ ‘ಅಮೃತ ಸ್ನೇಹ– ಸಮ್ಮಿಲನ’ ಕಾರ್ಯಕ್ರಮದಲ್ಲಿ ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 4:32 IST
Last Updated 24 ನವೆಂಬರ್ 2025, 4:32 IST
ರಿಪ್ಪನ್‌ಪೇಟೆ ಸಮೀಪದ ಅಮೃತ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಅಮೃತ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ವಿದ್ಯೆ ಕಲಿಸಿದ ಗುರುಗಳನ್ನು ಸನ್ಮಾನಿಸಲಾಯಿತು 
ರಿಪ್ಪನ್‌ಪೇಟೆ ಸಮೀಪದ ಅಮೃತ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಅಮೃತ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ವಿದ್ಯೆ ಕಲಿಸಿದ ಗುರುಗಳನ್ನು ಸನ್ಮಾನಿಸಲಾಯಿತು    

ರಿಪ್ಪನ್‌ಪೇಟೆ: ‘ಮಾನವೀಯತೆಯ ಮೌಲ್ಯ ಕಳೆದುಕೊಳ್ಳುತ್ತಿರುವ ವರ್ತಮಾನ ಕಾಲಘಟ್ಟದಲ್ಲಿ ಪ್ರಜ್ಞಾವಂತರೇ ಹಾದಿ ತಪ್ಪಿದ್ದಾರೆ. ದೇಶದ್ರೋಹಿ ಕೆಲಸಗಳಲ್ಲಿ ತೊಡಗುತ್ತಿರುವುದು ಅಪಾಯಕಾರಿ ಬೆಳವಣಿಗೆ. ಇಂತಹ ಕಿರಾತಕರ ಮಾನಸಿಕ ಸ್ಥಿತಿಗತಿ ಬಗ್ಗೆ ಸಂಶೋಧನೆ ಆಗಬೇಕು’ ಎಂದು ಶಾಸಕ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.

ಅಮೃತ ಸರ್ಕಾರಿ ಕಿರಿಯ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಶಾಲಾ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಅಮೃತ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಗ್ರಾಮೀಣ ಭಾಗದ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಜೊತೆ ಇಲ್ಲಿ ಪಡೆದ ಶಿಕ್ಷಣ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಮಾದರಿಯಾಗಲಿ’ ಎಂದು ಹಾರೈಸಿದರು.

ADVERTISEMENT

ಬ್ರಹ್ಮಶ್ರೀ ನಾರಾಯಣಗುರು ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ರೇಣುಕಾನಂದ ಸ್ವಾಮೀಜಿ ಮಾತನಾಡಿ, ‘ಸಹಸ್ತ್ರಾರು ವಿದ್ಯಾರ್ಥಿಗಳ ಬದುಕಿಗೆ ಮಾರ್ಗದರ್ಶನ ನೀಡಿದ ಶಿಕ್ಷಣ ಸಂಸ್ಥೆಯ ಗುರುವರ್ಯರನ್ನು ನೆನಪಿಸಿಕೊಂಡು ಬಾಲ್ಯದ ನೆನಪಿನ ಬುತ್ತಿಗಳನ್ನು ತೆರೆದಿಡುವಲ್ಲಿ ಪುಟ್ಟ ಗ್ರಾಮದ ಸಾಧನೆ ನಾಡಿಗೆ ಮಾದರಿ ಆಗಲಿದೆ’ ಎಂದು ಹೇಳಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅಮೃತ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ‘ನಮ್ಮ ಗುರಿ ಉತ್ತಮವಾಗಿದ್ದರೆ ಸಾಲದು, ನಾವು ನಡೆಯುವ ದಾರಿಯೂ ಉತ್ತಮವಾಗಿರಬೇಕು ಎಂಬ ಗಾಂಧಿ ತತ್ವದ ಆದರ್ಶವನ್ನು ಮೈಗೂಡಿಸಿಕೊಳ್ಳುವುದು ವರ್ತಮಾನದ ಅಗತ್ಯವಾಗಿದೆ. 4,000 ಧರ್ಮ, 19,000 ಭಾಷೆಗಳನ್ನು ಹೊಂದಿದ ದೇಶದಲ್ಲಿ ಎಲ್ಲ ಸಮಾಜವನ್ನು ಒಟ್ಟುಗೂಡಿಸುವ ಕೆಲಸ ನಮ್ಮದಾಗಬೇಕು’ ಎಂದು ತಿಳಿಸಿದರು.

ಉಪನ್ಯಾಸಕ ಶ್ರೀಪತಿ ಹಳಗುಂದ ಮಾತನಾಡಿ, ‘ಪ್ರಕೃತಿಗೆ ಸವಾಲಾಗಿ, ಶಾಪಿಂಗ್ ಸಂಸ್ಕೃತಿಗೆ ಮಾರುಹೋಗಿ, ಶಿಕ್ಷಣ ಪಾವಿತ್ರ್ಯಕ್ಕೆ ಧಕ್ಕೆ ತರುತ್ತಿರುವ ಈ ಕಾಲಘಟ್ಟದಲ್ಲಿ ಸಾಂಸ್ಕೃತಿಕ ವೈವಿಧ್ಯಗಳ ನಡುವೆ ಈ ಊರು ತನ್ನತನವನ್ನು ಕಾಪಾಡಿಕೊಂಡಿದೆ. ಅಮೃತ ಸುಧೆಯೊಳಗಿನ ಮುತ್ತು ಪುಸ್ತಕವು ಹೊಸ ಆಯಾಮ ಸೃಷ್ಟಿಸಿದೆ’ ಎಂದು ಬಣ್ಣಿಸಿದರು.

ಅಧ್ಯಕ್ಷತೆಯನ್ನು ಆವಕ ಅನಂತಮೂರ್ತಿ ಎಚ್.ಎಸ್. ವಹಿಸಿದ್ದರು. ಮಾಜಿ ಶಾಸಕ ಜಿ.ಡಿ.ನಾರಾಯಣಪ್ಪ, ಅಮೃತ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಚಿನ್‌ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಜಿಲ್ಲಾ ಪಂವಾಯಿತಿ ಮಾಜಿ ಸದಸ್ಯ ರಾಮಚಂದ್ರ ಬಂಡಿ, ಶ್ವೇತಾ ಬಂಡಿ, ಎಂ. ಶ್ರೀಕಾಂತ್, ವೈ.ಎಚ್.ನಾಗರಾಜ್ ಗ್ರಾಮ ಪಂಚಾಯಿತಿ ಸದಸ್ಯರಾದ ಎ.ವಿ. ಸುರೇಶ್, ಲಿಂಗರಾಜ್ ಬಂಡಿ, ಗಂದ್ರಳ್ಳಿ ವಿಶ್ವನಾಥ್, ಟಿ.ಡಿ. ಸೋಮಶೇಖರ್, ಯಶಸ್ವತಿ ವೃಷಭ ರಾಜ್ ಜೈನ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಪ್ ಕುಮಾರ್, ಜಿ.ಕೆ. ಬಶೀರ್ ಸಾಬ್ ಹಾಜರಿದ್ದರು.

ವೈದ್ಯರತ್ನ ಪುರಸ್ಕೃತ ಡಾ.ಜಿ.ಡಿ. ನಾರಾಯಣಪ್ಪ 86ರ ಹರಯದಲ್ಲಿ ಬಾಲ್ಯದ ಸಹಪಾಠಿಗಳನ್ನು ಭೇಟಿ ಮಾಡಿದ ಕ್ಷಣ 
ಅಮೃತ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು 
ವಿದ್ಯಾರ್ಥಿ ವೃಂದವನ್ನು ತಿದ್ದುವ ಗುರುಗಳನ್ನು ನೆನೆಯುವ ಅವಿಸ್ಮರಣೀಯ ದಿನ ಇದಾಗಿದೆ. ಎಲ್ಲರಿಗೂ ಬಾಲ್ಯದ ನೆನಪುಗಳು ಮರುಕಳಿಸಿದವು
ಮಧುಕರ ಅಮೃತ ಹಳೆ ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.