ADVERTISEMENT

ವಿಬಿ ಜಿ ರಾಮ್‌ಜಿ: ಕಾಂಗ್ರೆಸ್‌ ಪ್ರತಿಭಟನೆ, ಬಿಜೆಪಿಯಿಂದ ಕಾರ್ಯಕರ್ತರ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 5:08 IST
Last Updated 1 ಫೆಬ್ರುವರಿ 2026, 5:08 IST
ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಶನಿವಾರ ವಿಬಿ–ಜಿ–ರಾಮ್‌ಜಿ ಯೋಜನೆಯ ಬಗ್ಗೆ ಬಿಜೆಪಿ ಕಾರ್ಯಕರ್ತರಿಗೆ ನಡೆದ ಸಮಾವೇಶವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು
ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಶನಿವಾರ ವಿಬಿ–ಜಿ–ರಾಮ್‌ಜಿ ಯೋಜನೆಯ ಬಗ್ಗೆ ಬಿಜೆಪಿ ಕಾರ್ಯಕರ್ತರಿಗೆ ನಡೆದ ಸಮಾವೇಶವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು   

ಶಿವಮೊಗ್ಗ: ಮನರೇಗಾ ಬದಲಿಗೆ ವಿಬಿ–ಜಿ–ರಾಮ್‌ ಜಿ ಯೋಜನೆ ಜಾರಿಯ ಮೂಲಕ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರ ವಿಕೇಂದ್ರೀಕರಣ ಹಾಗೂ ಒಕ್ಕೂಟ ವ್ಯವಸ್ಥೆಯ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಹೇಳಿದರು.

ಮಹಾತ್ಮಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಲ್ಲಿ ಧರಣಿ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಪ್ರಸನ್ನಕುಮಾರ್ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿಬಿ–ಜಿ–ರಾಮ್–ಜಿ ಯೋಜನೆ ಮೂಲಕ ಗ್ರಾಮ ‍ಪಂಚಾಯ್ತಿ ಅಧಿಕಾರವನ್ನು ಕೇಂದ್ರ ಸರ್ಕಾರ ಕಿತ್ತುಕೊಂಡಿದೆ. ಇಲ್ಲಿಯವರೆಗೂ ಮನರೇಗಾ ಅಡಿ ತಮ್ಮೂರಿಗೆ ಬೇಕಾದ ಕೆಲಸ ಹಾಗೂ ಉದ್ಯೋಗದ ವಿಧಾನವನ್ನು ಗ್ರಾಮ ಪಂಚಾಯ್ತಿಗಳೇ ನಿರ್ಧರಿಸುತ್ತಿದ್ದವು. ಆದರೆ ಈಗ ಹೊಸ ಯೋಜನೆಯಡಿ ಕೇಂದ್ರ ಸರ್ಕಾರ ರೂಪಿಸಿರುವ ರಾಷ್ಟ್ರೀಯ ಮಾಸ್ಟರ್‌ಪ್ಲಾನ್ ಅನ್ವಯವೇ ಗ್ರಾಮ ಪಂಚಾಯ್ತಿಗಳು ಕ್ರಿಯಾ ಯೋಜನೆ ರೂಪಿಸಬೇಕಿದೆ ಎಂದು ಆರೋಪಿಸಿದರು.

ADVERTISEMENT

ಪೂರ್ವ ನಿರ್ಧಾರಿತ 60 ದಿನಗಳ ಕಾಲ ಇಡೀ ಯೋಜನೆಗೆ ನಿರ್ಬಂಧ ವಿಧಿಸಲಾಗಿದೆ. ಇದರಿಂದ ಬೇಡಿಕೆಯ ಅವಧಿಯಲ್ಲಿ ಕಾರ್ಮಿಕರ ಉದ್ಯೋಗದ ಅವಕಾಶಕ್ಕೆ ಕತ್ತರಿ ಬೀಳಲಿದೆ. ಈಗ ಯೋಜನೆಯಡಿ ಗುತ್ತಿಗೆದಾರರು ಪರೋಕ್ಷವಾಗಿ ಒಳಬರುವ ಅವಕಾಶವಿದ್ದು, ಹಿಂಬಾಗಿಲಿನ ಪ್ರವೇಶ ಸಾಧ್ಯತೆ ಸೃಷ್ಟಿಸಲಾಗಿದೆ. ಜಟಿಲವಾದ ತಾಂತ್ರಿಕ ವ್ಯವಸ್ಥೆಗಳ ಹೇರಿಕೆಯಿಂದ ಉದ್ಯೋಗಾವಕಾಶ ವಂಚಿಸುವ ಪ್ರಯತ್ನ ಮಾಡಲಾಗಿದೆ. ಪಂಚಾಯ್ತಿಗಳಿಗೆ ನಿಯಮಾತ್ಮಕ ಹಂಚಿಕೆ ಅನ್ವಯ ಅನುದಾನ ಹಂಚಿಕೆ ಕೇಂದ್ರ ಮಾಡಲಿದ್ದು, ಹೆಚ್ಚುವರಿ ಖರ್ಚು ಬಂದರೆ ಕೇಂದ್ರ ಹಣ ಕೊಡುವುದಿಲ್ಲ ಎಂದರು.

ನೂತನ ಯೋಜನೆಯಲ್ಲಿ ಕಾರ್ಮಿಕರಿಗೆ ವೇತನ ದರಗಳನ್ನು ಕನಿಷ್ಟ ವೇತನ ಅಥವಾ ಬೆಲೆ ಏರಿಕೆಗೆ ಅವಕಾಶವಿಲ್ಲದಂತೆ ನಿಗದಿಪಡಿಸಿದೆ. ನೂತನ ಮಂಡಳಿ ಮತ್ತು ಸ್ಟೀರಿಂಗ್ ಸಮಿತಿಗಳಿಗೆ ಅಸ್ಪಷ್ಟ ಅಧಿಕಾರ ನೀಡಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಪ್ರತಿಭಟನೆಯಲ್ಲಿ ಜವಳಿ ನಿಗಮದ ಅಧ್ಯಕ್ಷ ಕೆ. ಚೇತನ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ ಬಂಡಿ, ಕಾಂಗ್ರೆಸ್ ಪ್ರಮುಖರಾದ ಇಸ್ಮಾಯಿಲ್ ಖಾನ್, ಎನ್.ರಮೇಶ್, ಕಲಗೋಡು ರತ್ನಾಕರ್, ಎಚ್.ಸಿ. ಯೋಗೀಶ್, ಖಲೀಂ ಪಾಷಾ, ಶಿವಕುಮಾರ್, ರವಿಕುಮಾರ್, ಜಿ.ಡಿ. ಮಂಜುನಾಥ್, ಸ್ಟೆಲ್ಲಾ ಮಾರ್ಟಿನ್, ಎಸ್.ಟಿ. ಚಂದ್ರಶೇಖರ್, ಶಿ.ಜು.ಪಾಶ,  ಧೀರರಾಜ್ ಹೊನ್ನವಿಲೆ, ವಿಜಯಲಕ್ಷ್ಮೀ ಸಿ. ಪಾಟೀಲ್, ವಿಶ್ವನಾಥ ಕಾಶಿ, ಭಾರತಿ ರಾಮಕೃಷ್ಣ, ಸುವರ್ಣಾ ನಾಗರಾಜ್, ಅರ್ಚನಾ ಮತ್ತಿತರರು ಪಾಲ್ಗೊಂಡಿದ್ದರು.

ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಮನರೇಗಾ ಪರ ಶನಿವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯ ನೋಟ
ವಿಬಿ–ಜಿ–ರಾಮ್‌ಜಿಯ ಅನುದಾನದಲ್ಲಿ ಶೇ 40ರಷ್ಟು ಹಣ ರಾಜ್ಯವೇ ಭರಿಸಬೇಕಾಗಿದೆ. ಯೋಜನೆಯಲ್ಲಿ ರಾಜ್ಯಕ್ಕೆ ಯಾವುದೇ ಅಧಿಕಾರ ಇಲ್ಲದಿದ್ದರೂ ವೃಥಾ ಆರ್ಥಿಕ ಹೊರೆ ಹಾಕಲಾಗಿದೆ. ಹೊಸ ಯೋಜನೆಯ ಬಾಧಕಗಳ ಬಗ್ಗೆ ಕಾರ್ಯಕರ್ತರು ಗ್ರಾಮೀಣರಿಗೆ ಮನದಟ್ಟು ಮಾಡಿ
ಆರ್‌.ಪ್ರಸನ್ನಕುಮಾರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಮನರೇಗಾದಲ್ಲಿ ಎಸ್‌ಟಿ ಒಬಿಸಿ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಇದ್ದ ಕಡ್ಡಾಯ ಪ್ರಾತಿನಿಧ್ಯದ ಅಧಿಕಾರವನ್ನು ನೂತನ ಕಾಯ್ದೆಯಲ್ಲಿ ರದ್ದುಗೊಳಿಸಲಾಗಿದೆ. ಕೂಡಲೇ ಹೊಸ ಯೋಜನೆ ರದ್ದು ಮಾಡಿ ಮನರೇಗಾ ಮರುಜಾರಿಗೊಳಿಸಿ.
ಕೆ.ಚೇತನ್ ರಾಜ್ಯ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ
ಬಿಜೆಪಿ ಕಾರ್ಯಕರ್ತರು ನಿತ್ಯ ದೇವರ ಪೂಜೆ ತಡವಾದರೂ ಪರವಾಗಿಲ್ಲ. ವಿಬಿ–ಜಿ–ರಾಮ್‌ಜಿ ಯೋಜನೆಯ ಸೌಲಭ್ಯಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಂಕಲ್ಪ ಮಾಡಬೇಕು. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಪ್ರತ್ಯೇಕ ಗ್ರಾಮೀಣ ಬಜೆಟ್ ಮಂಡನೆಯಾಗಲಿದೆ.
ಬಿ.ವೈ.ರಾಘವೇಂದ್ರ ಶಿವಮೊಗ್ಗ ಸಂಸದ
ವಿಬಿ–ಜಿ–ರಾಮ್‌ಜಿ ವಿಚಾರದಲ್ಲಿ ಕಾಂಗ್ರೆಸ್‌ನವರು ಸತ್ಯವನ್ನು ಮರೆಮಾಚಿ ಜನರಿಗೆ ನಿರಂತರ ಸುಳ್ಳು ಹೇಳುತ್ತಾ ಸುಳ್ಳನ್ನೇ ಸತ್ಯವಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರು ಈ ಯೋಜನೆಯ ಸತ್ಯದರ್ಶನವನ್ನು ಜನರಿಗೆ ಮಾಡಿಸಬೇಕಾಗಿದೆ.
ಕೋಟಾ ಶ್ರೀನಿವಾಸ ಪೂಜಾರಿ ಚಿಕ್ಕಮಗಳೂರು ಉಡುಪಿ ಸಂಸದ

ಬಡವರ ಪರ ಎಂದು ಕಾಂಗ್ರೆಸ್ ಮೊಸಳೆ ಕಣ್ಣೀರು; ಬಿಜೆಪಿ

‘ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾ ಗ್ರಾಮೀಣ ಬಡವರಿಗೆ ಹಿಂದುಳಿದವರ ಪರ ಯಾವುದೇ ಒಳ್ಳೆಯ ಕೆಲಸ ಮಾಡದ ಕಾಂಗ್ರೆಸ್‌ ಪಕ್ಷ ಈಗ ವಿಬಿ–ಜಿ ರಾಮ್-ಜಿ ವಿರೋಧಿಸುವ ನೆಪದಲ್ಲಿ ತಾನು ಗ್ರಾಮೀಣರ ಪರ ಎಂದು ಮೊಸಳೆ ಕಣ್ಣೀರು ಸುರಿಸುತ್ತಿದೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ಕಿಡಿಕಾರಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಶನಿವಾರ ಜಿಲ್ಲಾ ಬಿಜೆಪಿಯಿಂದ ಹಮ್ಮಿಕೊಂಡಿದ್ದ ವಿಬಿ–ಜಿ–ರಾಮ್-ಜಿ (ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕ ಮಿಷನ್–ಗ್ರಾಮೀಣ) ಯೋಜನೆಯ ಬಗ್ಗೆ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಜಾಗೃತಿ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ವಿಬಿ–ಜಿ–ರಾಮ್‌ ಜಿ ವಿರುದ್ಧ 100 ಸುಳ್ಳು ಹೇಳಿ ಸತ್ಯವನ್ನು ಮರೆಮಾಚಿ ಬಡವರನ್ನು ಮತ್ತು ಗ್ರಾಮೀಣ ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಕಾಂಗ್ರೆಸ್‌ ಮಾಡುತ್ತಿದೆ. ಸ್ವಾತಂತ್ಯ್ಯಾನಂತರ ಮಹಾತ್ಮಗಾಂಧೀಜಿ ಮತ್ತು ಅಂಬೇಡ್ಕರ್ ಅವರೊಂದಿಗೆ ಕಾಂಗ್ರೆಸ್ ಪಕ್ಷ ಯಾವ ರೀತಿ ನಡೆಸಿಕೊಂಡಿದೆ ಎಂಬ ಇತಿಹಾಸ ನಮ್ಮೆಲ್ಲರ ಕಣ್ಣಮುಂದೆ ಇದೆ. ಕಾಂಗ್ರೆಸ್‌ನವರು ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಮಹಾತ್ಮಗಾಂಧಿಯ ಹೆಸರು ಬಿಟ್ಟು 450ಕ್ಕೂ ಹೆಚ್ಚು ಯೋಜನೆಗಳಿಗೆ ಜವಾಹರ್‌ಲಾಲ್ ನೆಹರೂ ರಾಜೀವ್‌ಗಾಂಧಿ ಮತ್ತು ಇಂದಿರಾಗಾಂಧಿಯ ಹೆಸರುಗಳನ್ನು  ನಾಮಕರಣ ಮಾಡಿದ್ದಾರೆ. ಈಗ ಒಳ್ಳೆಯ ಯೋಜನೆಯ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡುತ್ತಿರುವುದು ಮತ್ತು ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡುತ್ತಿರುವುದು ದೊಡ್ಡ ದುರಂತ ಎಂದರು.

ಮನರೇಗಾದಲ್ಲಿ ಕೇವಲ 100 ದಿನ ಕೆಲಸ ಕೊಡಲಾಗಿತ್ತು. ಈಗ ವಿಬಿ–ಜಿ ರಾಮ್-ಜಿಯಲ್ಲಿ ಅದನ್ನು 120 ದಿನಗಳಿಗೆ ಹೆಚ್ಚಿಸಲಾಗಿದೆ. ಈ ಮೊದಲು 15 ದಿನಕ್ಕೊಮ್ಮೆ ಹಣ ಕೊಡುತ್ತಿದ್ದರು. ಈಗ ಒಂದು ವಾರದೊಳಗೆ ನೇರವಾಗಿ ಅವರ ಖಾತೆಗೆ ಹಣ ಹೋಗುತ್ತದೆ. ಕೂಲಿಯ ದರ ₹ 320ಕ್ಕೆ ಹೆ‌ಚ್ಚಳಗೊಂಡಿದೆ ಎಂದರು.

ಸಮ್ಮೇಳನದಲ್ಲಿ ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ಹಾಗೂ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ. ಜಗದೀಶ್ ಮಾಜಿ ಶಾಸಕರಾದ ಆರ್.ಕೆ. ಸಿದ್ರಾಮಣ್ಣ ಕೆ.ಬಿ.ಅಶೋಕನಾಯ್ಕ ಮುಖಂಡರಾದ ಎಸ್. ದತ್ತಾತ್ರಿ ಜ್ಯೋತಿಪ್ರಕಾಶ್ ಸಂತೋಷ್ ಬಳ್ಳೇಕೆರೆ ಸಿದ್ಧಲಿಂಗಪ್ಪ ಟಿ.ಡಿ. ಮೇಘರಾಜ್ ವೀರಭದ್ರಪ್ಪ ಪೂಜಾರಿ ಕೋಹಳ್ಳಿ ರಾಮು ಹರೀಶ್‌ನಾಯ್ಕ ಸರಸ್ವತಿ ತಮ್ಮಡಿಹಳ್ಳಿ ನಾಗರಾಜ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.