ADVERTISEMENT

ಕೃಷಿ ಮಾತು: ನೆಮ್ಮದಿಯ ಬದುಕಿಗೆ ನೆರವಾದ ತರಕಾರಿ ಕೃಷಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2025, 6:00 IST
Last Updated 19 ಫೆಬ್ರುವರಿ 2025, 6:00 IST
ಹೊಲದಲ್ಲಿ ಬೆಳೆದ ಬದನೆ ತೋರಿಸುತ್ತಿರುವ ರೇವಣಕುಮಾರ್
ಹೊಲದಲ್ಲಿ ಬೆಳೆದ ಬದನೆ ತೋರಿಸುತ್ತಿರುವ ರೇವಣಕುಮಾರ್   

ಸೊರಬ: ಅಂಗವೈಕಲ್ಯ ಮೆಟ್ಟಿ ನಿಂತು ಸಾವಯವ ರೀತಿಯಲ್ಲಿ ತರಕಾರಿ ಕೃಷಿ ಮಾಡಿ ಹೆಚ್ಚು‌ ಆದಾಯ ಗಳಿಸುತ್ತಿರುವ ತಾಲ್ಲೂಕಿನ ಕುಪ್ಪೆ ಗ್ರಾಮದ ರೈತ ರೇವಣಕುಮಾರ್ ದುಡಿಯುವ ಛಲವೊಂದಿದ್ದರೆ ಏನನ್ನಾದರು ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.

ಹೆಗ್ಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪೆ ಗ್ರಾಮದ ರೇವಣಕುಮಾರ್ ಕುಟುಂಬ ನಿರ್ವಹಣೆಗಾಗಿ ತಮ್ಮ ಎರಡು ಎಕರೆ ಜಮೀನಿನಲ್ಲಿ ತರಕಾರಿ ಬೆಳೆದು ಸಮೃದ್ಧ ಬೆಳೆ ಜತೆ ಆದಾಯ ಗಳಿಸುತ್ತಿದ್ದಾರೆ.

ಹುಟ್ಟಿನಿಂದ ಬಂದ ಅಂಗವೈಕಲ್ಯ ಮೊದಲಿಗೆ ರೇವಣಕುಮಾರ್ ಅವರಿಗೆ ಶಾಪವಾಗಿತ್ತು. ಯಾರೊಬ್ಬರೂ ಕೆಲಸ ಕೊಡುತ್ತಿರಲಿಲ್ಲ. ಅದನ್ನೇ ಸವಾಲಾಗಿ ಸ್ವೀಕರಿಸಿದ ಅವರು ತಮ್ಮ ಜಮೀನಿನಲ್ಲಿ‌ ಬದನೆಕಾಯಿ, ತೊಂಡೆಕಾಯಿ, ಬಸಲೆ ಸೊಪ್ಪು ಹಾಗೂ ಸೌತೆಕಾಯಿ ಬೆಳೆಯುತ್ತಿದ್ದಾರೆ. 

ADVERTISEMENT

10 ಗುಂಟೆ ಬದನೆಕಾಯಿ, 15 ಗುಂಟೆ ತೊಂಡೆಕಾಯಿ ಉಳಿದ ಜಮೀನಿನಲ್ಲಿ ಅಡಿಕೆ, ಶುಂಠಿ‌ ಬೆಳೆದಿದ್ದಾರೆ. ತಾವು ಬೆಳೆದ ಬೆಳೆಯನ್ನು ಸ್ವತಃ ತಾವೇ ಸಂತೆಗೆ ತೆರಳಿ ಮಾರಾಟ ಮಾಡಿ ವಾರಕ್ಕೆ ₹4ರಿಂದ 5 ಸಾವಿರ ಆದಾಯ ಪಡೆಯುತ್ತಿದ್ದು, ತಿಂಗಳಿಗೆ ಬರೋಬ್ಬರಿ ₹ 16,000, ವರ್ಷಕ್ಕೆ ₹ 1.60 ಲಕ್ಷ ಆದಾಯ ಪಡೆಯುತ್ತಿದ್ದಾರೆ.   

ಕಡಿಮೆ ಸಮಯದಲ್ಲಿ ತರಕಾರಿ ಬೆಳೆದು ಉತ್ತಮ ಇಳುವರಿ ಪಡೆದು ಹೆಚ್ಚಿನ ಆದಾಯ ಗಳಿಸುವ ಮನಸ್ಸಿನಿಂದ ಈ ಬಾರಿ ಸಾವಯವ ಪದ್ದತಿಯಲ್ಲಿ ಬರದಳ್ಳಿ ಬದನೆಕಾಯಿ ಕೃಷಿ ಮಾಡಿದ್ದೇನೆ. ಇದು ಒಂದು ಕಟಾವಿಗೆ 10ರಿಂದ 15 ಕ್ವಿಂಟಾಲ್ ಸಿಗುವ ನಿರೀಕ್ಷೆ ಇದೆ. ಬದನೆ ಬಲಿತ ಬಳಿಕ ಅದನ್ನು ಸೀಡ್ಸ್ ಮಾಡಿ‌ ಮತ್ತೆ ನಾಟಿ ಮಾಡುತ್ತೇನೆ ಎನ್ನುತ್ತಾರೆ ರೇವಣಕುಮಾರ್.

ರೇವಣಕುಮಾರ್ ಪದವಿ ಮುಗಿಸಿದ್ದಾರೆ. ಓದಿಗೆ ತಕ್ಕಂತೆ ಕೆಲಸ ಸಿಗದ ಕಾರಣ ಕೃಷಿಯತ್ತ ಮುಖ‌ ಮಾಡಿದರು.‌ ಪತ್ನಿ‌ ಮಂಜುಳಾ ಕೂಡ ಪತಿಯ ಕೃಷಿ ಕೆಲಸಕ್ಕೆ ಕೈ ಜೋಡಿಸಿದ್ದಾರೆ. ತರಕಾರಿ‌ ಕಟಾವು, ಗೊಬ್ಬರ ಹಾಕುವುದು ಸೇರಿದಂತೆ ಪತಿ ಸಂತೆಗೆ ವ್ಯಾಪಾರಕ್ಕೆ ತೆರಳಿದಾಗ ತರಕಾರಿ ಬೆಳೆಯ ಸಂಪೂರ್ಣ ಜವಾಬ್ದಾರಿ ಅವರದ್ದೇ. 

ನ್ಯೂನತೆ ಇದ್ದರೂ‌ ಯಾರ‌ ಮೇಲೂ ಅವಲಂಬನೆಯಾಗದೇ ಏನಾದರೂ ಸಾಧನೆ ಮಾಡಬೇಕು ಎಂಬುದು‌ ನನ್ನ ಬಯಕೆಯಾಗಿತ್ತು. ಇದೀಗ ತರಕಾರಿ‌ ಕೃಷಿ ನಮ್ಮ ಕುಟುಂಬದ ಕೈ ಹಿಡಿದಿದೆ.
ರೇವಣಕುಮಾರ್, ಕೃಷಿಕ
ಹೊಲದಲ್ಲಿ ಬಿತ್ತನೆಯಿಂದ ಹಿಡಿದು ಕಟಾವು ಕೆಲಸ ಇಬ್ಬರೇ ಮಾಡಬೇಕು. ಕಡಿಮೆ ನೀರಿನಲ್ಲಿ ಇಷ್ಟೆಲ್ಲ ಬೆಳೆಯುವುದು‌ ಸ್ವಲ್ಪ ಕಷ್ಟ. ಆದರೂ ನಿಭಾಯಿಸಿಕೊಂಡು ಹೋಗುತ್ತಿದ್ದೇವೆ.
ಮಂಜುಳಾ, ರೇವಣಕುಮಾರ್ ಪತ್ನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.