ಸಾಗರ: ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಸಂಚಾರದಟ್ಟಣೆ ಸಮಸ್ಯೆ ಎದುರಾಗುತ್ತಿದ್ದು ರಸ್ತೆ ವಿಸ್ತರಣೆ ಕಾಮಗಾರಿ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ಗಾಂಧಿನಗರ ವೃತ್ತದಿಂದ ರಾಮನಗರ ವೃತ್ತದವರೆಗೆ ₹ 6 ಕೋಟಿ ವೆಚ್ಚದಲ್ಲಿ ನಡೆಯಲಿರುವ ದ್ವಿಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಗಾಂಧಿನಗರ ವೃತ್ತದಿಂದ ಜೋಗ ರಸ್ತೆಯ ಸಣ್ಣಮನೆ ಸೇತುವೆವರೆಗೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಕೂಡ ಶೀಘ್ರದಲ್ಲೆ ಆರಂಭಗೊಳ್ಳಲಿದೆ. ಕೆಳದಿ ರಸ್ತೆಯ ರಾಣಿಚೆನ್ನಮ್ಮ ವೃತ್ತದಿಂದ ಶ್ರೀಗಂಧ ಸಂಕೀರ್ಣದವರೆಗೆ ದ್ವಿಪಥ ರಸ್ತೆ ನಿರ್ಮಾಣಕ್ಕೆ ₹ 5.5 ಕೋಟಿ ಬಿಡುಗಡೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.
‘ಹಿಂದಿನ ಶಾಸಕರ ಅವಧಿಯಲ್ಲಿ ಗಣಪತಿ ಕೆರೆ ಸ್ವಚ್ಛತೆ ಹೆಸರಿನಲ್ಲಿ ₹ 2 ರಿಂದ ₹ 3 ಕೋಟಿ ಖರ್ಚು ಮಾಡಲಾಗಿದೆ. ಆದರೆ ನಾನು ಶಾಸಕನಾದ ನಂತರ ₹ 2 ಲಕ್ಷದಿಂದ ₹ 3 ಲಕ್ಷದ ಒಳಗೆ ಕೆರೆ ಸ್ವಚ್ಛತೆ ಕಾರ್ಯ ಪೂರ್ಣಗೊಳಿಸಲಾಗಿದೆ. ₹ 50 ಲಕ್ಷ ವೆಚ್ಚದಲ್ಲಿ ವಿಜಯನಗರ ಬಡಾವಣೆಯ ಈಜುಕೊಳದ ರಿಪೇರಿ ನಡೆಯುತ್ತಿದೆ’ ಎಂದರು.
ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಅರವಿಂದ ರಾಯ್ಕರ್, ವಿ.ಮಹೇಶ್, ಮಧುಮಾಲತಿ, ಸೈಯದ್ ಜಾಕೀರ್, ರವಿಕುಮಾರ್, ಸತೀಶ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಪ್ರಮುಖರಾದ ಕಲಸೆ ಚಂದ್ರಪ್ಪ,ಎನ್. ಉಷಾ, ತಾಹೀರ್, ಪ್ರಭಾವತಿ ಚಂದ್ರಕಾಂತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.