ADVERTISEMENT

ಚಂದ್ರಗುತ್ತಿ | ವಿಜಯನಗರ ಅರಸರ ಅಪೂರ್ವ ಶಾಸನ ಪತ್ತೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 3:18 IST
Last Updated 1 ಮಾರ್ಚ್ 2026, 3:18 IST
ಸೊರಬ ತಾಲ್ಲೂಕಿನ ಚಂದ್ರಗುತ್ತಿಯಲ್ಲಿ ವಿಜಯನಗರ ಅರಸರ ಆರಂಭಕಾಲದ ಅಪೂರ್ವ ಶಾಸನ ಪತ್ತೆಯಾಗಿರುವುದು
ಸೊರಬ ತಾಲ್ಲೂಕಿನ ಚಂದ್ರಗುತ್ತಿಯಲ್ಲಿ ವಿಜಯನಗರ ಅರಸರ ಆರಂಭಕಾಲದ ಅಪೂರ್ವ ಶಾಸನ ಪತ್ತೆಯಾಗಿರುವುದು   

ಸೊರಬ: ತಾಲ್ಲೂಕಿನ ಚಂದ್ರಗುತ್ತಿಯಲ್ಲಿ ವಿಜಯನಗರ ಅರಸರ ಆರಂಭಕಾಲದ ಅಪೂರ್ವ ಶಾಸನವೊಂದು ಪತ್ತೆಯಾಗಿದೆ. ಇಲ್ಲಿನ ಯಶವಂತಪ್ಪ ಮಾಸ್ಟರ್ ಶಾಸನ ಪತ್ತೆ ಹಚ್ಚಿದ್ದು, ಶಾಸನ ಲಿಪಿಯನ್ನು ಓದಲಾಗಿದೆ.

ಚಂದ್ರಗುತ್ತಿ ಭಾಗದಲ್ಲಿ ಇಲ್ಲಿಯವರೆಗೂ ಪೂರ್ಣಪ್ರಮಾಣದ ಯಾವುದೇ ಶಾಸನಗಳು ಲಭ್ಯವಾಗಿರಲಿಲ್ಲ. ಬೆಟ್ಟದ ಉತ್ತರ ಭಾಗದಲ್ಲಿ ಪತ್ತೆಯಾಗಿರುವ ಶಾಸನವನ್ನು ವೀರಗಲ್ಲು ಎಂದು ಗುರುತಿಸಲಾಗಿದೆ. ಸಂಶೋಧಕರಾದ ರಮೇಶ್ ಹಿರೇಜಂಬೂರು, ಮಂಜಪ್ಪ ಚುರ್ಚುಗುಂಡಿ ಲಿಪಿ ಅಧ್ಯಯನ ನಡೆಸಿದ್ದು, ವಿಜಯನಗರ ಅರಸರ ಆರಂಭ ಕಾಲದ ವೀರಗಲ್ಲಿದು ಎಂದು ತಿಳಿಸಿದ್ದಾರೆ.

ಈ ವೀರಗಲ್ಲು 195 ಸೆಂ.ಮೀ. ಎತ್ತರವಿದ್ದು, 68 ಸೆಂ.ಮೀ. ಅಗಲವಾಗಿದೆ. ಇದರಲ್ಲಿ ಐದು ಪಟ್ಟಿಕೆಗಳಲ್ಲಿ ಹೋರಾಟ ಮತ್ತು ಮಡಿದ ವೀರನನ್ನು ಸುರಾಂಗನೆಯರು ಸ್ವರ್ಗಕ್ಕೆ ಕರೆದೊಯ್ಯುವ ಮೆರವಣಿಗೆ ಚಿತ್ರಗಳನ್ನು ಕೆತ್ತಲಾಗಿದೆ. ಇದರಲ್ಲಿ ಹತ್ತು ಸಾಲಿನ ಬರಹವುಳ್ಳ ಶಾಸನ ಅಲ್ಲಲ್ಲಿ ತೃಟಿತಗೊಂಡಿದ್ದು, ಕ್ರಿ.ಶ. 1350ರ ಅವಧಿಯದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ.

ADVERTISEMENT

ಶಾಸನ ಸಾರಾಂಶ: ವಿಜಯನಗರದ ಅರಸ ವೀರ ಹರಿಯಪ್ಪ ಒಡೆಯರ ಅವಧಿಯದಲ್ಲಿ ಗುತ್ತಿಯ ಆಡಳಿತವನ್ನು ಮಾರಪ್ಪನು ನೋಡಿಕೊಳ್ಳುತ್ತಿದ್ದ. ಈ ಸಂದರ್ಭದಲ್ಲಿ ಆರಗದ ಅರಸರು ದಂಡೆತ್ತಿ ಬಂದಿದ್ದು, ಆಗ ವೀರ ಮರಣ ಹೊಂದಿದ ಸಂಡದ ಹಾಲಪ್ಪ ಕುರಿತು ಇರಿಸಿದ ವೀರಗಲ್ಲು ಇದಾಗಿದೆ. ಶಾಸನದಲ್ಲಿ ಅಂಕೋಲೆಯ ಉಲ್ಲೇಖವು ಗುತ್ತಿನಾಡಿನ ರಾಜಕೀಯ ವ್ಯಾಪ್ತಿ ಮತ್ತು ಆಡಳಿತಾತ್ಮಕ ಸಂಬಂಧದ ವ್ಯಾಪ್ತಿಯನ್ನು ಸೂಚಿಸುತ್ತದೆ. ವಿಶೇಷವಾಗಿ ಇಲ್ಲಿ ಉಲ್ಲೇಖವಿರುವ ಪದುಮಲದೇವಿಯ ಗುತ್ತಿ ರಾಜ್ಯದ ಉಲ್ಲೇಖವು ವಿಶೇಷವಾಗಿದ್ದು, ಇನ್ನಷ್ಟು ಕುತೂಹಲಕಾರಿ ಐತಿಹಾಸಿಕ ಅಂಶಗಳನ್ನು ಅಧ್ಯಯನದಿಂದ ಬೆಳಕಿಗೆ ತರಬಹುದಾಗಿದೆ ಎಂದು ಸಂಶೋಧಕರಾದ ಶ್ರೀಪಾದ ಬಿಚ್ಚುಗತ್ತಿ ತಿಳಿಸಿದ್ದಾರೆ.

ಶಾಸನಧ್ಯಯನದ ವೇಳೆ ಯಶವಂತಪ್ಪ ಮಾಸ್ತರ್, ರವಿ ಇದ್ದರು. 

ಪ್ರಸ್ತುತ ಈ ಶಾಸನದಲ್ಲಿ ದೊರೆತಿರುವ ಪದುಮಲದೇವಿ ಅಂಕೋಲೆ ಉಲ್ಲೇಖ ಧಾರ್ಮಿಕ ಮತ್ತು ರಾಜಕೀಯ ಹರವಿನ ಕುತೂಹಲಕಾರಿ ಅಂಶವಾಗಿದ್ದು ಇನ್ನಷ್ಟು ಹೆಚ್ಚಿನ ಶೋಧಕಾರ್ಯ ಇಲ್ಲಿ ನಡೆಯಬೇಕಿದೆ
ಶ್ರೀಪಾದ ಬಿಚ್ಚುಗತ್ತಿ ಇತಿಹಾಸ ಸಂಶೋಧಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.