
ರಿಪ್ಪನ್‌ಪೇಟೆ: ನಾಲ್ಕು ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಇಲ್ಲಿನ ವಿನಾಯಕ ವೃತ್ತ ವಿಸ್ತರಣೆ ವಿಚಾರವಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಅಧಿಕಾರಿಗಳೊಂದಿಗೆ ಈಚೆಗೆ ಸ್ಥಳ ಪರಿಶೀಲಿಸಿದರು.
‘ಸಾರ್ವಜನಿಕರ ಅನುಕೂಲಕ್ಕಾಗಿ ವಿನಾಯಕ ವೃತ್ತ ವಿಸ್ತರಣೆ ಅಗತ್ಯವಿದೆ. ಸುಸಜ್ಜಿತ ಪ್ರಯಾಣಿಕರ ತಂಗುದಾಣ, ನಾಮಫಲಕ ಹಾಗೂ ವಿದ್ಯುತ್ ದೀಪ ಅಳವಡಿಕೆ, ಆಟೊ ನಿಲ್ದಾಣ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಹೈಮಾಸ್ಟ್ ದೀಪ ಅಳವಡಿಕೆ ಕುರಿತು ನೀಲನಕ್ಷೆ ತಯಾರಿಸಲಾಗಿದೆ’ ಎಂದು ಈ ವೇಳೆ ಬೇಳೂರು ಹೇಳಿದರು.
ಈಗಿರುವ ಒಳ ಚರಂಡಿ ಹೊರತುಪಡಿಸಿ, ಆರು ಅಡಿ ಜಾಗವನ್ನು ತೆರವುಗೊಳಿಸುವಂತೆ ಲೋಕೋಪಯೋಗಿ ಹಾಗೂ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ನೀಲನಕ್ಷೆಯಂತೆ ಶೀಘ್ರವೇ ಕಾಮಗಾರಿಗೆ ಚಾಲನೆ ನೀಡುವಂತೆ ಗುತ್ತಿಗೆದಾರರಿಗೆ ತಿಳಿಸಿದರು.
ವಿನಾಯಕ ವೃತ್ತದ ಅಭಿವೃದ್ಧಿ ಕಾಮಗಾರಿಗೆ ₹2 ಕೋಟಿ ಮಂಜೂರಾತಿ ದೊರೆತಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮಳೆ ಕಡಿಮೆಯಾದ ಕೂಡಲೇ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಬೇಳೂರು ಭರವಸೆ ನೀಡಿದರು.
ಪಟ್ಟಣದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಕೆಪಿಎಸ್‌ಸಿ ಶಾಲೆಗೆ ಅನುಮೋದನೆ ದೊರೆತ ಕಾರಣ, ಶಿವಮೊಗ್ಗ ಮುಖ್ಯರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಜಾಗವನ್ನು ಸುಸಜ್ಜಿತ ಬಸ್ ನಿಲ್ದಾಣಕ್ಕೆ ಮೀಸಲಿಡುವ ಚಿಂತನೆ ನಡೆದಿದೆ ಎಂದರು.
ಗಣಪತಿ ದೇವಸ್ಥಾನದ ಹಿಂಬದಿಯಲ್ಲಿ ಅಪೂರ್ಣ ಕಾಮಗಾರಿಯಿಂದ ಶಿಥಿಲಗೊಂಡ ಸಭಾಭವನವನ್ನು ಕೆಡವಿ, ನೂತನ ಸಭಾಭವನ ನಿರ್ಮಾಣಕ್ಕೆ ₹25 ಲಕ್ಷ ಅನುದಾನ ನೀಡುವ ಭರವಸೆ ನೀಡಿದರು.
ಹೊಸನಗರ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿಗೌಡ, ಹೋಬಳಿ ಘಟಕದ ಕಾಂಗ್ರೆಸ್ ಅಧ್ಯಕ್ಷ ಗಣಪತಿ ಗವಟೂರು, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂಎಂ ಪರಮೇಶ್, ಗ್ರಾಮ ಪಂಚಾಯಿತಿ ಸದಸ್ಯರು, ಪಕ್ಷದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.