ADVERTISEMENT

ಶಿವಮೊಗ್ಗ | ಮುಳುಗಡೆ ಸಂತ್ರಸ್ತರ ಸಮಸ್ಯೆ ಇತ್ಯರ್ಥಕ್ಕೆ ವಿಶೇಷ ಜಿಲ್ಲಾಧಿಕಾರಿ

ವರ್ಷದ ಒಳಗೆ ಸೂಕ್ತ ಪರಿಹಾರಕ್ಕೆ ಕ್ರಮ: ಗೃಹ ಸಚಿವ ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 10 ಮೇ 2022, 4:22 IST
Last Updated 10 ಮೇ 2022, 4:22 IST
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದರು.
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದರು.   

ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ವಿಶೇಷ ಜಿಲ್ಲಾಧಿಕಾರಿ ನೇಮಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಲಿಂಗನಮಕ್ಕಿ, ಚಕ್ರ ವರಾಹಿ ಅಣೆಕಟ್ಟೆಗಾಗಿ ಮನೆ, ಜಮೀನು ಕಳೆದುಕೊಂಡು ಆರು ದಶಕಗಳು ಕಳೆದರೂ ಅವರಿಗೆ ನೆಲೆ ಕಲ್ಪಿಸಲು ಸಾಧ್ಯವಾಗಿಲ್ಲ. ವಿಶೇಷ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಎಲ್ಲ ಅಡೆತಡೆಗಳನ್ನೂ ನಿವಾರಿಸಿ, ಒಂದು ವರ್ಷದ ಒಳಗೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ದೊರಕಿಸಬೇಕು. ಮಂಜೂರಾಗಿರುವ ಭೂಮಿಯ ಹಕ್ಕು ದೊರಕಿಸಬೇಕು ಎಂದು ಸೂಚಿಸಿದರು.

ADVERTISEMENT

ಈಗಾಗಲೇ ಜಮೀನಿನಲ್ಲಿ ಉಳುಮೆ ಮಾಡಿಕೊಂಡಿರುವ ಮೂಲ ಸಂತ್ರಸ್ತರು, ಹೆಚ್ಚುವರಿಯಾಗಿ ಒತ್ತುವರಿ ಮಾಡಿಕೊಂಡವರು, ಯಾವ ದಾಖಲೆಯೂ ಇಲ್ಲದೆ ಹೆಚ್ಚುವರಿಯಾಗಿ ಅತಿಕ್ರಮಣ ಮಾಡಿಕೊಂಡವರ ಸಮಗ್ರ ದಾಖಲೆ ಕ್ರೋಡೀಕರಿಸಬೇಕು. ಜಿಲ್ಲೆಯ ಹೊಸನಗರ, ಸಾಗರ, ತೀರ್ಥಹಳ್ಳಿ, ಸೊರಬ ತಾಲ್ಲೂಕಿನಲ್ಲಿರುವ ಮುಳುಗಡೆ ಸಂತ್ರಸ್ತರ ಭೂಮಿಯನ್ನು ಸರ್ವೆ ಮಾಡಬೇಕು. ಸರ್ಕಾರ ಹಾಗೂ ನ್ಯಾಯಾಲಯದ ಮಟ್ಟದಲ್ಲಿ ಆಗಬೇಕಾದ ಕೆಲಸಗಳ ಪರಿಶೀಲನೆ ನಡೆಸಬೇಕು. ಸಂತ್ರಸ್ತರಿಗೆ ಮಂಜೂರಾಗಿರುವ 2033 ಎಕರೆ ತಕ್ಷಣ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ವಿಶೇಷ ಜಿಲ್ಲಾಧಿಕಾರಿ ಸಮಿತಿ: ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ಶೀಘ್ರ ಇತ್ಯರ್ಥ ಮಾಡಲು ಸರ್ಕಾರ ವಿಶೇಷ ಜಿಲ್ಲಾಧಿಕಾರಿ ನೇಮಿಸಲು ಸಮ್ಮತಿ ನೀಡಿದೆ. ವಿಶೇಷ ಜಿಲ್ಲಾಧಿಕಾರಿ ಬರುವರೆಗೂ ಈಗಿರುವ ಜಿಲ್ಲಾಧಿಕಾರಿ ಸೆಲ್ವಮಣಿ ಅವರೇ ಸಮಿತಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಮಿತಿಯಲ್ಲಿ ಸಹಾಯಕ ಅರಣ್ಯಾಧಿಕಾರಿ, ಏಳು ಜನ ಸರ್ವೆಯರ್‌ಗಳು, ದ್ವಿತೀಯ ದರ್ಜೆ ಸಹಾಯಕರು ಇರುತ್ತಾರೆ.

ಶಾಸಕ ಎಚ್‌.ಹಾಲಪ್ಪ ಹರತಾಳು, ಜಿಲ್ಲಾಧಿಕಾರಿ ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎ.ಲಕ್ಷ್ಮೀ ಪ್ರಸಾದ್, ಮುಖಂಡರಾದ ಸಾಲೆಕೊಪ್ಪ ರಾಮಚಂದ್ರ, ಬೇಗುವಳ್ಳಿ ಸತೀಶ್‌, ಬೆಳ್ಳೂರು ತಿಮ್ಮಪ್ಪ, ಯಶೋಧ, ಅಶೋಕ, ರಾಘವೇಂದ್ರ, ಹೂವಪ್ಪ ಮತ್ತಿತರರು ಸಭೆಯಲ್ಲಿಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.