ಭದ್ರಾವತಿ: ‘ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಮಾನಸಿಕ ಒತ್ತಡ, ಚರ್ಮ, ಶ್ವಾಸಕೋಶದ ಕಾಯಿಲೆ ಹಾಗೂ ಗರ್ಭಕೋಶದ ಸಮಸ್ಯೆಗಳು ಉಂಟಾಗುತ್ತದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ’ ಎಂದು ತರೀಕೆರೆ ವಿಕಸನ ಸಂಸ್ಥೆಯ ಸಂಯೋಜಕ ವಿಭಾ ವರ್ಗೀಸ್ ಹೇಳಿದರು.
ತಾಲ್ಲೂಕಿನ ಸಿದ್ದಾಪುರ ಹೊಸೂರು ವ್ಯಾಪ್ತಿಯ 10 ಗ್ರಾಮಗಳಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ಹಾಗೂ ಗ್ರಾಮಸ್ಥರಿಗಾಗಿ ತರೀಕೆರೆ ವಿಕಸನ ಸಂಸ್ಥೆ, ಎಸ್.ಜಿ.ಎಚ್.ಆರ್ ಮತ್ತು ಆರೋಗ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆರೋಗ್ಯ ಜಾಗೃತಿ ಮತ್ತು ತಪಾಸಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರೋಗ್ಯವಂತ ಜೀವನ ನಡೆಸುವಂತೆ ಪ್ರೇರೇಪಿಸುವುದು ಹಾಗೂ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದು ವಿಕಸನ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು.
‘ಗ್ರಾಮೀಣ ಪ್ರದೇಶದಲ್ಲಿ ಹಲವು ಜನರು ಕಾಯಿಲೆಯನ್ನು ಪ್ರಾಥಮಿಕ ಹಂತದಲ್ಲಿರುವಾಗಲೇ ತಪಾಸಣೆಗೆ ಬರುವುದಿಲ್ಲ. ಅದು ಉಲ್ಬಣವಾದ ಮೇಲೆ ಆಸ್ಪತ್ರೆಗೆ ಬರುತ್ತಾರೆ. ಇದರಿಂದ ಹಣ ಆರೋಗ್ಯ ಮತ್ತು ನೆಮ್ಮದಿ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಸರ್ಕಾರಿ ಆಸ್ಪತ್ರೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಎಚ್.ಎಲ್. ವರ್ಷಾ ಹೇಳಿದರು.
ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ಸೈಯದ್ ರಿಯಾಜ್ ಮಾತನಾಡಿದರು. ಉಜ್ಜಿನಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅರ್ಬಿಯ ಅಂಜುಂ, ಚರ್ಮರೋಗ ತಜ್ಞ ಡಾ. ಭರತ್ ಬಂಗೇರ, ಶಿವಮೊಗ್ಗ ಜನರಲ್ ಮೆಡಿಸಿನ್ ಮತ್ತು ಮಧುಮೇಹ ತಜ್ಞ ಡಾ. ಎಸ್.ಆರ್ ಸಂಹಿತಾ ತಪಾಸಣೆ ನಡೆಸಿದರು. 200ಕ್ಕು ಹೆಚ್ಚು ಜನರು ಶಿಬಿರದ ಸದುಪಯೋಗ ಪಡೆದುಕೊಂಡರು.
ಹಿರಿಯ ಆರೋಗ್ಯ ನಿರೀಕ್ಷಕ ಆನಂದಮೂರ್ತಿ, ಮುಖ್ಯ ಶಿಕ್ಷಕರಾದ ಲಿಂಗರಾಜ್, ಚೇತನ ಮತ್ತು ಕಿರಿಯ ಆರೋಗ್ಯ ಮಹಿಳಾ ಕಾರ್ಯಕರ್ತರಾದ ಸೆಲ್ವಿ, ಮಂಗಳ, ಪೂರ್ಣಿಮಾ, ರಶ್ಮಿ, ಶ್ರುತಿ, ಆಶಾ ಕಾರ್ಯಕರ್ತೆ ಪುಷ್ಪ, ಅಂಗನವಾಡಿ ಕಾರ್ಯಕರ್ತೆ ರೇಷ್ಮಾ, ವಿಕಸನ ಸಂಸ್ಥೆ ಅಧ್ಯಕ್ಷ ಎ.ಎಂ ವರ್ಗಿಸ್, ಎನ್.ಸಿ ಮಹಾಕೃಷ್ಣ, ದಯಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.