
ಝೈದ್ ಖಾನ್
ಶಿವಮೊಗ್ಗ : ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ಅಭಿನಯದ 'ಕಲ್ಟ್ 'ಚಿತ್ರ ಜನವರಿ 23ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ. ಹೀಗಾಗಿ ಚಿತ್ರ ತಂಡ ಮಂಗಳವಾರ ಶಿವಮೊಗ್ಗದಲ್ಲಿ ಭರ್ಜರಿಯಾಗಿ ಪ್ರಚಾರ ಕಾರ್ಯ ಹಮ್ಮಿಕೊಂಡಿತ್ತು.
ಅದಕ್ಕೂ ಮುನ್ನ ನಗರದ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟ ಝೈದ್ ಖಾನ್, ‘ಕಲ್ಟ್’ ಎಂಬುದು ಇಂದಿನ ಯುವ ಪೀಳಿಗೆಯಲ್ಲಿ ಹೆಚ್ಚು ಬಳಕೆಯಲ್ಲಿರುವ ಪದ. ಸಾಮಾನ್ಯವಾಗಿ ಹಳ್ಳಿಸೊಗಡಿನ ಗಟ್ಟಿತನ ಅಥವಾ ಮಾಸ್ ಎಂಬರ್ಥದಲ್ಲಿ ಈ ಪದ ಬಳಸಲಾಗುತ್ತದೆ ಎಂದು ಆರಂಭದಲ್ಲಿಯೇ ಪತ್ರಕರ್ತರ ಗೊಂದಲ ಪರಿಹರಿಸಿದರು.
ಕಲ್ಟ್ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ. ಎಮೋಷನ್ ಜೊತೆ ಆಕ್ಷನ್ ಸನ್ನಿವೇಶಗಳು ಈ ಸಿನಿಮಾದ ಹೈಲೆಟ್. ಜನರಿಗೆ ಸುಲಭವಾಗಿ ಅರ್ಥವಾಗುವ ಕಥೆಯೊಂದಿಗೆ ಸಿನಿಮಾ ಮಾಡಲು ಈ ಕಥೆ ಆಯ್ಕೆ ಮಾಡಿಕೊಂಡಿದ್ದೇವೆ ಎಂದರು.
ಚಿತ್ರದಲ್ಲಿ ಆರು ಹಾಡು, ಮೂರು ಫೈಟ್ ಇವೆ. ಯುವಜನರಿಗೆ ಇದು ತುಂಬಾ ಇಷ್ಟವಾಗಲಿದೆ. ನಟಿ ರಚಿತಾ ರಾಮ್ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ನಿರ್ಮಾಪಕರು ಅದ್ದೂರಿಯಾಗಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಹಾಗೂ ಟೀಸರ್ ಮೂಲಕ ಜನರಿಗೆ ಹತ್ತಿರವಾಗಿರುವ ಈ ಚಿತ್ರದ ‘ಅಯ್ಯೊ ಶಿವನೇ’ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿ, ಸಾಕಷ್ಟು ಜನಪ್ರಿಯತೆ ಪಡೆದಿದೆ ಎಂದರು.
ಚಿತ್ರದ ಮತ್ತೊಬ್ಬ ನಾಯಕಿ ಮಲೈಕಾ ಮಾತನಾಡಿ, ‘ನಾನು ದಾವಣಗೆರೆ ಹುಡುಗಿ. ಧಾರಾವಾಹಿಗಳ ಮೂಲಕ ನಟನೆಯ ಜರ್ನಿ ಶುರು ಮಾಡಿದ್ದೆ. ಈಗ ಕಲ್ಟ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದೇನೆ. ಈ ಸಿನಿಮಾ ಮೂಲಕ ಒಳ್ಳೆಯ ಅವಕಾಶ ಸಿಗಬಹುದು’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಶ್ರೀಕಾಂತ್, ಕಾಂಗ್ರೆಸ್ ಮುಖಂಡರಾದ ಎಚ್.ಸಿ. ಯೋಗೇಶ್, ಕಲೀಂ ಪಾಷಾ, ನಾಗರಾಜ್ ಕಂಕಾರಿ, ಪಾಲಾಕ್ಷಿ, ಶಿವಕುಮಾರ್, ಬಸವರಾಜ್ ಇದ್ದರು.
ನಾನು ನಟನಾಗುವುದು ಅಪ್ಪನಿಗೆ ಇಷ್ಟವಿಲ್ಲ. ಸಿನಿಮಾ ನನ್ನ ಆಯ್ಕೆಯ ಕ್ಷೇತ್ರ. ಅಪ್ಪನಿಗೆ ನಾನು ನಟನಾಗುವುದು ಇಷ್ಟವಿಲ್ಲ. ಬಿಸಿನೆಸ್ ನೋಡಿಕೊಂಡು ಇರಲಿ ಎಂಬುದು ಅವರ ಆಸೆ. ನನಗೆ ಸಿನಿಮಾ ಅಂದ್ರೆ ಬಾಲ್ಯದಿಂದಲೂ ಹುಚ್ಚು. ನನಗೆ ರಾಜಕೀಯವೂ ಇಷ್ಟವಿಲ್ಲ.ಝೈದ್ ಖಾನ್, ನಟ, ಸಚಿವ ಜಮೀರ್ ಅಹಮದ್ ಖಾನ್ ಪುತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.