ADVERTISEMENT

ಈ ಶಾಲೆಗೆ ದಾಖಲಾದರೆ ₹ 1 ಸಾವಿರ ಠೇವಣಿ

ಕುಣಿಗಲ್: ಜಿಕೆಬಿಎಂಎಸ್ ಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳಿಂದ ಕೊಡುಗೆ

​ಪ್ರಜಾವಾಣಿ ವಾರ್ತೆ
Published 30 ಮೇ 2018, 10:00 IST
Last Updated 30 ಮೇ 2018, 10:00 IST
ರಂಗಸ್ವಾಮಿ
ರಂಗಸ್ವಾಮಿ   

ಕುಣಿಗಲ್: ಇಲ್ಲಿನ ಶತಮಾನದ ಅಂಚಿನಲ್ಲಿರುವ ಪಟ್ಟಣದ ಜಿಕೆಬಿಎಂಎಸ್ ಶಾಲೆಯ ದಾಖಲಾತಿ ಹೆಚ್ಚಳ ಮತ್ತು ಗುಣಾತ್ಮಕ ಶಿಕ್ಷಣಕ್ಕಾಗಿ ಹಳೇ ವಿದ್ಯಾರ್ಥಿಗಳು ಸಂಘಟಿತರಾಗಿ ವೇದಿಕೆ ರಚಿಸಿಕೊಂಡು ವಿನೂತನ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ.

ವೇದಿಕೆಯ ಸದಸ್ಯರು, ಶಾಲೆಗೆ ದಾಖಲಾದ ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರೂಪಾಯಿ ಠೇವಣಿಯನ್ನು ಬ್ಯಾಂಕ್‌ನಲ್ಲಿ ಇಟ್ಟು, ಶಾಲೆಯಲ್ಲಿ ಓದು ಮುಗಿಸಿ ಹೋಗುವ ಸಮಯದಲ್ಲಿ ಬಡ್ಡಿ ಸಮೇತ ಹಣವನ್ನು ಕೊಟ್ಟು ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ. ಕಳೆದ ಸಾಲಿನಲ್ಲಿ ಒಟ್ಟು 52 ವಿದ್ಯಾರ್ಥಿಗಳು ದಾಖಲಾಗಿದ್ದು, ಠೇವಣಿಯನ್ನು ಇಡಲಾಗಿದೆ ಎಂದು ವೇದಿಕೆಯ ರಂಗಸ್ವಾಮಿ ತಿಳಿಸಿದ್ದಾರೆ.

‘ವೇದಿಕೆಯ ಪದಾಧಿಕಾರಿಗಳು ಸೇರಿ ದುಡಿಮೆಯ ಅಲ್ಪ ಭಾಗವನ್ನು ನಾವು ಕಲಿತ ಶಾಲೆಯ ಪ್ರಗತಿಗೆ ವಿನಿಯೋಗಿಸಲು ತೀರ್ಮಾನ ಮಾಡಿದ್ದೇವೆ. ಶಾಲೆಯಲ್ಲಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ಹೆಚ್ಚು ಗಮನ ಹರಿಸಲಾಗುತ್ತಿದೆ’ ಎಂದು ವೇದಿಕೆಯ ದಿನೇಶ್ ಕುಮಾರ್ ತಿಳಿಸಿದರು.

ADVERTISEMENT

‘ಹಳೇ ವಿದ್ಯಾರ್ಥಿಗಳ ಸಹಕಾರದಿಂದ ಶಾಲೆಯ ದಾಖಲಾತಿ ಹೆಚ್ಚಾಗಿದೆ. ಕಳೆದ ಸಾಲಿನಲ್ಲಿ ತಾಲ್ಲೂಕಿನ ವಿವಿಧ ಭಾಗಗಳಿಂದ ಮತ್ತು ಬೆಳಗಾವಿಯಿಂದ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಅಲ್ಲದೆ ಶಿರಾ ತಾಲ್ಲೂಕಿನ ಚಿಕ್ಕಬಾಣಗೆರೆಯ ಕುರಿಗಾಹಿಗಳು ತಮ್ಮ ನಿತ್ಯದ ಕಾರ್ಯಗಳಿಂದ ಮಕ್ಕಳ ಮೇಲೆ ನಿಗಾ ಇಡಲು ಸಾಧ್ಯವಾಗದೇ ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಿದ್ದಾರೆ. ಪರ ಸ್ಥಳದ ಮಕ್ಕಳು ವಸತಿ ನಿಲಯದ ಸೌಲಭ್ಯ ಪಡೆದು ಓದುತ್ತಿದ್ದಾರೆ’ ಎಂದು ಮುಖ್ಯಶಿಕ್ಷಕ ಎಚ್.ಎನ್.ರಾಜಣ್ಣ ತಿಳಿಸಿದ್ದಾರೆ.

ಶಾಲೆ ಪ್ರಾರಂಭವಾಗುವ ಮುನ್ನವೇ 12 ಮಕ್ಕಳು ದಾಖಲಾಗಿದ್ದಾರೆ. ಪುರಸಭೆ ಸದಸ್ಯರಾದ ರಂಗಸ್ವಾಮಿ, ಕೆ.ಎಲ್.ಹರೀಶ್, ಉಪಾಧ್ಯಕ್ಷ ಅರುಣ್ ಕುಮಾರ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ದಿನೇಶ್ ಕುಮಾರ್, ನರ್ತನಪುರಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೇಶವ್‌ಮೂರ್ತಿ ಹಳೇ ವಿದ್ಯಾರ್ಥಿಗಳ ವೇದಿಕೆಯ ಸದಸ್ಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.