ADVERTISEMENT

ಕಳಪೆಗೆ ಖಂಡನೆ, ರಸ್ತೆ-ಬೇಡಿಕೆ ಈಡೇರಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 10:05 IST
Last Updated 17 ಸೆಪ್ಟೆಂಬರ್ 2011, 10:05 IST

ಗುಬ್ಬಿ: ಬೀಡಿ ಕಾರ್ಮಿಕರ ಅನುಕೂಲಕ್ಕಾಗಿ ಶಾಸಕರ ಅನುದಾನದಲ್ಲಿ ನಿರ್ಮಿಸಲಾದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಗ್ರಾಮಸ್ಥರು ಪ್ರತಿಭಟಿಸಿದ ಘಟನೆ ಶುಕ್ರವಾರ ತಾಲ್ಲೂಕಿನ ಚಿಕ್ಕಕುನ್ನಾಲ ಗ್ರಾಮದಲ್ಲಿ ನಡೆದಿದೆ.

ಬೀಡಿ ಸುತ್ತುವ ಕಾರ್ಯ ನಿರ್ವಹಿಸುವ ಮುಸ್ಲಿಂ ಸಮುದಾಯದ ಕುಟುಂಬಗಳು ಹೆಚ್ಚಾಗಿ ವಾಸಿಸುವ ಚಿಕ್ಕ ಕುನ್ನಾಲ ಗ್ರಾಮದಲ್ಲಿ ಆರೋಗ್ಯ ಕೇಂದ್ರದ ಅವಶ್ಯಕತೆ ಇತ್ತು. ಈ ನಿಟ್ಟಿನಲ್ಲಿ ಕಳೆದ ವರ್ಷದ ಇಲ್ಲಿ ಶಾಸಕರ ಕ್ಷೇತ್ರಾಭಿವೃದ್ದಿ ಅನುದಾನದಲ್ಲಿ ರೂ.65 ಲಕ್ಷ ವೆಚ್ಚದ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಿಸಲು ಗುತ್ತಿಗೆ ನೀಡಲಾಯಿತು.

ಆರೋಗ್ಯ ಕೇಂದ್ರ ಆರಂಭಕ್ಕೆ ಮುನ್ನವೇ ಅಲ್ಲಿನ ಕಳಪೆ ಕಾಮಗಾರಿಗಳು ಒಂದೊಂದಾಗಿ ಕಾಣ ಬರುತ್ತಿವೆ ಎಂದು ಆರೋಪಿಸಿದ ಗ್ರಾಮಸ್ಥರು ನಡೆಯುತ್ತಿದ್ದ ಕಾಮಗಾರಿ ಕೆಲಸಕ್ಕೆ ಅಡ್ಡಿಪಡಿಸಿದರು.

ಶೌಚಾಲಯ, ಕಟ್ಟಡದ ಮುಂಭಾಗದ ರಸ್ತೆ, ಕಟ್ಟಡದ ಮೆಟ್ಟಿಲು, ಕುಡಿಯುವ ನೀರಿನ ಟ್ಯಾಂಕ್ ಸಂಪೂರ್ಣ ಹಾಳಾಗಿವೆ. ಗುತ್ತಿಗೆ ಕಾರ್ಯ ಮುಗಿಯುವ ಮೊದಲೇ ಪೂರ್ಣ ಹಣ ಪಡೆದ ಗುತ್ತಿಗೆದಾರರು ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿ ಸ್ಥಳಕ್ಕೆ ಆಗಮಿಸಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು ಆರೋಗ್ಯ ಕೇಂದ್ರದ ಕನಸು ಕಂಡಿದ್ದ ಜನರಿಗೆ ಅನ್ಯಾಯ ಎಸಗದೆ ಕಳಪೆ ಕಂಡು ಬಂದ ಸ್ಥಳದಲ್ಲಿ ಉತ್ತಮ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಎಲ್.ಕೆ.ರಾಜಣ್ಣ, ರಫೀಕ್ ಅಹಮದ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಮದ್ ಗೌಸ್, ರೈತ ಸಂಘದ ರಾಮಣ್ಣ, ವೀರಣ್ಣ, ನಂಜುಂಡಪ್ಪ ಇತರರು ಇದ್ದರು.

ಮಾರಶೆಟ್ಟಿಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಗುಬ್ಬಿ: ಗ್ರಾಮದ ಪುರಾತನ ಹೆಬ್ಬಾಗಿಲಿನಿಂದ ಹೊರಡುವ ರಸ್ತೆ ಊರ ರಸ್ತೆ ಬದಿಯಲ್ಲಿ ಬೆಳೆದ ಪೊದೆಗಳು ಗ್ರಾಮಸ್ಥರು ಅಡ್ಡಾಡದ ಸ್ಥಿತಿ ತಲುಪಿರುವ ಬಗ್ಗೆ ತಾಲ್ಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮಸ್ಥರು ಸ್ಥಳೀಯ ಆಡಳಿತ ಪಂಚಾಯಿತಿ ವಿರುದ್ಧ ಕಿಡಿಕಾರಿದ್ದಾರೆ.

ಪ್ರಮುಖ ರಸ್ತೆ ಎನಿಸಿದ ಈ ರಸ್ತೆ ಗ್ರಾಮದ ಮುಂಭಾಗದಿಂದ ಹಿಂಬದಿಯವರೆವಿಗೆ ಸುಮಾರು ಅರ್ಧ ಕಿ.ಮೀ ಕ್ರಮಿಸಿದರೆ ಐತಿಹಾಸಿಕ ಮಹಾಲಿಂಗೇಶ್ವರ ದೇವಾಲಯ ಸಂಪರ್ಕಿಸುತ್ತದೆ. ನಿತ್ಯ ನೂರಾರು ಮಂದಿ ಸಂಚರಿಸುವ ರಸ್ತೆ ಬದಿಯಲ್ಲಿ ಬೆಳೆದ ಗಿಡಮರಗಳು ಇಡೀ ರಸ್ತೆಯನ್ನೇ ಕಿರಿದಾಗಿಸಿದೆ. ಮಹಿಳೆಯರು ಮತ್ತು ಮಕ್ಕಳು ಈ ರಸ್ತೆಯಲ್ಲಿ ಓಡಾಡಲು ಭಯಭೀತಿಗೊಳ್ಳುವ ದುಸ್ಥಿತಿ ತಲುಪಿರುವುದು ಸ್ಥಳೀಯರಿಗೆ ತೀವ್ರ ಅಸಮಾಧಾನ ತಂದಿದೆ.

ಹಲವು ಬಾರಿ ಮನವಿ ಪಡೆದ ಗ್ರಾಮ ಪಂಚಾಯಿತಿ ಕಚೇರಿ ಈ ರಸ್ತೆ ಸಮೀಪದಲ್ಲೇ ಇರುವುದು ವಿಪರ್ಯಾಸ. ರಾತ್ರಿ ವೇಳೆ ಗ್ರಾಮಕ್ಕೆ ಹೊಸಬರು ಯಾರಾದರೂ ಬಂದಲ್ಲಿ ಕಾಡಿಗೆ ಪ್ರವೇಶಿಸಿದ ಅನುಭವ ಪಡೆಯುತ್ತಾರೆ ಎನ್ನುವ ಗ್ರಾಮದ ಸುಜ್ಞಾನಮೂರ್ತಿ ಅಲ್ಲಿ ಬೆಳೆದ ಪೊದೆಯಲ್ಲಿ ಹಂದಿ ಹಾವಳಿ ಹೆಚ್ಚಿದೆ. ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಚುನಾಯಿತ ಪ್ರತಿನಿಧಿಗಳು ಕಿಂಚಿತ್ ಕಾಳಜಿ ತೋರದಿರುವುದು ಅವರ ಗ್ರಾಮಸ್ಥರ ದೌರ್ಭಾಗ್ಯ ಎನ್ನುತ್ತಾರೆ.

ಗ್ರಾಮದ ಇತಿಹಾಸ ಸಾರುವ ಊರ ಹೆಬ್ಬಾಗಿಲು ಸಹ ಗಿಡಗಂಟೆಗಳಿಂದ ಮುಚ್ಚಿ ಹೋಗಿದೆ. 10 ಅಡಿಯ ಗಾಡಿ ಜಾಡಿನ ರಸ್ತೆ ಇಂದು ಬೈಸಿಕಲ್ ಸಂಚರಿಸುವ ಕಾಲು ದಾರಿಯಷ್ಟು ಕಿರಿದಾಗಿದೆ. ಗ್ರಾಮದ ಪ್ರಮುಖ ಬೀದಿ ಅಲ್ಲದೆ ಇತರೆ ರಸ್ತೆ ಸಹ ಸ್ವಚ್ಛತೆ ಕಾಣದಾಗಿದೆ. ಕೂಡಲೇ ಜನಪ್ರತಿನಿಧಿಗಳು ಇತ್ತ ಕಡೆ ಗಮನಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮ ಪಂಚಾಯಿತಿ ನೌಕರರ ಧರಣಿ
ತಿಪಟೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಘಟಕದಿಂದ ಸಿಐಟಿಯು ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

ಕೆಂಪಮ್ಮ ದೇವಿ ದೇಗುಲದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಹೊರಟ ನೌಕರರು ತಮ್ಮ ಬೇಡಿಕೆ ಕುರಿತು ಘೋಷಣೆ ಕೂಗಿದರು. ನಂತರ ತಾಲ್ಲೂಕು ಪಂಚಾಯಿತಿ ಎದುರು ಧರಣಿ ಕುಳಿತರು.

ಗ್ರಾಮ ಪಂಚಾಯಿತಿಯ ಎಲ್ಲ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಸೇವಾ ನಿಯಮಾವಳಿ ಜಾರಿಗೊಳಿಸಬೇಕು. ನೌಕರರ ವೇತನದಲ್ಲಿ ಹಿಡಿದಿರುವ ಇಪಿಎಫ್ ಭಾಗವನ್ನು ಅದರ ನಿಧಿಗೆ ಜಮಾ ಮಾಡಬೇಕು. ನೌಕರರ ಮೇಲೆ ದೌರ್ಜನ್ಯ, ಕಿರುಕುಳ ನಡೆಯದಂತೆ ನೋಡಿಕೊಳ್ಳಬೇಕು. ನೌಕರರಿಗೆ ಪ್ರತ್ಯೇಕ ಬ್ಯಾಂಕ್ ಖಾತೆ ತೆಗೆದು ಆ ಮೂಲಕ ಪ್ರತಿ ತಿಂಗಳ 5ರೊಳಗೆ ವೇತನ ಪಾವತಿಸಬೇಕು. ನೌಕರರ ವೇತನಕ್ಕಾಗಿ ಬಂದ ಅನುದಾನವನ್ನು ಬೇರೆ ಯಾವುದೇ ಕಾರ್ಯಕ್ಕೆ ಬಳಸದೆ ನಿಗದಿತವಾಗಿ ಸಂಬಳ ವಿತರಿಸಬೇಕು. ಜನಶ್ರೀ ವಿಮಾ ಯೋಜನೆ ಜಾರಿಗೊಳಿಸಬೇಕು ಎಂದು ನೌಕರರು ಆಗ್ರಹಿಸಿದರು.

ಸಿಐಟಿಯು ಮುಖಂಡ ಸುಬ್ರಹ್ಮಣ್ಯ, ತಾಲ್ಲೂಕು ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಬಸವಲಿಂಗಪ್ಪ, ಕಾರ್ಯದರ್ಶಿ ಡಿ.ರವಿಕುಮಾರ್, ಖಜಾಂಚಿ ರಾಜು ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.