ADVERTISEMENT

ಕುಡಿಯುವ ನೀರು ಯೋಜನೆ ವ್ಯರ್ಥ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 9:10 IST
Last Updated 6 ಜನವರಿ 2012, 9:10 IST

ಪಾವಗಡ: ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಉತ್ತರ ಪಿನಾಕಿನಿ ಕುಡಿಯುವ ನೀರು ಯೋಜನೆ ಪುರಸಭೆ ನಿರ್ಲಕ್ಷ್ಯದಿಂದ ನಿರರ್ಥಕವಾಗಿದೆ.

ನಾಗಲಮಡಿಕೆ ಉತ್ತರ ಪಿನಾಕಿನಿ ನದಿಯಿಂದ 18 ಕಿ.ಮೀ. ದೂರದ ಪಾವಗಡಕ್ಕೆ ಕುಡಿಯುವ ನೀರು ಒದಗಿಸುವ ರೂ. 14 ಕೋಟಿ ವೆಚ್ಚದ ಯೋಜನೆ ಕಾಮಗಾರಿ ನೀರು ಸರಬ ರಾಜು ಮತ್ತು ಒಳ ಚರಂಡಿ ಮಂಡಳಿ ವತಿಯಿಂದ ಪ್ರಾರಂಭವಾಗಿತ್ತು.

ಬ್ಯಾರೇಜ್‌ನಲ್ಲಿ ಸತತ ಎರಡು ವರ್ಷಗಳ ಕಾಲ ನೀರು ನಿಂತು ಸಣ್ಣಪುಟ್ಟ ಮರಗಿಡಗಳು ನೀರಿನಲ್ಲಿ ಕೊಳೆತು ದುರ್ವಾಸನೆ ಬರುತ್ತಿದೆ ಎಂದು ಪಾವಗಡ ನಾಗರಿಕರು ಗಲಾಟೆ ಮಾಡಿದ್ದರಿಂದ ಅಲ್ಲಿಂದ ನೀರು ಸರಬರಾಜು ನಿಲ್ಲಿಸಲಾಯಿತು. ಆದರೆ ನೀರನ್ನು ಸ್ವಚ್ಛಗೊಳಿಸುವ ಬಗ್ಗೆ ಕ್ರಮಕೈಗೊಳ್ಳಲಿಲ್ಲ. ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡಲು ಯಂತ್ರ ಅಳವಡಿಕೆಗೂ ಮುಂದಾಗಲಿಲ್ಲ.

ಚಾಕ್‌ವೆಲ್‌ನಲ್ಲಿ ಬಿದ್ದಿರುವ ಗುಂಡಿ ರಿಪೇರಿ ಮಾಡಿಸಿಲ್ಲ. ಬ್ಯಾರೇಜ್‌ನಲ್ಲಿ ನೀರು ನಿಲ್ಲುವ ಜಾಗದ ಸ್ವಚ್ಛತೆ ಮಾಡಿಲ್ಲ. ನೀರು ಸರಬರಾಜು ಮಾಡುವ ಪೈಪು ಬಿದ್ದು ಹೋಗಿದ್ದರೂ ಕೇಳುವವರಿಲ್ಲ. ಈ ಯೋಜನೆಯ ಮೂಲಕ ಜಿನಗು ನೀರನ್ನಾದರೂ ಪಾವಗಡ ಪಟ್ಟಣಕ್ಕೆ ನೀಡಬೇಕೆಂದು ಜನತೆ ಆಗ್ರಹಿಸಿದ್ದಾರೆ.

ಬೇಸಿಗೆ ಬಂದು ಬ್ಯಾರೇಜ್ ಒಣಗಿದೆ. ಪುರಸಭೆ ನಾಗಲಮಡಿಕೆಯಿಂದ ಬರುವ ನೀರು ಸರಬರಾಜು ಯೋಜನೆಯ ರಿಪೇರಿ ಕಾರ್ಯಗಳನ್ನು ಕೂಡಲೇ ಬೇಸಿಗೆ ಮುಗಿಯುವ ವೇಳೆಗೆ ಕೈಗೊಳ್ಳಬೇಕು ಮತ್ತು ಪಾವಗಡ ಪಟ್ಟಣದ ನೀರು ಸರಬರಾಜು ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ರೂಪಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.