ADVERTISEMENT

ಕೃಷಿ ಬಜೆಟ್ ರೈತರ ಆಶೋತ್ತರ ಈಡೇರಿಸಲಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 9:20 IST
Last Updated 11 ಫೆಬ್ರುವರಿ 2011, 9:20 IST

ತಿಪಟೂರು: ರೈತರ ಆಶೋತ್ತರಗಳನ್ನು ಕೃಷಿ ಬಜೆಟ್  ಈಡೇರಿಸಿದಾಗ ಮಾತ್ರ ಆರ್ಥಿಕತೆಗೆ ಅರ್ಥ ಬರುತ್ತದೆ ಎಂದು ವಿದ್ಯಾಪೀಠ ಸಂಸ್ಥೆಯ ಸಂಸ್ಥಾಪಕ ಎಸ್.ಕೆ. ರಾಜಶೇಖರ್ ಅಭಿಪ್ರಾಯಪಟ್ಟರು.ತಾಲ್ಲೂಕು ರೈತ ಒಕ್ಕೂಟ ನಗರದಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯ ಸರ್ಕಾರದ ಕೃಷಿ ಬಜೆಟ್ ಕುರಿತ ಚಿಂತನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ದೇಶದಲ್ಲೇ ವಿನೂತನವಾದ ಕೃಷಿ ಬಜೆಟ್ ಮಂಡಿಸಲು ಮುಂದಾಗಿರುವುದು ಸ್ವಾಗತಾರ್ಹ. ಒಟ್ಟು ಜನಸಂಖ್ಯೆಯಲ್ಲಿ ಶೇ. 70ರಷ್ಟಿರುವ ಕೃಷಿಕರ ಹಾಗೂ ಅನ್ನಮೂಲವಾದ ಕೃಷಿ ಹಿತ ಕಾಯಲು ಪ್ರತ್ಯೇಕ ಆರ್ಥಿಕ ಮುನ್ನೋಟ ಅಗತ್ಯವಿದೆ ಎಂದರು.

ಶಿಕ್ಷಣ, ಆರೋಗ್ಯ, ತಾಂತ್ರಿಕತೆ ಮತ್ತು ಸಮಾಜಸೇವೆ ಬದ್ಧತೆಯನ್ನು ಕೃಷಿ ನೆಲೆಗಳಿಗೆ ಆದ್ಯತೆಯಲ್ಲಿ ಸಮನ್ವಯಗೊಳಿಸಬೇಕು. ಬೀಜ, ಗೊಬ್ಬರ, ನೀರಿನ ಪಡಿಪಾಟಲಿನಿಂದ ದಿಕ್ಕೆಟ್ಟಿರುವ ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ಉಳಿದ ಕ್ಷೇತ್ರಗಳ ಅನುಸಂದಾನ ಸೃಷ್ಟಿಸಬೇಕು ಎಂದು ತಿಳಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಆರ್. ಬಸವರಾಜು ಮಾತನಾಡಿ,  ರೈತ ಹೋರಾಟಗಾರ ದಿ. ಪ್ರೊ.ಎಂ.ಡಿ. ನಂಜುಂಡಸ್ವಾಮಿ ಪ್ರತ್ಯೇಕ ಕೃಷಿ ಬಜೆಟ್ ಮಂಡನೆಯ ಕಲ್ಪನೆ ಹುಟ್ಟುಹಾಕಿದ್ದರು ಎಂದು ಸ್ಮರಿಸಿದರು.

ಕಾಟಾಚಾರವಾಗಿ, ಜನಪ್ರಿಯತೆಯ ಅಸ್ತ್ರವಾಗಿ ಕೃಷಿ ಬಜೆಟ್ ಮಂಡಿಸಿದರೆ ಅದು ವ್ಯರ್ಥ. ರೈತಪರ ಕಾಳಜಿಯಿಂದ ಪ್ರಾಮಾಣಿಕವಾಗಿ ಹೊರಹೊಮಿದರೆ ಅದು ಸಾರ್ಥಕ ಎಂದರು.ಸಿರಿಸಮೃದ್ಧಿ ಸಾವಯವ ಕೃಷಿ ಪರಿವಾರದ ಅಧ್ಯಕ್ಷ ಪ್ರೊ. ನಂಜುಂಡಪ್ಪ ಮಾತನಾಡಿ, ಕೃಷಿ ಬಜೆಟ್ ಸಿದ್ಧಪಡಿಸುವ ಸಮಿತಿಗೆ ನೈಜ್ಯ ಕೃಷಿಕರನ್ನು ಸೇರಿಸಿಕೊಂಡು ಅವರ ಅಭಿಪ್ರಾಯಕ್ಕೆ ಬೆಲೆ ಕೊಡಬೇಕು. ಲಾಭದಾಯಿಕ ಮತ್ತು ಸುಸ್ಥಿರ ಕೃಷಿ, ನೀರಾವರಿ, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಲು ಬಜೆಟ್ ಪೂರಕವಾಗಿರಬೇಕು ಎಂದು ತಿಳಿಸಿದರು. ರೈತ ಒಕ್ಕೂಟದ ಅಧ್ಯಕ್ಷ ಕೆ.ಎಸ್. ಸದಾಶಿವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದೇ ಮೊದಲ ಬಾರಿಗೆ ಪ್ರಸ್ತಾಪವಾಗಿರುವ ಕೃಷಿ ಬಜೆಟ್ ಸಿದ್ಧಪಡಿಸುವ ಮುನ್ನ ಸರ್ಕಾರಕ್ಕೆ ರೈತರು ಸಲಹೆ, ಸೂಚನೆ ರವಾನಿಸಲು ಇಂತಹ ಸಭೆ ಏರ್ಪಡಿಸಲಾಗಿದೆ ಎಂದರು.ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಎಸ್. ದೇವರಾಜು, ರೈತ ಸಂಘದ ಯೋಗೀಶ್ವರಸ್ವಾಮಿ, ದಯಾನಂದಸ್ವಾಮಿ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.