ADVERTISEMENT

ಜನರ ಸಹಭಾಗಿತ್ವದಲ್ಲಿ ಪುನಶ್ಚೇತನ ಯೋಜನೆ ಜಾರಿ

ಜನಸಂಗ್ರಾಮ ಪರಿಷತ್ ಮತ್ತು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯಿಂದ ಜಿಲ್ಲಾಡಳಿತಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 4 ಮೇ 2018, 12:17 IST
Last Updated 4 ಮೇ 2018, 12:17 IST

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು ತಾಲ್ಲೂಕಿನ ಗಣಿಭಾದಿತ ಪ್ರದೇಶಗಳ ಪುನಶ್ಚೇತನ ಮತ್ತು ಪುನರ್ವಸತಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಜನರ ಜೊತೆ ಸಮಾಲೋಚನೆ ನಡೆಸದೆ ತಮಗೆ ಸರಿತೋರಿದಂತೆ ಯೋಜನೆಗಳನ್ನು ‌ರೂಪಿಸಿದ್ದಾರೆ. ಸಾರ್ವಜನಿಕರ ಅಭಿಪ್ರಾಯಗಳನ್ನು ಪಡೆದು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಆಗ್ರಹಿಸಿ ಜನಸಂಗ್ರಾಮ ಪರಿಷತ್ ಮತ್ತು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಕಾರ್ಯಕರ್ತರು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಗೆ ಗುರುವಾರ ಮನವಿ ಸಲ್ಲಿಸಿದರು.

ಈ ಯೋಜನೆಗಳು ಜನರ ಸಹಭಾಗಿತ್ವದಲ್ಲಿ ಪಾರದರ್ಶಕವಾಗಿ ಜಾರಿಗೊಳ್ಳಬೇಕಾಗಿದೆ. ಕಾಮಗಾರಿಗಳ ಪಟ್ಟಿ ರೂಪಿಸುವ ಹಂತದಲ್ಲಿ ಗ್ರಾಮ ಸಭೆಗಳನ್ನು ಸರಿಯಾಗಿ ನಡೆಸದೆ, ಪಂಚಾಯಿತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ವಿವಿಧ ಇಲಾಖೆಗಳು ಪ್ರತ್ಯೇಕವಾಗಿ ಕಾರ್ಯಯೋಜನೆಯನ್ನು ರೂಪಿಸಿವೆ. ಆತುರಾತುರವಾಗಿ ಜಾರಿಗೊಳಿಸಲು ಮುಂದಾಗಿವೆ. ಹೀಗೆ ಮಾಡದೆ ಗಣಿಭಾದಿತ ಪ್ರದೇಶಗಳ ಜನರಿಗೆ ಈಗಾಗಲೇ ರೂಪಿಸಲಾಗಿರುವ ಮತ್ತು ಅನುಷ್ಠಾನಗೊಳಿಸಲು ಸಿದ್ದವಾಗಿರುವ ಕಾಮಗಾರಿಗಳ ಬಗ್ಗೆ ಮಾಹಿತಿಗಳನ್ನು ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಗಣಿ ಭಾದಿತ ಪ್ರದೇಶಗಳಲ್ಲಿ ಪ್ರಮುಖವಾಗಿ ಅರಣ್ಯ ಹಾಳಾಗಿದೆ. ಈ ಪ್ರದೇಶಗಳನ್ನು ತಮ್ಮ ಮೊದಲಿನ ಸ್ಥಿತಿಗೆ ತರುವ ಮೂಲಕ ಅರಣ್ಯಗಳನ್ನು ಪುನಶ್ಚೇತನಗೊಳಿಸಬೇಕಾಗಿದೆ. ಇದನ್ನು ಸಮಗ್ರವಾಗಿ, ವೈಜ್ಞಾನಿಕವಾಗಿ, ಗ್ರಾಮ ಅರಣ್ಯ ಸಮಿತಿಗಳ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಬೇಕು. ಸ್ಥಳೀಯ ಅರಣ್ಯ ಪ್ರಭೇದಗಳನ್ನು, ಗಿಡ ಮೂಲಿಕೆಗಳನ್ನು ಮರುಸ್ಥಾಪಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಗಣಿಗಾರಿಕೆಯಿಂದ ಕೃಷಿ ಭೂಮಿ ಸಂಪೂರ್ಣವಾಗಿ ಹಾಳಾಗಿದೆ. ಮಣ್ಣಿನ ಆರೋಗ್ಯ ಪರೀಕ್ಷೆಗಳನ್ನು ವ್ಯಾಪಕವಾಗಿ ಮಾಡಿ ಅದರ ಪುನಶ್ಚೇತನಕ್ಕೆ ಆದ್ಯತೆ ನೀಡಬೇಕು. ರೈತರು ಬೆಳೆಯುವ ಕೃಷಿ ಉತ್ಪನ್ನಗಳ ಬಲವರ್ಧನೆಗೆ ಅವಕಾಶ ಕಲ್ಪಿಸಬೇಕಾಗಿದೆ. ಬಲವರ್ಧಿತ ಉತ್ಪನ್ನಗಳ ಮಾರುಕಟ್ಟೆ ಜಾಲವನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ರೈತರು, ಕುರಿಗಾಹಿಗಳು, ದನಗಾಹಿಗಳೊಂದಿಗೆ ಸಮಾಲೋಚನೆ ನಡೆಸಿ ಕೃಷಿ, ಹೈನುಗಾರಿಕೆ, ಪ್ರಾಣಿಸಾಕಾಣಿಕೆ, ತೋಟಗಾರಿಕಾ ಯೋಜನೆಗಳನ್ನು ರೂಪಿಸಲು ಆದ್ಯತೆಯನ್ನು ನೀಡಬೇಕು ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಮಲ್ಲಿಕಾರ್ಜುನ್ ಆಗ್ರಹಿಸಿದರು.

ಕುಂಟೆ, ಕಟ್ಟೆ, ಕೆರೆಗಳು, ಕೊಳವೆ ಬಾವಿಗಳು ಹಾಳಾಗಿವೆ. ಹಳ್ಳಗಳ ಹರಿವು ಅಸ್ತವ್ಯಸ್ತಗೊಂಡಿದೆ. ಈ ಬದಲಾವಣೆಗಳಿಂದ ಅಂತರ್ಜಲದ ಹರಿವಿನಲ್ಲಿಯೂ ಏರುಪೇರಾಗಿದೆ. ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿ ತಾಲ್ಲೂಕಿನಲ್ಲಿ ಅಂತರ್ಜಲವನ್ನು ಅತಿಯಾಗಿ ಶೋಷಿಸಲಾಗಿದೆ ಎಂದು ಸರ್ಕಾರದ ವರದಿಗಳು ಹೇಳುತ್ತಿವೆ. ಈ ಪ್ರದೇಶದ ಬಹುಪಾಲು ಕೆರೆಗಳು ಬತ್ತಿವೆ. ಇವುಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು. ಈ ಎಲ್ಲ ಯೋಜನೆಗಳನ್ನು ಜಾರಿಗೊಳಿಸುವಾಗ ಜನರ ಸಹಭಾಗಿತ್ವವನ್ನು ಪಡೆಯಬೇಕು ಎಂದು ಹೇಳಿದರು. ಸಾಮಾಜಿಕ ಹೋರಾಟಗಾರ ಪಂಡಿತ್ ಜವಾಹರ್ ನಿಯೋಗದಲ್ಲಿ ಇದ್ದರು.

ಪಂಚಾಯಿತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ

ಗಣಿಭಾದಿತ ಪ್ರದೇಶಗಳ ಜನರ ಜೀವನ ಹಾಳಾಗಿದೆ. ಅವರ ಆರ್ಥಿಕ ಸ್ಥಿತಿಗತಿ ಕೆಳಮುಖವಾಗಿವೆ. ಗಣಿಭಾದಿತ ಪ್ರದೇಶದ ಪಂಚಾಯಿತಿಗಳಲ್ಲಿ ಗ್ರಾಮ ಸಭೆಗಳನ್ನು ನಡೆಸಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಪಾರದರ್ಶಕವಾಗಿ ಪುನಶ್ಚೇತನ ಮತ್ತು ಪುನರ್ವಸತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಜನಸಂಗ್ರಾಮ ಪರಿಷತ್ತಿನ ಸಿ.ಯತಿರಾಜು ಆಗ್ರಹಿಸಿದರು.

ಯೋಜನೆಗೆ ಸಂಬಂಧಿಸಿದ ಅನುದಾನವನ್ನು ಗಣಿಭಾದಿತ ಪ್ರದೇಶಗಳ ಅಭಿವೃದ್ಧಿಗೆ ಮಾತ್ರ ಪರಿಣಾಮಕಾರಿಯಾಗಿ ಬಳಸಬೇಕು. ಈ ಪ್ರದೇಶದ ವ್ಯಾಪ್ತಿಯ ಹೊರಗಿರುವ ಪ್ರದೇಶಗಳಲ್ಲಿ ಈ ಹಣವನ್ನು ಬಳಸಬಾರದು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.