ADVERTISEMENT

ಜಮೀನು ವಿವಾದಕ್ಕೆ ಮನೆ ಬಲಿ

​ಪ್ರಜಾವಾಣಿ ವಾರ್ತೆ
Published 23 ಮೇ 2012, 5:10 IST
Last Updated 23 ಮೇ 2012, 5:10 IST

ತುರುವೇಕೆರೆ: ಜಮೀನು ವಿವಾದದ ಹಿನ್ನೆಲೆಯಲ್ಲಿ ಆಸ್ತಿಯೊಂದನ್ನು ಸ್ವಾಧೀನ ಪಡಿಸಿಕೊಳ್ಳಲು ಆ ಜಾಗದಲ್ಲಿದ್ದ ಮನೆ ಕೆಡವಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕುಟುಂಬವನ್ನು ಬೀದಿಪಾಲು ಮಾಡಿರುವ ಅಮಾನವೀಯ ಘಟನೆ ದಂಡಿನಶಿವರ ಹೋಬಳಿ ಬಿ.ಸಿ.ಕಾವಲ್‌ನಲ್ಲಿ ನಡೆದಿದೆ.

ಬಿ.ಸಿ.ಕಾವಲ್‌ನ ಬಿ.ವಿ.ಸುರಪುರ ಹಾಗೂ ಮಹದೇವಯ್ಯ ನಡುವೆ ಹಲ ವರ್ಷಗಳಿಂದ ಜಮೀನು ವಿವಾದವಿತ್ತು. ಸುರಪುರ ಈ ಸಂಬಂಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯ ಸುರಪುರ ಅವರಿಗೆ ಜಮೀನು ಸೇರಬೇಕು ಎಂದು ತೀರ್ಪು ನೀಡಿತ್ತು. ಆದರೆ ಸುರುಪುರ ಜಮೀನು ಸಂಪೂರ್ಣ ತಮ್ಮ ಸ್ವಾಧೀನದಲ್ಲಿದೆ ಎಂದು ತಪ್ಪು ಮಾಹಿತಿ ನೀಡಿದ್ದರು ಎನ್ನಲಾಗಿದೆ.

ಮಹದೇವಯ್ಯ ವಾಸವಾಗಿದ್ದ ಮನೆ ಸ್ವಾಧೀನಪಡಿಸಿಕೊಳ್ಳಲು ಸುರುಪುರ ಕಾನೂನಿನ ಮೊರೆ ಹೋಗಿ ಪೊಲೀಸರ ರಕ್ಷಣೆ ಕೇಳಿದ್ದರು. ಜಿಲ್ಲಾಧಿಕಾರಿ ಕಚೇರಿಯಿಂದ ವಿವಾದ ಬಗೆಹರಿಸುವಂತೆ ತಹಶೀಲ್ದಾರ್‌ರಿಗೆ ಸೂಚನೆ ನೀಡಲಾಗಿತ್ತು. ತಹಶೀಲ್ದಾರ್ ಸುರುಪುರ ತಮ್ಮ ಜಮೀನಿನ ಮೇಲೆ ಸ್ವಾಧೀನ ಪಡೆಯಲು ಪೊಲೀಸರ ರಕ್ಷಣೆ ನೀಡುವಂತೆ ಮನವಿ ಮಾಡಿದ್ದರು.

ಈ ಸಂಬಂಧ ಪೊಲೀಸ್ ಅಧಿಕಾರಿಗಳು ತನಿಖೆಗೆ ಹೋದ ಸಂದರ್ಭದಲ್ಲೇ ಸುರುಪುರ ಹಾಗೂ ಅವರ 70ಕ್ಕೂ ಹೆಚ್ಚು ಬೆಂಬಲಿಗರು ಸೋಮವಾರ ಸಂಜೆ ಮನೆಯಲ್ಲಿ ಮಲಗಿದ್ದ ಮಹದೇವಯ್ಯ ಅವರನ್ನು ಹೊರ ದಬ್ಬಿ ಮನೆಯಲ್ಲಿದ್ದ ವಸ್ತುಗಳನ್ನು ಆಚೆ ಎಸೆದು ಮನೆ ಧ್ವಂಸಗೊಳಿಸಿದ್ದಾರೆ.

ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್‌ಪಿ ಶಿವರುದ್ರಸ್ವಾಮಿ, ಮಹದೇವಯ್ಯ ಕುಟುಂಬದ ಅಹವಾಲು ಆಲಿಸಿದರು. ಇದು ಭೂ ವಿವಾದವಾದ್ದರಿಂದ ತಹಶೀಲ್ದಾರ್ ವಿವೇಚನೆಗೆ ಒಳಪಡುತ್ತದೆ. ನೀವೂ ಕೂಡ ನಿಮಗಾದ ಅನ್ಯಾಯದ ಬಗ್ಗೆ ದೂರು ದಾಖಲಿಸಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.