ADVERTISEMENT

ತುಮಕೂರಿನಲ್ಲಿ ಪ್ರತಿಭಟನೆಗಳ ಸರಣಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 8:50 IST
Last Updated 20 ಸೆಪ್ಟೆಂಬರ್ 2011, 8:50 IST
ತುಮಕೂರಿನಲ್ಲಿ ಪ್ರತಿಭಟನೆಗಳ ಸರಣಿ
ತುಮಕೂರಿನಲ್ಲಿ ಪ್ರತಿಭಟನೆಗಳ ಸರಣಿ   

ತುಮಕೂರು: ನಗರದಲ್ಲಿ ಸೋಮವಾರ ಪ್ರತಿಭಟನೆಗಳ ದಿನ. ನಗರದಲ್ಲಿ ನಾಲ್ಕು ಪ್ರತಿಭಟನೆಗಳು ನಡೆದವು. ಮರಳು ಗಣಿಗಾರಿಕೆ ವಿರೋಧಿ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಕೊರಟಗೆರೆಯಿಂದ ಕಾಲ್ನಡಿಗೆ ಜಾಥಾದಲ್ಲಿ ಬಂದರು. ಕೇಂದ್ರ ಸರ್ಕಾರದ ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು.

ಗುಜರಾಜ್ ಮುಖ್ಯಮಂತ್ರಿ ನರೇಂದ್ರ ಮೋದಿ ಉಪವಾಸ ಸತ್ಯಾಗ್ರಹ ಬೆಂಬಲಿಸಿ ನರೇಂದ್ರ ಮೋದಿ ವಿಚಾರ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ನಡೆಸಿದರು. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.

ಬಿಜೆಪಿ ವಿರೋಧ
ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಜಿಲ್ಲಾ ಬಿಜೆಪಿ, ಎತ್ತಿನ ಗಾಡಿಯ ಮೇಲೆ ಬೈಕ್ ಇಟ್ಟು ಮೆರವಣಿಗೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಪ್ರಸಾದ್, ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರ ಹಿಡಿದ ನಂತರ ಆರ್ಥಿಕ ವ್ಯವಸ್ಥೆ ಕುಸಿಯುತ್ತಿದೆ. ಆಡಳಿತದ ವಿಫಲತೆಯಿಂದಾಗಿ ಪೆಟ್ರೋಲ್ ಬೆಲೆ ಏರಿಕೆಗೆ ಕಾರಣ ಎಂದು ಟೀಕಿಸಿದರು.

ಪೆಟ್ರೋಲ್, ನಿತ್ಯ ಉಪಯೋಗಿ ವಸ್ತುಗಳ ಬೆಲೆ ಹೆಚ್ಚಳದಿಂದ ಸಾಮಾನ್ಯ ಜನರು ಮತ್ತು ಬಡವರು ಜೀವನ ದುಃಸ್ಥಿತಿಗೆ ತಲುಪಿದೆ. ಪ್ರಕೃತಿ ವಿಕೋಪ, ಬೆಲೆ ಹೆಚ್ಚಳದ ನಡುವೆ ಸಿಲುಕಿ ಜನರೆ ಕಂಗಾಲಾಗಿದ್ದಾರೆ ಎಂದು ಆಂತಕ ವ್ಯಕ್ತಪಡಿಸಿದರು.

ಪೆಟ್ರೋಲ್ ಬೆಲೆ ಏರಿಕೆಯನ್ನು ವಾಪಸ್ ಪಡೆಯದಿದ್ದರೆ ಪಕ್ಷ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಿದೆ. ಪೊಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರ ಅಧಿಕಾರ ಸಿಕ್ಕ ನಂತರ ಜನತೆಯ ಮೇಲೆ ಗದಾ ಪ್ರಹಾರ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಗಂಗಹನುಮಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಪ್ಪ, ಉಪಾಧ್ಯಕ್ಷರಾದ ಭೈರಪ್ಪ, ನಾಗರತ್ನಮ್ಮ ಇನ್ನಿತರ ಮುಖಂಡರು ಇದ್ದರು.

ಬೀದಿಗಿಳಿದ ಆಶಾ ಕಾರ್ಯಕರ್ತೆಯರು

ಕೆಲಸದ ಭದ್ರತೆ ಹಾಗೂ ಗೌರವ ಧನ ಹೆಚ್ಚಳಕ್ಕಾಗಿ ಒತ್ತಾಯಿಸಿ ರಾಜ್ಯ ಆಶಾ ಕಾರ್ಯಕರ್ತೆಯರ ಫೆಡರೇಷನ್ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಮಾಸಿಕ ವೇತನ ನಿಗದಿಗೊಳಿಸಬೇಕು. ಭವಿಷ್ಯ ನಿಧಿ, ಪಿಂಚಣೆ, ಕರೆನ್ಸಿ ಸಮೇತ ಮೊಬೈಲ್ ಮತ್ತಿತರ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿದರು.

ಟೌನ್‌ಹಾಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ತಮ್ಮ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು. ಬೇಡಿಕೆ ಈಡೇರಿಸದಿದ್ದರೆ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆ ನೇತೃತ್ವವನ್ನು ಫೆಡರೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸಾಮಣಿ, ಜಿಲ್ಲಾ ಕಾರ್ಯದರ್ಶಿ ಶೋಭಾ, ಜಿಲ್ಲಾ ಖಚಾಂಚಿ ಕೆ.ಎಚ್.ವಸಂತಾ, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಗಿರೀಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯೋಗೀಶ್, ಮುಖಂಡರಾದ ವಾಜಿದ್‌ಖಾನ್ ತೋವಿನ, ಎಂ.ಶಿವಣ್ಣ, ವಾಸುದೇವಕುಮಾರ್, ಚಿನ್ನಪ್ಪ ಇತರರು ಇದ್ದರು.

ನರೇಂದ್ರ ಮೋದಿಗೆ ಬೆಂಬಲ
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನಡೆಸುತ್ತಿರುವ ಸದ್ಭಾವನಾ ನಿರಶನಕ್ಕೆ ಬೆಂಬಲ ಸೂಚಿಸಿ ನರೇಂದ್ರ ಮೋದಿ ವಿಚಾರ ವೇದಿಕೆ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಿದರು.

ಸದ್ಭಾವನಾ ಉಪವಾಸವನ್ನು ದೇಶದ ಎಲ್ಲ ಜನರು ಬೆಂಬಲಿಸಬೇಕೆಂದು ವೇದಿಕೆಯ ಟಿ.ಎಸ್.ನಿರಂಜನ ಹೇಳಿದರು. ಉಪವಾಸ ಸತ್ಯಾಗ್ರಹದಲ್ಲಿ ಟೂಡ ಸದಸ್ಯರಾದ ಜಿ.ಕೆ.ಶ್ರೀನಿವಾಸ್, ರವಿಶಂಕರ್, ಶಾಂತರಾಜು, ಆರಾಧನಾ ಸಮಿತಿ ಸದಸ್ಯರಾದ ಪ್ರೇಮಲತಾ, ರತ್ನಮ್ಮ, ಲೋಕೇಶ್, ಜಿ.ಎಲ್.ರವಿ, ಕಲ್ಯಾಣ ಕುಮಾರ್, ಕೃಷ್ಣಮೂರ್ತಿ ಇತರರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.