ತುಮಕೂರು: ಕೆಲವು ದಿನಗಳಿಂದ ದೆಹಲಿಯಲ್ಲಿ ಸಣ್ಣಗೆ ಚಳಿ ಬೀಸತೊಡಗಿದಂತೆ ತುಮಕೂರು ತೆಂಗಿನಕಾಯಿ ಮಾರುಕಟ್ಟೆಯಲ್ಲಿ ಸಣ್ಣನೆ ನಡುಕ ಆರಂಭಗೊಂಡಿದೆ. 15 ದಿನಗಳ ಹಿಂದಿನ ಬೆಲೆಗೆ ಹೋಲಿಸಿದರೆ ಈ ವಾರದ ಮಾರುಕಟ್ಟೆಯಲ್ಲಿ ಬೆಲೆ ಕೊಂಚ ಇಳಿಕೆ ಕಾಣತೊಡಗಿದೆ.
ಜಿಲ್ಲೆ ಕೊಬ್ಬರಿ ಜೊತೆಗೆ ತೆಂಗಿನ ಕಾಯಿಗೂ ಪ್ರಸಿದ್ಧಿ. ಆದರೆ ಸಾಮಾನ್ಯರು ತಿಳಿದಿರುವಂತೆ ಬೆಂಗಳೂರು ನಗರ ಪ್ರದೇಶ ಜಿಲ್ಲೆಯ ತೆಂಗಿನ ಮಾರುಕಟ್ಟೆ ಅಲ್ಲ. ಇಲ್ಲಿನ ಶೇ 90ರಷ್ಟು ತೆಂಗು ದೆಹಲಿ ಸುತ್ತಮುತ್ತ ಮಾರುಕಟ್ಟೆ ಸೃಷ್ಟಿಸಿಕೊಂಡಿದೆ. ಶೇ 80ರಷ್ಟು ದೆಹಲಿಯಲ್ಲಿ ಬಿಕರಿಯಾಗುತ್ತಿದೆ. ಉಳಿದ ಶೇ 20ರಷ್ಟಕ್ಕೆ ಜೈಪುರ, ಜಲಂಧರ್, ಹರಿಯಾಣ, ಪಂಜಾಬ್ ಮಾರುಕಟ್ಟೆ ಒದಗಿಸಿದೆ.
ದೆಹಲಿ ಜನತೆಗೆ ತುಮಕೂರು ತೆಂಗಿನಕಾಯಿ ಅಚ್ಚುಮೆಚ್ಚು. ಆದರೆ ಇಲ್ಲಿ ತೆಂಗನ್ನು ಎಣ್ಣೆಗೆ ಬಳಸುವುದಿಲ್ಲ; ತಿನ್ನಲು ಬಳಸುತ್ತಾರೆ. ಬಸ್ ನಿಲ್ದಾಣ, ಮೆಟ್ರೊ ಸ್ಟೇಷನ್, ಟ್ರಾಫಿಕ್ ಸಿಗ್ನಲ್, ಜನನಿಬಿಡ ಪ್ರದೇಶಗಳಲ್ಲೂ ನಮ್ಮಲ್ಲಿ ಬೀದಿ ಬೀದಿಗಳಲ್ಲಿ ಸೌತೆಕಾಯಿ ಮಾರಿದಂತೆ ತೆಂಗಿನಕಾಯಿ ಸಣ್ಣಸಣ್ಣ ಹೋಳು ಮಾರುತ್ತಾರೆ.
ದೆಹಲಿಯ ಅಕ್ಷರಧಾಮ ದೇವಸ್ಥಾನದ ಮುಂಭಾಗ, ರೈಲು ನಿಲ್ದಾಣ, ರಾಜ್‌ಘಾಟ್, ಇತರ ಪ್ರದೇಶದಲ್ಲಿ ತೆಂಗಿನ ಹೋಳಿನ ಮಾರಾಟ ಕಾಣಬಹುದು. ಹೀಗಾಗಿ ದೆಹಲಿ ಜನ ತೆಂಗು ಸೇವಿಸಿದಷ್ಟು ತುಮಕೂರಿನಲ್ಲಿ ಬೆಲೆ ಹೆಚ್ಚುತ್ತಾ ಸಾಗುತ್ತದೆ. ಚಳಿಗಾಲದಲ್ಲಿ ತೆಂಗು ತಿನ್ನುವುದು ಕಡಿಮೆ. ಇದು ಕೂಡ ಬೆಲೆ ಮೇಲೆ ಪರಿಣಾಮ ಬೀರುತ್ತದೆ.
ದೆಹಲಿಯಲ್ಲಿ ಈಗಷ್ಟೆ ಚಳಿ ಆರಂಭಗೊಂಡಿದ್ದು ಬೇಡಿಕೆ ಕಡಿಮೆಯಾಗಲು ಕಾರಣವಾಗಿದೆ. ಹೀಗಾಗಿ ಹದಿನೈದು ದಿನದ ಹಿಂದೆ ಸಾವಿರಕ್ಕೆ ರೂ. 15000ರಿಂದ 15500ಇದ್ದ ಬೆಲೆ ಈ ವಾರ ರೂ. 12000ರಿಂದ 13000ಕ್ಕೆ ಕುಸಿದಿದೆ. ತುಮಕೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ ಮದುವೆ ತಾಂಬೂಲದ ಜೊತೆ ನೀಡುವ ಸಣ್ಣಗಾತ್ರದ ತೆಂಗಿನಕಾಯಿ 100ಕ್ಕೆ ಬೆಲೆ ರೂ. 650–700 ಇತ್ತು.
ಸ್ಥಿರತೆಯತ್ತ ಕೊಬ್ಬರಿ ಬೆಲೆ: ಕೊಬ್ಬರಿ ಎಣ್ಣೆ ಧಾರಣೆ ಏರಿಕೆಯಿಂದ ಜಿಲ್ಲೆಯ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ ಹೆಚ್ಚಳ ಕಂಡಿದೆ. ಆದರೆ, ಮಿಠಾಯಿ ಸೇರಿದಂತೆ ಕೊಬ್ಬರಿ ಬಳಸಿ ಮಾಡುವ ಸಿಹಿ ತಿನಿಸುಗಳಿಗೆ ಬೇಡಿಕೆ ಬಾರದೆ ಬೆಲೆಯಲ್ಲಿ ಹೆಚ್ಚಳ ನಿರೀಕ್ಷಿಸುವಂತಿಲ್ಲ ಎಂಬುದು ಮಾರುಕಟ್ಟೆ ತಜ್ಞರ ಅಭಿಮತ. ಸದ್ಯಕ್ಕೆ ಬೆಲೆ ಹೆಚ್ಚದಿದ್ದರೂ ಇಳಿಯುವ ಸಾಧ್ಯತೆ ಕಡಿಮೆ ಮಾರುಕಟ್ಟೆ ತಜ್ಞರು ಹೇಳುತ್ತಾರೆ.
ಕೊಬ್ಬರಿ ಬೆಲೆಯಲ್ಲಿ ಸ್ಥಿರತೆ ಕಂಡುಬರುತ್ತಿದೆ. ಕಳೆದ ವಾರ ಕ್ವಿಂಟಲ್‌ಗೆ ರೂ. 7800 ವರೆಗೂ ಹೆಚ್ಚಿ ಬೆಳೆಗಾರರ ಕಣ್ಣಲ್ಲಿ ನಗೆಯ ಮಿಂಚು ಮೂಡಿಸಿದ್ದ ಕೊಬ್ಬರಿ ಬೆಲೆ ಮತ್ತೆ ಕುಸಿದಿದ್ದು ರೂ. 7400ಕ್ಕೆ ಬಂದು ನಿಂತಿದೆ.
ಶೇಂಗಾ ನಾಡಿನ ತಲ್ಲಣ: ಶೇಂಗಾ ಬೆಳೆಗಾರರ ಮೊಗದಲ್ಲೂ ನಗು ಮೂಡಿಲ್ಲ. ಬರಗಾಲದಿಂದಾಗಿ ಗುಣಮಟ್ಟದ ಶೇಂಗಾ ಮಾರುಕಟ್ಟೆಗೆ ಬರುತ್ತಿಲ್ಲ. ಇದೇ ಕಾರಣಕ್ಕಾಗಿ ಬೆಲೆಯೂ ಏರುತ್ತಿಲ್ಲ. ತುಮಕೂರು ಮಾರುಕಟ್ಟೆಗೆ ಅಲ್ಪ ಪ್ರಮಾಣದಲ್ಲಿ ಮಾತ್ರ ಶೇಂಗಾ ಬರುತ್ತಿದೆ. ಶಿರಾ ಮಾರುಕಟ್ಟೆಯಲ್ಲಿ ಆವಕ ಹೆಚ್ಚಿದೆ. ಕ್ವಿಂಟಲ್‌ಗೆ ರೂ. 3300–4000 ಬೆಲೆ ಇತ್ತು. ಕಳೆದ ವಾರಕ್ಕೆ ಹೋಲಿಸಿದರೆ ರೂ. 200ರಷ್ಟು ಬೆಲೆಯಲ್ಲಿ ಇಳಿಕೆ ಕಂಡಿದೆ.
ಮೊದಲ ವಾರದಲ್ಲಿ ಗುಣಮಟ್ಟದ ಶೇಂಗಾ ಮಾರುಕಟ್ಟೆ ಪ್ರವೇಶಿತು. ಆದರೆ ಈಗ ಕಳಪೆ ಗುಣಮಟ್ಟದ ಶೇಂಗಾ ಮಾರುಕಟ್ಟೆಗೆ ಬರುತ್ತಿದೆ. ಜಿಲ್ಲೆಯಲ್ಲೇ ಶೇಂಗಾ ಮಾರುಕಟ್ಟೆಗೆ ಹೆಸರಾಗಿರುದ ಶಿರಾ ಎಪಿಎಂಸಿಯಲ್ಲೂ ಇದೇ ಕಥೆ ಮುಂದುವರೆದಿದೆ. ತುಮಕೂರಿಗೆ ಹೋಲಿಸಿದರೆ ಬೆಲೆ ಕೊಂಚ ಏರಿಕೆ ದಾಖಲಿಸಿತು. ಇಲ್ಲೂ ಗುಣಮಟ್ಟದ ಶೇಂಗಾ ಬರುತ್ತಿಲ್ಲ.
ಉತ್ತಮ ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿ ರೈತರು ಹಿರಿಯೂರು ಮಾರುಕಟ್ಟೆಯತ್ತ ಹೆಜ್ಜೆ ಹಾಕಿದ್ದಾರೆ. ಹಿರಿಯೂರಿನಲ್ಲಿ ಕ್ವಿಂಟಲ್ ಶೇಂಗಾಕ್ಕೆ ಶಿರಾ ಮಾರುಕಟ್ಟೆಗಿಂತಲೂ ರೂ. 100–200 ಬೆಲೆ ಹೆಚ್ಚಬಹುದು ಎಂಬುದು ರೈತರ ನಂಬಿಕೆ.
‘ಬೆಂಬಲ’ ನಿರೀಕ್ಷೆಯಲ್ಲಿ ರಾಗಿ
ರಾಗಿ ಈಗ ಮಾರುಕಟ್ಟೆಯಲ್ಲಿ ಮೌಲ್ಯ ಕಳೆದುಕೊಂಡಿದೆ. ಕಳೆದ ವರ್ಷ ಕ್ವಿಂಟಲ್‌ಗೆ ರೂ. 3500 ತಲುಪಿ ದಾಖಲೆ ಸೃಷ್ಟಿಸಿ ಇದೀಗ ಪಾತಾಳ ತಲುಪಿದೆ. ಅಕಾಲಿಕ ಮಳೆ ರಾಗಿ ಗುಣಮಟ್ಟದ ಮೇಲೂ ಪರಿಣಾಮ ಬೀರಿದ್ದು ಸೋಮವಾರ ತುಮಕೂರು ಎಪಿಎಂಸಿಯಲ್ಲಿ ಮಳೆಗೆ ಸಿಲುಕಿ ಬಣ್ಣ ಕಳೆದುಕೊಂಡಿದ್ದ ರಾಗಿ ಬೆಲೆ ಕ್ವಿಂಟಲ್‌ಗೆ ರೂ. 1440–1450ಕ್ಕೆ ಮಾರಾಟವಾಯಿತು. ಅತ್ಯುತ್ತಮ ಗುಣಮಟ್ಟದ ಕೆಂಪು ರಾಗಿ ಬೆಲೆ ರೂ. 1500–1750 ನಡುವೆ ಹೊಯ್ದಾಡುತ್ತಿತ್ತು. ಬೆಂಬಲ ಬೆಲೆಗೆ ಕೊಳ್ಳುವ ರಾಜ್ಯ ಸರ್ಕಾರದ ಭರವಸೆ ಇನ್ನೂ ಈಡೇರಿಲ್ಲ.
ಬೆಂಬಲ ಬೆಲೆ ನೀಡಿ ಖರೀದಿಸಿದರೆ ಕೋಳಿ ಫೀಡ್ಸ್‌ಗೆ ಹೋಗುತ್ತಿರುವ ರಾಗಿ ಬೆಲೆಯೇ 1800 ದಾಟುತ್ತಿತ್ತು. ಗುಣಮಟ್ಟದ ರಾಗಿ ಬೆಲೆ ರೂ. 2000 ಮೀರುತ್ತಿತ್ತು ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.