ADVERTISEMENT

ಧರ್ಮದ ತಾತ್ವಿಕ ಶಕ್ತಿ ಅರಿವಾಗಲಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2011, 8:50 IST
Last Updated 23 ಏಪ್ರಿಲ್ 2011, 8:50 IST

ತಿಪಟೂರು: ಧರ್ಮದ ತಾತ್ವಿಕ ಶಕ್ತಿಯನ್ನು ಪುನರುತ್ಥಾನಗೊಳಿಸುವ ಅಗತ್ಯವಿದೆ ಎಂದು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಇಂದಿರಾ ನಗರದ ರೇಣುಕಾಚಾರ್ಯ ಮಂಗಳ ಮಂದಿರ ಆವರಣದಲ್ಲಿ ಈಚೆಗೆ ನಡೆದ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಧರ್ಮ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, ಎಲ್ಲೆಡೆ ಸ್ವಾರ್ಥ ಮತ್ತು ಸಂಕುಚಿತ ಮನೋಭಾವ ತಾಂಡವವಾಡುತ್ತಿದ್ದು, ಶಾಂತಿ, ನೆಮ್ಮದಿ ದೂರವಾಗುತ್ತಿದೆ ಎಂದರು.

ಆರೋಗ್ಯಕರ ಸಮಾಜ ಸ್ಥಾಪಿಸಲು ಧರ್ಮಶಕ್ತಿ ಮುಖ್ಯ. ಉಜ್ವಲ ಜೀವನಕ್ಕೆ ಧರ್ಮಾಚರಣೆ ಅವಶ್ಯಕ. ರೇಣುಕಾಚಾರ್ಯರು ಜಾತಿ-ಮತಗಳ ಸಂಕೋಲೆ ಕಿತ್ತೆಸೆದು ಮಾನವೀಯ ಸಂಬಂಧ ಗಟ್ಟಿಗೊಳಿಸುವ ಕಾರ್ಯ ಮಾಡಿದ್ದಾರೆ.

ರೇಣುಕರು ತೋರಿಸಿಕೊಟ್ಟ ಮಾರ್ಗದಲ್ಲೆ ಹಲವರು ಮುಂದುವರಿದು, ಅನೇಕ ಸಾಧನೆಗೈದಿದ್ದಾರೆ. ಇಂದಿಗೂ ರೇಣುಕರು ಬೋಧಿಸಿದ ತತ್ವ, ಹಿತನುಡಿಗಳೇ ಸಮಾಜದಲ್ಲಿ ಪ್ರತಿಧ್ವನಿಸುತ್ತಿವೆ . ಈ ಎಲ್ಲ ಅಂಶಗಳಿಂದಲೆ ವೀರಶೈವ ಧರ್ಮ ಸಂಸ್ಕೃತಿ ಸದಾ ಸಕಲರ ಹಿತ ಬಯಸುತ್ತದೆ ಎಂದರು.

ಕುಪ್ಪೂರು ಗದ್ದಿಗೆ ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ದೊಡ್ಡಗುಣಿ, ನೊಣವಿನಕೆರೆ,  ತಿಪಟೂರು, ಹೊನ್ನವಳ್ಳಿ, ಮಾದಿಹಳ್ಳಿ, ಅಂಬಲದೇವರಹಳ್ಳಿ ಮಠದ ಮಠಾಧೀಶರು ಪಾಲ್ಗೊಂಡಿದ್ದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಸಿ.ನಾಗೇಶ್ ಮಾತನಾಡಿ, ರೇಣುಕರು ಜಗತ್ತಿಗೆ ನೀಡಿದ ತತ್ವ-   ಆದರ್ಶಗಳನ್ನು ನಮ್ಮ ಸಮಾಜ ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕಲ್ಪತರು ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಬಸವಯ್ಯ ಸಮಾರಂಭ ಉದ್ಘಾಟಿಸಿದರು. ಮಾಜಿ ಶಾಸಕ ಬಿ.ನಂಜಾಮರಿ ಮತ್ತಿತರರು ಇದ್ದರು. ಡಾ. ಕೆ.ಎಸ್.ಗಂಗಾಧರಪ್ಪ ಉಪನ್ಯಾಸ ನೀಡಿದರು. ಟಿ.ಎಸ್.ಸದಾಶಿವಯ್ಯ ಸ್ವಾಗತಿಸಿದರು. ಶೋಭಾ ಜಯದೇವ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.