ADVERTISEMENT

ನಗರ ಬಸ್ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 9:10 IST
Last Updated 19 ಫೆಬ್ರುವರಿ 2011, 9:10 IST

ತುಮಕೂರು: ಕೆಎಸ್‌ಆರ್‌ಟಿಸಿ ದೇಶದಲ್ಲಿಯೇ ಗುಣಮಟ್ಟಕ್ಕೆ ಮಾದರಿಯಾಗಿದ್ದು, 30 ರಾಷ್ಟ್ರೀಯ ಪ್ರಶಸ್ತಿ ಪಡೆದಿದೆ ಎಂದು ಸಾರಿಗೆ ಸಚಿವ ಆರ್.ಅಶೋಕ್ ಹೇಳಿದರು. ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ನೂತನ ನಗರ ಸಾರಿಗೆ ಬಸ್‌ಗಳಿಗೆ ಚಾಲನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೆಎಸ್‌ಆರ್‌ಟಿಸಿ ಗುಣಮಟ್ಟಕ್ಕೆ ವಿಶ್ವಬ್ಯಾಂಕ್ ಶ್ಲಾಘಿಸಿದ್ದು, ಅಭಿವೃದ್ಧಿಗಾಗಿ ರೂ. 20 ಕೋಟಿ ಅನುದಾನ ನೀಡಿದೆ ಎಂದು ಹೇಳಿದರು.

ಇಡೀ ದೇಶದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಗುಜರಾತ್ ಮಾದರಿ ಎಂಬ ಹೆಸರಿದೆ. ಆದರೆ ಸಾರಿಗೆ ಇಲಾಖೆಯಲ್ಲಿ ಮಾತ್ರ ಕರ್ನಾಟಕ ಮಾದರಿಯಾಗಿದೆ. ಮೊಬೈಲ್ ಮೂಲಕ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಸೇರಿದಂತೆ ಇಲಾಖೆಯನ್ನು ಆಧುನೀಕರಣಗೊಳಿಸಲಾಗಿದೆ. ಯಾವುದೇ ನಗರದ ಅಭಿವೃದ್ಧಿಯಲ್ಲಿ ರಸ್ತೆ ಮತ್ತು ಬಸ್ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಕೆಎಸ್‌ಆರ್‌ಟಿಸಿ ವತಿಯಿಂದ ತುಮಕೂರು ವಿಭಾಗಕ್ಕೆ ರೂ. 6.8 ಕೋಟಿ ನೀಡಲಾಗಿದೆ. 10 ನಗರ ಸಾರಿಗೆ ಬಸ್‌ಗಳಿಗೆ ರೂ. 1.5 ಕೋಟಿ, ಅಂತರಸನಹಳ್ಳಿಯಲ್ಲಿ 2ನೇ ಘಟಕ ನಿರ್ಮಾಣಕ್ಕೆ ರೂ. 3.5 ಕೋಟಿ, ವಿಭಾಗೀಯ ಕಾರ್ಯಾಗಾರಕ್ಕೆ ರೂ. 1.8 ಕೋಟಿ ನೀಡಲಾಗಿದೆ. ಅಲ್ಲದೆ ಶಾಸಕ ಎಸ್.ಶಿವಣ್ಣ ಕೋರಿಕೆಯಂತೆ ಮತ್ತೆ 20 ನಗರ ಸಾರಿಗೆ ಬಸ್‌ಗಳನ್ನು ನೀಡಲಾಗುವುದು ಎಂದು ಹೇಳಿದರು.

ತುಮಕೂರು- ಬೆಂಗಳೂರು ನಡುವೆ ಮುಂದಿನ ಒಂದು ವಾರದಲ್ಲಿ ವೊಲ್ವೊ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲಾಗುವುದು. ಕಳೆದ ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ 392 ಹೆಚ್ಚುವರಿ ರೂಟ್‌ಗಳಲ್ಲಿ ಬಸ್ ನೀಡಲಾಗಿದೆ. ಹುಲಿಯೂರುದುರ್ಗದಲ್ಲಿ ರೂ. 60 ಲಕ್ಷ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ಸ್ಥಾಪನೆಗೆ ಹಣ ನೀಡಲಾಗಿದೆ ಎಂದು ಹೇಳಿದರು. ಶಾಸಕ ಎಸ್.ಶಿವಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರ ಬಸ್ ನಿಲ್ದಾಣ ನಿರ್ಮಾಣಕ್ಕೆ 2 ಎಕರೆ ಜಾಗ ಅಗತ್ಯವಿದೆ. ಇದಕ್ಕಾಗಿ ಶೀಘ್ರ ಹಣ ನೀಡಬೇಕು. ಅಲ್ಲದೆ ಇನ್ನೂ 30 ನಗರ ಸಾರಿಗೆ ಬಸ್‌ಗಳನ್ನು ಒದಗಿಸಬೇಕೆಂದು ಕೋರಿದರು.

ಸಿದ್ದಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿ ನಗರ ಬಸ್‌ಗಳಿಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಮುನಿರಾಜು, ವೈ.ಎ.ನಾರಾಯಣಸ್ವಾಮಿ, ಮೇಯರ್ ಯಶೋಧ ಗಂಗಪ್ಪ, ಜಿ.ಪಂ. ಅಧ್ಯಕ್ಷ ಡಾ.ರವಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಶ್ರೀಧರಮೂರ್ತಿ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಗೌರವಗುಪ್ತ, ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಎಸ್ಪಿ ಡಾ.ಪಿ.ಎಸ್.ಹರ್ಷ ಮುಂತಾದವರು ಭಾಗವಹಿಸಿದ್ದರು.

ನಗರ ಸಾರಿಗೆಗೆ ಸ್ವಾಮೀಜಿ ಹೆಸರು
ತುಮಕೂರು ನಗರ ಸಾರಿಗೆ ಬಸ್‌ಗಳಿಗೆ ಸಿದ್ದಗಂಗಾ ಡಾ.ಶಿವಕುಮಾರ ಸ್ವಾಮೀಜಿ ಹೆಸರಿಡಲಾಗುವುದು ಎಂದು ಸಾರಿಗೆ ಸಚಿವ ಆರ್.ಆಶೋಕ್ ಘೋಷಿಸಿದರು. ಶುಕ್ರವಾರ ನಗರ ಸಾರಿಗೆ ಬಸ್‌ಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಿದ್ದಗಂಗಾ ಸ್ವಾಮೀಜಿ ನಗರ ಸಾರಿಗೆಗೆ ಚಾಲನೆ ನೀಡಲು ಬಸ್‌ನಲ್ಲಿಯೇ ಪ್ರಯಾಣ ಮಾಡಿದರು. ಅಲ್ಲದೆ ನಗರ ಸಾರಿಗೆಗೆ ಸಿದ್ದಗಂಗಾ ಸ್ವಾಮೀಜಿ ಹೆಸರಿಡುವುದು ಕೆಎಸ್‌ಆರ್‌ಟಿಸಿಗೆ ಗೌರವ ತರುವ ಕೆಲಸ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.